ಹರಪನಹಳ್ಳಿ
60 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನ, ಜಾನುವಾರುಗಳಿಗೆ ಮೇವು, ಕುಡಿಯುವ ನೀರು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಭಾ, ರೈತ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ತೆರಳಿದ ಪ್ರತಿಭಟನಾ ಕಾರರು ಪ್ರಮುಖ ರಸ್ತೆಯಲ್ಲಿ ಹಾಯ್ದು ಮಿನಿವಿಧಾನ ಸೌಧಕ್ಕೆ ಹೋಗಿ ಬಹಿರಂಗ ಸಭೆ ನಡೆಸಿದರು.
ತಾಲೂಕಿನ 60 ಕೆರೆಗಳಿಗೆ ತುಂಗಭದ್ರ ನದಿ ನೀರು ತುಂಬಿಸುವ ಕಾಮಗಾರಿಯನ್ನು ಗುತ್ತಿಗೆದಾರರು ತ್ವರಿತ ಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು, ತಾಂತ್ರಿಕ ನೆಪದಲ್ಲಿ ಮುಂದೂಡದೆ ಶೀಘ್ರವೇ ಗರ್ಭಗುಡಿ ಬ್ರಿಡ್ಜ ಕಂ ಬ್ಯಾರೇಜು ಕಾಮಗಾರಿ ಕೈಗೆತ್ತಿಕೊಂಡು ಪೂರ್ಣಗೊಳಿಸಬೇಕು, 371 ಜೆ ಪ್ರಮಾಣ ಪತ್ರವನ್ನು ತ್ವರಿತವಾಗಿ ವಿತರಣೆ ಮಾಡಬೇಕು.
ಕಂದಾಯ ಉಪವಿಭಾಗವನ್ನು ಇಲ್ಲೆ ಉಳಿಸುವ ಅಂತಿಮ ಆದೇಶ ಹೊರಡಿಸಬೇಕು, ಬಾಕಿ ಉಳಿಸಿಕೊಂಡಿರುವ ಬಗರ್ ಹುಕ್ಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸಬೇಕು, ಪ್ರತಿಹಳ್ಳಿಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಬೇಕು.ಬರದಿಂದ ಬೆಳೆ ನಷ್ಟ ಗೊಂಡಿರುವ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕು, ಬರುವ ಮುಂಗಾರು ಬೆಳೆ ಬಿತ್ತನೆಗೆ ಉಚಿತ ಬೀಜ ಗೊಬ್ಬರ ವಿತರಿಸಬೇಕು, ರೈತರ ಸಾಲಮನ್ನಾ ವಿಚಾರದಲ್ಲಿ ಯಾವುದೇ ಷರತ್ತು ವಿದಿಸದೆ ರೈತರನ್ನು ರುಣ ಮುಕ್ತಗೊಳಿಸಬೇಕು, ಜಾನುವಾರುಗಳಿಗೆ ಮೇವು ಬ್ಯಾಂಕ್ ಸ್ಥಾಪಿಸಬೇಕು, ಎಂಬಿತ್ಯಾದಿ ಒಟ್ಟು 23 ಬೇಜಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರ ನಾಗವೇಣಿಯವರಿಗೆ ಸಲ್ಲಿಸಲಾಯಿತು.
ರೈತ ಸಂಘದ ರಾಜ್ಯ ಕಾರ್ಯಾದ್ಯಕ್ಷ ಎಚ್ .ಎಂ.ಮಹೇಶ್ವರಸ್ವಾಮಿ, ಕಿಸಾನ್ ಸಭಾದ ರಾಜ್ಯ ಉಪಾದ್ಯಕ್ಷ ಹೊಸಹಳ್ಳಿ ಮಲ್ಲೇಶ, ಕರಡಿದುರ್ಗದ ಚೌಡಪ್ಪ, ಕುಂಚೂರು ಶಪಿವುಲ್ಲಾ, ಪಾಟೀಲ್ ಸಿದ್ದನಗೌಡ, ಗೋಣೆಪ್ಪ, ದ್ವಾರಕೇಶ, ರಂಗಪ್ಪ, ಭರಮಪ್ಪ, ವಿರುಪಾಕ್ಷಪ್ಪ, ಮಹಮದ್ ಇಬ್ರಾಹಿಂ, ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
