ತುಮಕೂರು ಜಿಲ್ಲೆಯಲ್ಲಿ 30 ಡೆಂಗ್ಯೂ ಪ್ರಕರಣ ಪತ್ತೆ..!!

ತುಮಕೂರು

ವಿಶೇಷ ವರದಿ: ಆರ್.ಎಸ್.ಅಯ್ಯರ್

    ತುಮಕೂರು ಜಿಲ್ಲೆಯಲ್ಲಿ 2019 ರ ಜನವರಿಯಿಂದ ಜುಲೈ 23 ರವರೆಗೆ ಒಟ್ಟು 30 ಡೆಂಗ್ಯೂ ಜ್ವರದ ಪ್ರಕರಣಗಳು ಪತ್ತೆ ಆಗಿವೆ. ಇದರಲ್ಲಿ ಈ ಜುಲೈ ತಿಂಗಳೊಂದರಲ್ಲೇ 22 ಪ್ರಕರಣಗಳು ಪತ್ತೆಗೊಂಡಿರುವುದು ಹಾಗೂ ತುಮಕೂರು ನಗರದಲ್ಲೇ ಅತಿ ಹೆಚ್ಚಿನ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿರುವ ಆತಂಕದ ಸಂಗತಿ ಬೆಳಕಿಗೆ ಬಂದಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯದ ಪ್ರಕರಣಗಳು ವರದಿಯಾಗಿಲ್ಲವೆಂಬುದೇ ಸದ್ಯಕ್ಕೆ ಸಮಾಧಾನದ ವಿಚಾರ.

    ತುಮಕೂರು ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಜನವರಿಯಿಂದ ಜುಲೈ 23 ರವರೆಗೆ ತುಮಕೂರು ತಾಲ್ಲೂಕಿನಲ್ಲಿ -14, ಕೊರಟಗೆರೆ ತಾಲ್ಲೂಕಿನಲ್ಲಿ -5, ಪಾವಗಡ ತಾಲ್ಲೂಕಿನಲ್ಲಿ -2, ಗುಬ್ಬಿ ತಾಲ್ಲೂಕಿನಲ್ಲಿ -2, ತಿಪಟೂರು ತಾಲ್ಲೂಕಿನಲ್ಲಿ -4 ಹಾಗೂ ಹೊರಗಿನ ಅಂದರೆ ಜಿಲ್ಲೆಯ ಗಡಿ ಪ್ರದೇಶದ (ಉದಾಹರಣೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ ಡಾಬಸ್‍ಪೇಟೆ) ಗ್ರಾಮಗಳಿಂದ ಇಲ್ಲಿಗೆ ಬಂದು ಪರೀಕ್ಷೆ ಮಾಡಿಸಿರುವ 3 ಪ್ರಕರಣಗಳು ಸೇರಿ ಒಟ್ಟು 30 ಪ್ರಕರಣಗಳು ಪತ್ತೆಯಾಗಿವೆ.

ಜುಲೈನಲ್ಲೇ ಅಧಿಕ

     ಗಂಭೀರ ವಿಷಯವೆಂದರೆ, ಈ 30 ಪ್ರಕರಣಗಳ ಪೈಕಿ ಅತಿಹೆಚ್ಚು ಅಂದರೆ 22 ಪ್ರಕರಣಗಳು ಈ ಜುಲೈ ತಿಂಗಳೊಂದರಲ್ಲೇ ಪತ್ತೆ ಆಗಿವೆ. ತುಮಕೂರು ತಾಲ್ಲೂಕು-10, ಕೊರಟಗೆರೆ ತಾಲ್ಲೂಕು-5, ಗುಬ್ಬಿ-2, ತಿಪಟೂರು-3 ಮತ್ತು ಇತರೆ ಜಿಲ್ಲೆಯ 2 ಪ್ರಕರಣಗಳು ಇದರಲ್ಲಿ ಸೇರಿವೆ. ಈವರೆಗೆ ಯಾವುದೇ ಪ್ರಾಣಾಪಾಯದ ಘಟನೆಗಳು ಸಂಭವಿಸಿಲ್ಲವೆಂಬುದು ಮಾತ್ರ ಸಮಾಧಾನದ ಸಂಗತಿ.

ನಗರದಲ್ಲೇ ಅಧಿಕ

      ಈ ಅಂಕಿಸಂಖ್ಯೆ ಗಮನಿಸಿದಾಗ ಥಟ್ಟನೆ ಗಮನ ಸೆಳೆಯುವುದು ತುಮಕೂರು ನಗರ. ತುಮಕೂರು ತಾಲ್ಲೂಕು ಎಂದಿದ್ದರೂ ತುಮಕೂರು ನಗರದಲ್ಲೇ 14 ಪ್ರಕರಣಗಳು ಕಂಡುಬಂದಿವೆ. ಈ 14 ರಲ್ಲಿ ಜುಲೈ ತಿಂಗಳಲ್ಲೇ 10 ಪ್ರಕರಣಗಳನ್ನು ಡೆಂಗ್ಯೂ ಎಂದು ಗುರುತಿಸಲಾಗಿದೆ.

     “ನೀರಿನ ಸಮಸ್ಯೆ ಅಧಿಕವಾಗಿರುವುದರಿಂದ ಸಹಜವಾಗಿಯೇ ನೀರಿನ ಶೇಖರಣೆಯೂ ಅನಿವಾರ್ಯವಾಗಿರುತ್ತದೆ. ಆದರೆ ನೀರಿನ ಶೇಖರಣೆಯ ವಿಷಯದಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸದಿರುವುದು ಸೊಳ್ಳೆಗಳ ವೃದ್ಧಿಗೆ ಕಾರಣವಾಗುತ್ತದೆ. ಇನ್ನು ವೈಯಕ್ತಿಕವಾಗಿ, ಮನೆಯ ಒಳಗೆ ಮತ್ತು ಸುತ್ತಮುತ್ತ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನೈರ್ಮಲ್ಯದ ವಿಷಯದಲ್ಲಿ ಮುತುವರ್ಜಿ ತೋರದಿರುವುದು ಸಹ ಸೊಳ್ಳೆಗಳ ಮೂಲಕ ರೋಗ ಹರಡಲು ಕಾರಣವಾಗುತ್ತದೆ. ಇದಲ್ಲದೆ ಇತರೆಡೆಗಳಿಗಿಂತ ಇಲ್ಲಿ ಜನಸಂಖ್ಯೆ ಅಧಿಕವಾಗಿದ್ದು, ವಲಸಿಗರೂ ಇರುವುದು ತುಮಕೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಲು ಕಾರಣ” ಎಂಬುದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ (ಡಿ.ವಿ.ಬಿ.ಡಿ.ಸಿ.ಒ.) ಡಾ. ಟಿ.ಎನ್.ಪುರುಷೋತ್ತಮ್ ಅವರ ಅಭಿಪ್ರಾಯ.

     “ಒಂದು ಸಣ್ಣ ಪ್ಲಾಸ್ಟಿಕ್ ಚೂರು ಬಿದ್ದಿದ್ದು ಅದರಲ್ಲಿ ಹಿಡಿಯಷ್ಟು ನೀರು ತುಂಬಿಕೊಂಡಿದ್ದರೂ, ಸೊಳ್ಳೆಗಳ ಸಂತಾನಾಭಿವೃದ್ಧಿಗೆ ಅದು ಸಾಕು. ಇಂತಹ ಅಸಂಖ್ಯಾತ ಸಣ್ಣಪುಟ್ಟ ನೀರು ನಿಲ್ಲುವ ಸ್ಥಳಗಳು ಲಭಿಸುವುದರಿಂದ ಸೊಳ್ಳೆಗಳು ಸಹಜವಾಗಿ ಹೆಚ್ಚುತ್ತವೆ. ಆದ್ದರಿಂದ ಮನೆಯೊಳಗೆ ನೀರಿನ ಸಂಗ್ರಹವಿದ್ದರೆ ಅದನ್ನು ಸೂಕ್ತವಾಗಿ ಮುಚ್ಚಿಡಬೇಕು. ಮನೆಯ ಒಳಗೆ ಮತ್ತು ಸುತ್ತಮುತ್ತ ಎಲ್ಲೂ ಸಹ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.

      ಖಾಲಿ ನಿವೇಶನಗಳಲ್ಲಿ ಕಸದ ರಾಶಿ ಬೀಳದಂತೆ ಕಟ್ಟೆಚ್ಚರ ವಹಿಸಬೇಕು. ನಿರ್ಮಾಣ ಹಂತದ ಕಟ್ಟಡಗಳಲ್ಲಿ ಸಹ ನೀರು -ಕಸ ಇಲ್ಲದಂತೆ ಗಮನಹರಿಸಬೇಕು. ಇವೆಲ್ಲವೂ ಯಾರೋ ಇನ್ನೊಬ್ಬರ ಕೆಲಸ ಎಂದು ಸುಮ್ಮನಿರುವಂತಿಲ್ಲ. ಇದು ಸಾಮೂಹಿಕ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರೂ ಕಾಳಜಿ ವಹಿಸಿ ಕೈಜೋಡಿಸಬೇಕು” ಎಂಬುದು ಅವರ ಸ್ಪಷ್ಟ ಸಲಹೆ.

      “ಡೆಂಗ್ಯೂ ಬಗ್ಗೆ ಅನಾವಶ್ಯಕವಾಗಿ ಗಾಬರಿಯಾಗುವುದೂ ಬೇಡ. ಅದೇ ಹೊತ್ತಿಗೆ ಉದಾಸೀನವೂ ಬೇಡ. ಆದರೆ ಅಗತ್ಯ ಮುನ್ನೆಚ್ಚರಿಕೆಗಳನ್ನು ಮಾತ್ರ ತಪ್ಪದೆ ಕೈಗೊಳ್ಳಲೇಬೇಕು” ಎಂಬುದು ಅವರ ಕಿವಿಮಾತು.

ಇಲ್ಲಿ ಮಾತ್ರ ದೃಢೀಕರಣ

      “ತುಮಕೂರು ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ `ಜಿಲ್ಲಾ ಪಬ್ಲಿಕ್ ಹೆಲ್ತ್ ಲ್ಯಾಬ್’ (ಡಿ.ಪಿ.ಎಚ್.ಎಲ್.) ಇದೆ. ಆರೋಗ್ಯ ಇಲಾಖೆಯಿಂದ ಇದು ನಿರ್ವಹಿಸಲ್ಪಡಲಿದೆ. ಇಲ್ಲಿ ಮಾತ್ರ ಎಲಿಸಾ ಬೇಸ್ಡ್ ಎನ್.ಎಸ್. ಒನ್ ಆನ್‍ಟಿಜೆಸ್ ಟೆಸ್ಟ್ ಮಾಡಲಾಗುವುದು. ಈ ಅತ್ಯಾಧುನಿಕ ಪರೀಕ್ಷೆ ಮಾಡುವ ಸೌಲಭ್ಯ  ತುಮಕೂರು ಜಿಲ್ಲೆಯಲ್ಲಿ ಇದೊಂದೇ ಕಡೆ ಮಾತ್ರ ಇದೆ. ಇಲ್ಲಿ ಮಾತ್ರ ಡೆಂಗ್ಯೂ ಬಗ್ಗೆ ದೃಢೀಕರಿಸಿ, ಅಧಿಕೃತವಾಗಿ ಪ್ರಕಟಿಸಲಾಗುವುದು. ಮಿಕ್ಕೆಲ್ಲ ಕಡೆಗಳಲ್ಲಿ ರಕ್ತ ಪರೀಕ್ಷೆ ಮಾಡಿದರೂ, ಅವುಗಳನ್ನು `ಶಂಕಿತ ಡೆಂಗ್ಯೂ’ ಎಂದಷ್ಟೇ ಪರಿಗಣಿಸಲಾಗುವುದು. ಪ್ರಸ್ತುತ ಜಿಲ್ಲೆಯಲ್ಲಿ ಕಾಣಿಸಿರುವ 30 ಡೆಂಗ್ಯೂ ಪ್ರಕರಣಗಳೂ ಇಲ್ಲೇ ದೃಢೀಕರಿಸಲ್ಪಟ್ಟಿವೆ” ಎಂದು ಡಾ.ಪುರುಷೋತ್ತಮ್ ಅವರು ಹೇಳುತ್ತಾರೆ.

ಪಾಲಿಕೆಯಿಂದ ಬಗಿಂಗ್’

      ಜಿಲ್ಲಾ ಆರೋಗ್ಯ ಇಲಾಖೆಯ ಸೂಚನೆ ಅನುಸಾರ ತುಮಕೂರು ಮಹಾನಗರ ಪಾಲಿಕೆಯು ಸೊಳ್ಳೆಗಳ ಹಾವಳಿಯ ನಾಶಕ್ಕೆ ಕಳೆದ ಸುಮಾರು 15 ದಿನಗಳಿಂದ “`ಭೂಮೀಕರಣ” (ಬಗಿಂಗ್) ಕಾರ್ಯವನ್ನು ಚುರುಕಾಗಿ ನಡೆಸುತ್ತಿದೆ.

      ಬಗಿಂಗ್‍ಗಾಗಿಯೇ ಒಟ್ಟು 4 ವಾಹನಗಳನ್ನು ಪಾಲಿಕೆಯು ಮೀಸಲಿರಿಸಿದೆ. ಇವುಗಳಿಗೆ ಬಗಿಂಗ್ ಯಂತ್ರವನ್ನು ಇರಿಸಲಾಗಿದೆ. 1 ರಿಂದ 9 ನೇ ವಾರ್ಡ್‍ಗೆ ಒಂದು, 10 ರಿಂದ 18 ನೇ ವಾರ್ಡ್‍ಗೆ ಒಂದು, 19 ರಿಂದ 27 ನೇ ವಾರ್ಡ್‍ಗೆ ಒಂದು, 28 ರಿಂದ 35 ನೇ ವಾರ್ಡ್‍ಗೆ ಒಂದು – ಈ ರೀತಿ ಒಟ್ಟು ನಾಲ್ಕು ವಾಹನಗಳನ್ನು ಬಗಿಂಗ್ ಮಾಡಲು ವಾರ್ಡ್‍ವಾರು ವಿಂಗಡಿಸಲಾಗಿದೆ. ಪ್ರತಿನಿತ್ಯ ಸಂಜೆ 5-30 ರಿಂದ ರಾತ್ರಿ 7-30 ರವರೆಗೂ ಈ ವಾಹನಗಳು  ಬಗಿಂಗ್ ಕಾರ್ಯವನ್ನು ನಡೆಸುತ್ತಿವೆ.

ಏನಿದು ಬಗಿಂಗ್?

     ಮುಸ್ಸಂಜೆಯಲ್ಲಿ ಈ ವಾಹನಗಳು ಬಿಳಿಬಣ್ಣದ ದಟ್ಟವಾದ ಹೊಗೆಯನ್ನು ಸೂಸುತ್ತ ಸಾಗುವುದನ್ನು ಎಲ್ಲರೂ ಗಮನಿಸಿರಬಹುದು. ಇದು ಬರಿ ಘಾಟು ವಾಸನೆಯನ್ನೂ ಹೊಂದಿರುತ್ತದೆ. ಜನರು ಮೂಗು ಮುಚ್ಚಿಕೊಂಡು ಓಡಾಡುತ್ತಾರೆ. ಅಂತಹ ಹೊಗೆ ಹೊರಸೂಸಲು ಈ ಯಂತ್ರಗಳಲ್ಲಿ ದ್ರಾವಣ ತುಂಬಿಸಲಾಗಿರುತ್ತದೆ. ಪ್ರತಿಯೊಂದು ಹೊಗೆಸೂಸುವ ಯಂತ್ರಕ್ಕೆ 15 ಲೀಟರ್ ಡೀಸೆಲ್ ಹಾಕಿ, ಅದಕ್ಕೆ 170 ಎಂ.ಎಲ್.ನಷ್ಟು ಪೈರೋಥ್ರಮ್ ಮತ್ತು ಮೆಲಾಥಿನ್ ಎಂಬ ರಾಸಾಯನಿಕದ ಮಿಶ್ರಣವನ್ನು ಬೆರೆಸಲಾಗುತ್ತದೆ.

    ಸದರಿ ಯಂತ್ರ ಚಾಲನೆಗೊಂಡಾಗ ಅದರೊಳಗೆ ಬೆಂಕಿ ಹೊತ್ತಿಕೊಂಡು ದಟ್ಟವಾದ ಹೊಗೆ ಹೊರಸೂಸಲಾರಂಭಿಸುತ್ತದೆ. 15 ಲೀಟರ್ ಡೀಸೆಲ್‍ಗೆ ಈ ಯಂತ್ರವು ಸುಮಾರು ಒಂದೂವರೆ ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ. ಸದರಿ ವಾಹನವು ಸುಮಾರು 10 ರಿಂದ 15 ಕಿಲೋಮೀಟರ್‍ನಷ್ಟು ಕ್ರಮಿಸುತ್ತದೆ. ಈ ಹೊಗೆಯಿಂದಾಗಿ ಈಗಾಗಲೇ ಬೆಳೆದಿರುವ (ಅಡಲ್ಟ್) ಸೊಳ್ಳೆಗಳು ಪ್ರಜ್ಞಾಹೀನವಾಗಿ ಕೆಳಕ್ಕೆ ಬೀಳುತ್ತವೆ. ಅಷ್ಟರ ಮಟ್ಟಿಗೆ ಈ ಬಗಿಂಗ್ ಕಾರ್ಯ ಸಹಕಾರಿಯಾಗುತ್ತದಷ್ಟೇ.

      ಈ ನಾಲ್ಕು ವಾಹನಗಳ ಹೊಗೆ ಯಂತ್ರಗಳಿಗಾಗಿ ಪ್ರತಿನಿತ್ಯ ಒಟ್ಟಾರೆ 60 ಲೀಟರ್‍ಗಳಷ್ಟು ಡೀಸೆಲ್ ಅನ್ನು ಬಳಸಲಾಗುತ್ತಿದೆ. ಇನ್ನು ಸದರಿ ವಾಹನಗಳ ಚಾಲನೆಗೆ ಡೀಸೆಲ್ ಬಳಸುವುದು ಪ್ರತ್ಯೇಕ.”ಇನ್ನು ಕಸವನ್ನು ವಿಂಗಡಿಸಿ ಒಯ್ಯುವ ನಿಟ್ಟಿನಲ್ಲಿ ಪಾಲಿಕೆ ಸಂಪೂರ್ಣ ಶ್ರಮ ಹಾಕುತ್ತಿದೆ. ಬೀದಿಬದಿ ಕಸ ಹಾಕುವವರಿಗೆ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸುವ ಮೂಲಕ ಅರಿವು ಮೂಡಿಸುತ್ತಿದೆ. ನಗರ ನೈರ್ಮಲ್ಯಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ” ಎಂಬುದು ಪಾಲಿಕೆಯ ಮೂಲಗಳ ವಿವರಣೆಯಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap