ಬೆಂಗಳೂರು
ನಗರದ ಪದ್ಮನಾಭ ನಗರದಲ್ಲಿ ಸಂಗ್ರಹವಾಗುವ ಕಸದಿಂದ ಪ್ರತಿನಿತ್ಯ 250 ಕಿಲೋ ವ್ಯಾಟ್ ವಿದ್ಯುತ್ ಅನ್ನು ಉತ್ಪಾದಿಸಿ ಬಿಬಿಎಂಪಿಗೆ 32 ಲಕ್ಷ ರೂ. ಉಳಿತಾಯ ಮಾಡಲಾಗುತ್ತಿದೆ.
ಪದ್ಮನಾಭ ನಗರದ ವಿಧಾನಸಭಾ ಕ್ಷೇತ್ರದ ಯಡಿಯೂರು ವಾರ್ಡ್ ತನ್ನ ವ್ಯಾಪ್ತಿಯಲ್ಲಿ 250 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸಿ ಬೆಸ್ಕಾಂ ಮುಕ್ತ ವಾರ್ಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಯಡಿಯೂರು ವಾರ್ಡ್‍ನಲ್ಲಿ 3 ವರ್ಷಗಳ ಹಿಂದೆ ಆರಂಭವಾದ ಯಡಿಯೂರು ಜೈವಿಕ ಅನಿಲ ಘಟಕದಲ್ಲಿ ಪ್ರತಿನಿತ್ಯ ಉತ್ಪಾದಿಸಲಾಗುತ್ತಿದ್ದ 50 ಕಿಲೋ ವ್ಯಾಟ್ ವಿದ್ಯುತ್ ಸಾಮಥ್ರ್ಯವನ್ನು 250 ಕಿ.ಲೋ ವ್ಯಾಟ್‍ಗೆ ಹೆಚ್ಚಿಸಲಾಗಿದೆ. ವಿದ್ಯುತ್ ಚ್ಛಕ್ತಿ ಉತ್ಪಾದನಾ ಘಟಕವಾಗಿ ವಿಸ್ತರಿಸುವುದರೊಂದಿಗೆ ಜೈವಿಕ ಅನಿಲದ ಮೂಲಕ ವಿದ್ಯುತ್ ಉತ್ಪಾದಿಸುವ ಅತಿ ಹೆಚ್ಚು ಸಾಮಥ್ರ್ಯದ ಪ್ರಪ್ರಥಮ ಜನರೇಟರ್ ಹೊಂದಿರುವ ಘಟಕ ಎನ್ನುವ ಖ್ಯಾತಿ ಪಡೆದಿದೆ.
ಘಟಕದ ಮೂಲಕ ಉತ್ಪಾದಿಸುವ 250 ಕಿ.ಲೋ ವ್ಯಾಟ್ ವಿದ್ಯುತ್ ಪೈಕಿ 150 ಕಿ.ಲೋ ವ್ಯಾಟ್‍ನ್ನು ಯಡಿಯೂರು ವಾರ್ಡ್ ನಲ್ಲಿರುವ 17 ಪಾಲಿಕೆ ಕಟ್ಟಡಗಳು, 13 ಉದ್ಯಾನವನಗಳು, ಮತ್ತು 3 ಕಿ.ಲೋ ಮೀಟರ್ ಉದ್ದದ ಮಾದರಿ ಪಾದಚಾರಿ ಮಾರ್ಗಗಳಲ್ಲಿರುವ ವಿದ್ಯುತ್ ದೀಪಗಳಿಗೆ ಬಳಸಲಾಗುವುದು.ಇದರಿಂದ ಪಾಲಿಕೆಯು ಬೆಸ್ಕಾ ಸಂಸ್ಥೆಗೆ ಪ್ರತಿ ತಿಂಗಳು ಪಾವತಿಸುತ್ತಿದ್ದ ವಿದ್ಯುತ್‍ಚ್ಛಕ್ತಿ ಶುಲ್ಕ 90 ಲಕ್ಷ ರೂಪಾಯಿ ಉಳಿತಾಯವಾಗಲಿದೆ.
ಉತ್ಪಾದನೆಯಾಗುವ 250 ಕಿ.ಲೋ ವ್ಯಾಟ್ ವಿದ್ಯುತ್ ಪೈಕಿ ಉಳಿದ 100 ಕಿ.ಲೋ. ವ್ಯಾಟ್ ವಿದ್ಯುತ್ ಅನ್ನು ಬೆಸ್ಕಾ ಸಂಸ್ಥೆಗೆ ಮಾರಾಟ ಮಾಡಲಾಗುವುದು.ಇದರಿಂದಪ್ರತಿ ತಿಂಗಳು 6 ಲಕ್ಷ ರೂಪಾಯಿ ಹಣ ಪಾಲಿಕೆಯಲ್ಲಿಯೇ ಉಳಿಯಲಿದೆ.
ತ್ಯಾಜ್ಯ ದ್ರಾವಣ ಉತ್ಪತ್ತಿ
ಯಡಿಯೂರು ಜೈವಿಕ ಅನಿಲ ಘಟಕದಲ್ಲಿ ಹಸಿ ತ್ಯಾಜ್ಯ ಸಂಸ್ಕರಣೆಯಿಂದ ಪ್ರತಿ ನಿತ್ಯ 2,000 ಲೀಟರ್ ಗಳಷ್ಟು ಪ್ರಮಾಣದ ತ್ಯಾಜ್ಯ ದ್ರಾವಣ ಉತ್ಪತ್ತಿಯಾಗುತ್ತಿದ್ದು ಇದನ್ನು ದಕ್ಷಿಣ ವಲಯ ವ್ಯಾಪ್ತಿಯಲ್ಲಿರುವ 270 ಉದ್ಯಾನವನಗಳಲ್ಲಿರುವ ಗಿಡ ಮರಗಳಿಗೆ ಪೂರೈಸಲಾಗುವುದು.
ಇದರಿಂದ ಪಾಲಿಕೆಯು ಉದ್ಯಾನವನಗಳಿಗಾಗಿ ಪ್ರತಿ ತಿಂಗಳು ರಾಸಾಯನಿಕ ಗೊಬ್ಬರಕ್ಕಾಗಿ ವೆಚ್ಚ ಮಾಡುತ್ತಿದ್ದ 4 ಲಕ್ಷ ರೂಪಾಯಿಗಳು ಉಳಿತಾಯವಾಗಲಿದೆ.ಯಡಿಯೂರು ವಾರ್ಡ್‍ನಲ್ಲಿ ಪ್ರತಿ ದಿನ ಸಂಗ್ರಹವಾಗುವ 5 ಟನ್ ಹಸಿ ತ್ಯಾಜ್ಯವನ್ನು ಬೆಳ್ಳಳ್ಳಿ ಕ್ವಾರಿಗೆ ಸಾಗಿಸಲು ಪ್ರತಿ ತಿಂಗಳು ವೆಚ್ಚ ಮಾಡುತ್ತಿದ್ದ 4.5 ಲಕ್ಷ ಕೂಡ ಪಾಲಿಕೆಯ ಬೋಕ್ಕಸದಲ್ಲೇ ಉಳಿಯಲಿದೆ.
ಯಡಿಯೂರು ಜೈವಿಕ ಅನಿಲ ಘಟಕವನ್ನು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಉದ್ಘಾಟಿಸಿ ಮಾತನಾಡಿ ಯಡಿಯೂರು ವಾರ್ಡ್‍ನ ಜೈವಿಕ ಅನಿಲ ಘಟಕದಿಂದ 250 ಕಿ.ಲೋ ವ್ಯಾಟ್ ವಿದ್ಯುತ್ ಅನ್ನು ಉತ್ಪಾದಿಸಲಾಗುತ್ತಿದ್ದು, ಇದನ್ನು ಮಾದರಿಯಾಗಿಟ್ಟುಕೊಂಡು ಉಳಿದ 197 ವಾರ್ಡ್‍ಗಳಲ್ಲಿ ಇಂತಹದೇ ಘಟಕಗಳನ್ನು ಆರಂಭಿಸಲು ಪಾಲಿಕೆ ಆಯುಕ್ತರು ಸರ್ವೆ ಕಾರ್ಯ ನಡೆಸಿ ಕ್ರಮಕೈಗೊಳ್ಳಬೇಕು. ಇದರಿಂದ ನಗರದ ಪರಿಸರವನ್ನು ಕಾಪಾಡಿದಂತಾಗುತ್ತದೆ ಎಂದರು.
ಬಜೆಟ್‍ನಲ್ಲಿ ಅನುದಾನ
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಮಾತನಾಡಿ ಯಡಿಯೂರು ವಾರ್ಡ್‍ನಲ್ಲಿದಂತೆ ಜೈವಿಕ ಅನಿಲ ಘಟಕವನ್ನು ಸ್ಥಳಾವಕಾಶವಿರುವ ಎಲ್ಲಾ ವಾರ್ಡ್ ಗಳಲ್ಲೂ ಆರಂಭಿಸಲು ಮುಂದಿನ ಬಜೆಟ್‍ನಲ್ಲಿ ಅನುದಾನವನ್ನು ತೆಗೆದಿರಿಸಲಾಗುವುದು. ಕೆಲ ವಾರ್ಡ್‍ಗಳಲ್ಲಿ ಜೈವಿಕ ಅನಿಲ ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ, ಎಂಬುದು ಗಮನಕ್ಕೆ ಬರುತ್ತಿದ್ದಂತೆ ದುರಸ್ತಿಗೊಳಿಸಲು ಸಂಬಂಧಪಟ್ಟ ಇಂಜಿನಿಯರ್‍ಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
