ಚಿತ್ರದುರ್ಗ
ಹೈದಾರಾಬಾದ್ ಕರ್ನಾಟಕಕ್ಕೆ ಸಿಕ್ಕಿರುವ ವಿಶೇಷ ಸವಾಲತ್ತುಗಳನ್ನು ಪಡೆಯಬೇಕಾದರೆ ಮೊದಲು ಜಿಲ್ಲೆಯಲ್ಲಿ ಮಾನವ ಅಭಿವೃದ್ದಿ ಸೂಚ್ಯಂಕಗಳನ್ನು ಸಂಗ್ರಹಿಸಿ ನಿಖರವಾದ ಮಾಹಿತಿಯೊಂದಿಗೆ ಸಮಗ್ರ ಅಧ್ಯಯನ ನಡೆಸಿ ವರದಿ ತಯಾರಿಸುವಂತೆ ರಾಯಚೂರು ಹೈದಾರಾಬಾದ್ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ರಜಾಕ್ ಉಸ್ತಾದ್ ಸಲಹೆ ನೀಡಿದರು.
ನಗರದ ಕ್ರೀಡಾಭವನದಲ್ಲಿ ಭಾನುವಾರ ಹೈದಾರಾಬಾದ್ ಕರ್ನಾಟಕ 371 ಜೆ ಮಾದರಿಯಲ್ಲಿ ಚಿತ್ರದುರ್ಗ ಜಿಲ್ಲೆಗೂ ವಿಶೇಷ ಸ್ಥಾನಮಾನ ನೀಡಬೇಕೆಂಬ ಬಗ್ಗೆ ಸಮಾಲೋಚನೆ ನಡೆಸಲು ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿದರು. ಹೈದಾರಾಬಾದ್ ಕರ್ನಾಟಕ ಮಾದರಿಯಲ್ಲಿ ಹೋರಾಟ ಮಾಡುವ ಮೊದಲು ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ, ಅಪೌಷ್ಠಿಕತೆ, ಕೃಷಿ, ಆರೋಗ್ಯ, ಕೈಗಾರಿಕೆ, ನೀರಾವರಿ ಇತ್ಯಾಧಿಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಸರ್ಕಾರದ ವಾರ್ಷಿಕ ವರದಿಯಲ್ಲಿ ಮಾಹಿತಿ ಸಿಗಬಹುದು. ಇದನ್ನೆ ನಂಬಿಕೊಳ್ಳದೆ ಮಾನವ ಅಭಿವೃದ್ದಿ ಸೂಚ್ಯಂಕ ಕಡಿಮೆ ಇರುವ ಬಗ್ಗೆ ದಾಖಲೆ ಸಹಿತ ಮಾಹಿತಿ ಸಂಗ್ರಹಿಸಬೇಕು. ಯಾವ್ಯಾವ ಸ್ಥಾನಮಾನ, ಸೌಲಭ್ಯ ಕೇಳಿದರೆ ಸರ್ಕಾರ ಒಪ್ಪಿಕೊಳ್ಳಬಹುದು ಎನ್ನುವ ಬಗ್ಗೆ ಮೊದಲು ತಿಳಿದುಕೊಂಡು ಅದರ ಪ್ರಕಾರ ಸಮಗ್ರ ವರದಿ ತಯಾರಿಸಿದರೆ ನಂತರ ಹೋರಾಟದ ರೂಪರೇಶೆಗಳನ್ನು ಮಾಡಲು ಸುಲಭವಾಗುತ್ತದೆ ಎಂದರು.
ಸಂಘಟಕರಾದ ಯಾದವರೆಡ್ಡಿ ಮಾತನಾಡಿ, ಜಿಲ್ಲೆಯ ಭೀಕರ ಬರಗಾಲದಿಂದ ತತ್ತರಿಸಿದೆ. ಮಳೆ ಇಲ್ಲದೆ ನೀರಾವರಿ ಸೌಲಭ್ಯ ಇಲ್ಲದೆ ಕೆರೆ ಕಟ್ಟೆಗಳು ಒಣಗಿ ಹೋಗಿವೆ. ಭೂಮಿ ಕಾದು ಕೆಂಡದಂತಿದ್ದು ದಿನದಿಂದ ದಿನಕ್ಕೆ ತಾಪಮಾನ ಏರುತ್ತಿದೆ. ಜಾನುವಾರುಗಳಿಗೂ ಕುಡಿಯಲು ನೀರು ಸಿಗುತ್ತಿಲ್ಲ. ಐತರು ವಲಸೆ ಹೋಗುತ್ತಿರುವುದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇವೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದರೆ ಹೈದಾರಾಬಾದ್ ಕರ್ನಾಟಕ ಮಾದರಿಯಲ್ಲಿ ಹೋರಾಟ ಶುರು ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಬಳಕೆ ಮಾಡಲು ನೀರು ಸಿಗುತ್ತಿಲ್ಲ ಇನ್ನು ಶುದ್ದ ಕುಡಿಯುವ ನೀರು ಮರಿಚೀಕೆಯಾಗಿದೆ. ಪಶು ಪಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಇವುಗಳನ್ನು ಮುಂದೆ ಚಿತ್ರದಲ್ಲಿ ನೋಡುವ ಕಾಲ ದೂರವಿಲ್ಲ. ಇವುಗಳ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸದಿದ್ದರೆ ಅಪಾಯ ತಪ್ಪಿದಲ್ಲ. ಭೀಕರ ಬರಗಾಲ ಭೀಕರವಾಗಿ ಜನರು ಜೀವಿಸುವುದು ಕಷ್ಟವಾಗುತ್ತದೆ ಎಂದು ಎಚ್ಚರಿಸಿದರು.
ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಸಮಾನ ಶಿಕ್ಷಣ ನೀಡಬೇಕಾಗಿದೆ. ಆದರೆ ಖಾಸಗಿ ಶಾಲೆಗಳ ಹಾವಳಿಯಿಂದ ತಾರತಮ್ಯ ಹೆಚ್ಚಾಗುತ್ತಿದೆ. ಸರ್ಕಾರಿ ಶಾಲೆಗಳ ಸಬಲೀಕರಣವಾಗಲಿಲ್ಲ. ಸಾಮಾನ್ಯ ಜನರು ಖಾಸಗಿ ಶಾಲೆಯತ್ತ ಮುಖ ಮಾಡಿದ್ದಾರೆ. ಬಡವರು ಮಾತ್ರ ಸರ್ಕಾರಿ ಶಾಲೆಯಲ್ಲಿ ಓದುವಂತಾಗಿದೆ. ಇದರಿಂದ ಸಮಾಜದಲ್ಲಿ ಕಂದಕ ಕೂಡ ಹೆಚ್ಚಾಗುತ್ತಿದೆ. ಇದನ್ನು ಹೋಗಲಾಡಿಸಬೇಕಾದರೆ ಸಮಾನ ಶಿಕ್ಷಣ ಕೊಡುವಂತೆ ಆಗ್ರಹಿಸಿದರು.
ಈ ಸಭೆಯಲ್ಲಿ ದಲಿತ, ವಿದ್ಯಾರ್ಥಿಗಳು, ರೈತರು ಹಾಗೂ ಹಿಂದುಳಿ ವರ್ಗಗಳ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸಭೆ ಕರೆದು ಚರ್ಚೆ ನಡೆಸಲಾಗುವುದು ಎಂದು ಸಂಘಟಕರು ತಿಳಿಸಿದರು.ಮುಖಂಡರಾದ ಶಿವಕುಮಾರ್, ನಾಗರಾಜ್, ಓಬಳೇಶ್, ಸಂಘಟಕ ದಾಸೇಗೌಡ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








