ತುಮಕೂರು
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯ 10 ತಾಲ್ಲೂಕುಗಳಲ್ಲಿ ಆಗಸ್ಟ್ 21ರವರೆಗೆ ಒಟ್ಟು 35.30ಲಕ್ಷ ಮಾನವ ದಿನಗಳು ಸೃಜನೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭ ಕಲ್ಯಾಣ್ ಅವರು ತಿಳಿಸಿದ್ದಾರೆ.
ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಾದ ರೈತರ ಹೊಲದಲ್ಲಿ ಬದು ಮತ್ತು ಕೃಷಿ ಹೊಂಡ ನಿರ್ಮಾಣ, ರೈತರ ಜಮೀನಿನಲ್ಲಿ ಗಿಡಗಳನ್ನು ನೆಡುವುದು ಹಾಗೂ ರಸ್ತೆ ಬದಿ ಸೇರಿದಂತೆ ಬೆಟ್ಟಗುಡ್ಡ, ಗೋಮಾಳಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಮಣ್ಣಿನ ಸವಕಳಿ ತಪ್ಪಿಸುವ ಹಲವು ಕಾಮಗಾರಿಗಳನ್ನು ಅನುಷ್ಟಾನಗೊಳಿಸಲಾಗಿದೆ. ಅನುಷ್ಟಾನ ಇಲಾಖೆಗಳಾದ ಕೃಷಿ, ತೋಟಗಾರಿಕೆ, ಅರಣ್ಯ, ರೇಷ್ಮೆ ಹಾಗೂ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಗಳು ಸಹ ನರೇಗಾ ಯೋಜನೆಯನ್ನು ಸಮರ್ಪಕ ಅನುಷ್ಟಾನಕ್ಕೆ ಸಹಕರಿಸುತ್ತಿವೆ.
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಮಹಾತ್ಮಗಾಂಧಿ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನ ಮಾಡಲಾಗುತ್ತಿದೆ. ಮಧುಗಿರಿ ತಾಲ್ಲೂಕು ನರೇಗಾ ಕಾಮಗಾರಿಗಳ ಅನುಷ್ಟಾನದಲ್ಲಿ ಮೊದಲ ಸ್ಥಾನದಲ್ಲಿದ್ದು, ಸಿರಾ ಹಾಗೂ ಪಾವಗಡ ತಾಲ್ಲೂಕುಗಳು ನಂತರದ ಸ್ಥಾನದಲ್ಲಿವೆ.
ನರೇಗಾ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವ ದೃಷ್ಟಿಯಿಂದ ಪ್ರತಿ ಗ್ರಾಮಗಳಲ್ಲಿ ಕಾಯಕ ಬಂಧು ಹಾಗೂ ಕಾಯಕ ಸಂಘಗಳನ್ನು ರಚನೆ ಮಾಡಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಆಗಸ್ಟ್ 21ರವರೆಗೆ 4189 ಕಾಯಕ ಸಂಘಗಳನ್ನು ರಚನೆ ಮಾಡಿ 36562 ಉದ್ಯೋಗ ಚೀಟಿಗಳ 60879 ಸದಸ್ಯರುಗಳನ್ನು ಕಾಯಕ ಸಂಘಗಳಿಗೆ ನೋಂದಣಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕಾಯಕ ಸಂಘಗಳ ಸದಸ್ಯರಿಗೆ ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನ ನೀಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
