ಶಿರಾ
ಕೋವಿಡ್-19 ಹಿನ್ನೆಲೆಯಲ್ಲಿ ಜಿಲ್ಲಾಧ್ಯಂತ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದ್ದು ಶಿರಾ ತಾಲ್ಲೂಕಿನಲ್ಲಿ ಓರ್ವ ವ್ಯಕ್ತಿ ಸೋಂಕಿನಿಂದ ಮೃತಪಟ್ಟ ಹಿನ್ನೆಲೆಯಲ್ಲಿ ರೆಡ್ ಝೋನ್ ಎಂದು ಗುರ್ತಿಸಲಾಗಿತ್ತು. ಮೇ:3ರವರೆಗೂ ಈ ರೆಡ್ ಝೋನ್ ಆದೇಶ ಮುಂದುವರೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್ ಹೇಳಿದರು.
ಗುರುವಾರ ನಗರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಆಸ್ಪತ್ರೆಯ ಪ್ರಾಂಗಣದ ವೀಕ್ಷಣೆ ಮಾಡಿದರು. ವಿವಿಧ ವೈದ್ಯರೊಂದಿಗೆ ಆಸ್ಪತ್ರೆಯ ಸ್ಥಿತಿ-ಗತಿಗಳ ಬಗ್ಗೆಯೂ ಜಿಲ್ಲಾಧಿಕಾರಿಗಳು ಚರ್ಚಿಸಿದರು.ಶಿರಾ ತಾಲ್ಲೂಕಿನಲ್ಲಿ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬಿಗಿ ಬಂದೋಬಸ್ತಿನ ಕ್ರಮ ಕೈಗೊಂಡಿದೆ. 33 ಮಂದಿ ಕೊರೋನಾ ಶಂಕಿತರನ್ನು ಆಸ್ಪತ್ರೆಯಲ್ಲಿ ಕ್ವಾರಂಟೇನ್‍ನಲ್ಲಿಡಲಾಗಿತ್ತು ಈ 33 ಮಂದಿಯ ಗಂಟಲು ದ್ರವ ಪರೀಕ್ಷೆಯನ್ನು ಮೂರು ಬಾರಿ ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತು ಮೂರು ಬಾರಿಯೂ ಇವರ ಪರೀಕ್ಷೆ ನೆಗೆಟೀವ್ ಬಂದಿದೆ. ಹೀಗಾಗಿ ಕ್ವಾರೆಂಟೇನ್ ಅವಧಿಯು ಮುಗಿದ ಪರಿಣಾಮ ಈ 33 ಮಂದಿಯನ್ನು ಅವರ ಮನೆಗಳಿಗೆ ಶಿಫ್ಟ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕ್ವಾರೆಂಟೇನ್‍ನಲ್ಲಿದ್ದವರ ಇಡೀ ಕುಟುಂಬದವರ ಗಂಟಲು ಮಾದರಿಯನ್ನು ಕೂಡಾ ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರ ಗಂಟಲು ಮಾದರಿಯ ಪರೀಕ್ಷೆ ಕೂಡಾ ನೆಗೆಟೀವ್ ಬಂದಿದೆ. ಇಂದು ಶಿರಾದಲ್ಲಿ ನೆಗೆಟೀವ್ ಬಂದು ಮನೆಗೆ ಶಿಫ್ಟ್ ಆದ 33 ಮಂದಿಯೂ ಕೂಡಾ ಹೋಂ ಕ್ವಾರಂಟೇನ್‍ನಲ್ಲಿರುವಂತೆ ಸೂಚಿಸಲಾಗಿದ್ದು ಆರೋಗ್ಯ ಇಲಾಖೆ ಕೂಡಾ ಈ ನಿಟ್ಟಿನಲ್ಲಿ ನಿಗಾ ವಹಿಸಲಿದೆ ಎಂದರು.
ನೆರೆಯ ಆಂದ್ರ ಪ್ರದೇಶದ ರೊಳ್ಳೆಯ ಕಂದಾಯ ಇಲಾಖೆಯ ಅಧಿಕಾರಿಯೊಬ್ಬರಿಗೆ ಕೊರೋನಾ ಪಾಸಿಟೀವ್ ಬಂದ ಹಿನ್ನೆಲೆಯಲ್ಲಿ ಸದರಿ ಇಲಾಖೆಗೆ ಶಿರಾ ನಗರದಿಂದ ಹೋಗಿ ಬರುತ್ತಿದ್ದ ಸಿಬ್ಬಂಧಿ ಹಾಗೂ ಅವರ ಕುಟುಂಬವನ್ನು ಆಂದ್ರದಲ್ಲಿಯೇ ಕ್ವಾರೆಂಟೇನ್‍ನಲ್ಲಿರಿಸಲಾಗಿದ್ದು ಶಿರಾ ನಗರದ ಜನ ಆತಂಕಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.
ಆತಂಕಪಡುವ ಅಗತ್ಯವಿಲ್ಲವೆಂದು ಜನ ಮನೆಯಿಂದ ಹೊರಗೆ ಬರ ಬಾರದು ಒಂದು ವೇಳೆ ಬಂದಲ್ಲಿ ಇಲ್ಲವೇ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಶಿಕ್ಷೆ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ ಜಿಲ್ಲಾಧಿಕಾರಿಗಳು ಶೀತ, ನೆಗಡಿಯಂತಹ ಲಕ್ಷಣಗಳು ಕಂಡು ಬಂದಲ್ಲಿ ಶಿರಾ ನಗರದಲ್ಲಿಯೇ ಎರಡು ಫೀವರ್ ಕ್ಲಿನಿಕ್‍ಗಳನ್ನು ತೆರೆಯಲಾಗಿದ್ದು ಆಯಾ ಭಾಗದ ಸಾರ್ವಜನಿಕರು ಚಿಕಿತ್ಸೆ ಮಾಡಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಂದ್ರಿಕಾ, ತಹಶೀಲ್ದಾರ್ ಶ್ರೀಮತಿ ನಾಹಿದಾ ಜಮ್ ಜಮ್, ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಾಥ್, ಡಾ.ಡಿ.ಎಂ.ಗೌಡ, ತಾ.ಪಂ. ಇ.ಓ. ಮೋಹನ್, ನಗರಸಭೆಯ ಆಯುಕ್ತ ಪರಮೇಶ್ವರಪ್ಪ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ