ಬೆಂಗಳೂರು:
ಮಳೆ ಕೊರತೆ ಹಾಗೂ ಬರದಿಂದ ಈಗಾಗಲೇ ಸಂಕಷ್ಟದಲ್ಲಿರುವ ರಾಜ್ಯಕ್ಕೆ ಗಾಯದ ಮೇಲೆ ಬರೆ ಎಂಬಂತೆ ತಮಿಳುನಾಡಿಗೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ತಲಾ 2.5 ಟಿಎಂಸಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚನೆ ನೀಡಿದೆ.
ದೆಹಲಿಯಲ್ಲಿ ಸೋಮವಾರ ಸಮಿತಿಯ ಸಭೆ ನಡೆಯಿತು. 7.61 ಟಿಎಂಸಿ ಬಾಕಿ ಜೊತೆಗೆ ಫೆಬ್ರವರಿಯಿಂದ ಮೇ ತಿಂಗಳವರೆಗೆ ಪ್ರತಿ ತಿಂಗಳು 2.5 ಟಿಎಂಸಿ ನೀರು ಹರಿಸಲು ಕರ್ನಾಟಕಕ್ಕೆ ಸೂಚಿಸಬೇಕೆಂದು ತಮಿಳುನಾಡು ಸಭೆಯಲ್ಲಿ ಒತ್ತಾಯಿಸಿತು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟಕದ ಅಧಿಕಾರಿಗಳು, 2023ರ ಜೂನ್ 1 ರಿಂದ 2024ರ ಫೆಬ್ರವರಿ 9ರವರೆಗೆ ಕರ್ನಾಟಕ ಕಾವೇರಿ ಕೊಳ್ಳದ 4 ಜಲಾಶಗಳಲ್ಲಿ 52.43ರಷ್ಟು ಒಳಹರಿವಿನ ಕೊರತೆಯಿದೆ. ಜೊತೆಗೆ ರಾಜ್ಯದಲ್ಲಿ ತೀವ್ರ ಬರವಿದೆ. ಹೀಗಾಗಿ, ನೀರು ಬಿಡುಗಡೆ ಸಾಧ್ಯವಿಲ್ಲ. ಸಂಕಷ್ಟ ಸೂತ್ರವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ವಾದಿಸಿದರು.
ವಾದ-ಪ್ರತಿವಾದ ಆಲಿಸಿದ ಸಮಿತಿ, ನ್ಯಾಯಾಧೀಕರಣದ ಸೂಚನೆಯಂತೆ ಫೆಬ್ರವರಿ ಮತ್ತು ಮಾರ್ಚ ನಲ್ಲಿ ತಮಿಳುನಾಡಿಗೆ ತಲಾ 2.5 (ಒಟ್ಟು 5 ಟಿಎಂಸಿ) ಟಿಎಂಸಿ ನೀರು ಹರಿಸಲು ಶಿಫಾರಸು ಮಾಡಿತು. ಸಮಿತಿಯ ಈ ಶಿಫಾರಸ್ಸನ್ನು ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಮುಂದೆ ಪ್ರಶ್ನಿಸಲು ಕರ್ನಾಟಕ ನಿರ್ಧರಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ