ದಾವಣಗೆರೆ:
ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚುವ ಉದ್ದೇಶದಿಂದ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಕ್ಷೇತ್ರದ ಹಲವೆಡೆ 50 ಕೋಟಿ ರೂ. ಡಂಪ್ ಮಾಡಿದ್ದಾರೆಂದು ಕೆಪಿಸಿಸಿ ಕಾರ್ಯದರ್ಶಿ ಡಿ.ಬಸವರಾಜ್ ಆರೋಪಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಚುನಾವಣೆಯಲ್ಲಿ ಹಣ ಹಂಚುವ ಉದ್ದೇಶದಿಂದ ಲೋಕಸಭಾ ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 50 ಕೋಟಿ ರೂ. ಡಂಪ್ ಮಾಡಿರುವ ಬಗ್ಗೆ ತಮಗೆ ಮಾಹಿತಿ ಬಂದಿದ್ದು, ಐಟಿ ಅಧಿಕಾರಿಗಳು ಕೇವಲ ಮೈತ್ರಿ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿತರ ನಿವಾಸಗಳ ಮೇಲೆ ದಾಳಿ ಮಾಡುವುದನ್ನು ಬಿಟ್ಟು ಬಿಜೆಪಿಯವರ ಮನೆಗಳ ಮೇಲೂ ದಾಳಿ ನಡೆಸಿ, ಆದಾಯ ತೆರಿಗೆ ಇಲಾಖೆ ಸ್ವಾಯತ್ತ ಸಂಸ್ಥೆ ಎಂಬುದನ್ನು ಸಾಬೀತು ಪಡೆಸಬೇಕೆಂದು ಆಗ್ರಹಿಸಿದರು.
ಸತತ ಮೂರು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿರುವ ಸಂಸದ ಜಿ.ಎಂ.ಸಿದ್ದೇಶ್ವರ್ ಹಾಗೂ 2 ಬಾರಿ ಪ್ರತಿನಿಧಿಸಿರುವ ಇವರ ತಂದೆ ದಿ.ಜಿ.ಮಲ್ಲಿಕಾರ್ಜುನಪ್ಪನವರು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದೇ, ಕ್ಷೇತ್ರವನ್ನು 25 ವರ್ಷಗಳ ಕತ್ತಲೆಯಲ್ಲಿ ಇಟ್ಟಿದ್ದಾರೆ. ಸಿದ್ದೇಶ್ವರ್ ಅವರ ಮುಖಕ್ಕೆ ನಾಲ್ಕಾಣೆ ಕಿಮ್ಮತ್ತು ಇಲ್ಲದ ಕಾರಣ ಮೋದಿ ಅವರ ಮುಖ ನೋಡಿ ಈ ಬಾರಿ ನನಗೆ ಮತ ನೀಡಿ ಎಂಬುದಾಗಿ ಮತಯಾಚಿಸುತ್ತಿದ್ದಾರೆಂದು ಲೇವಡಿ ಮಾಡಿದರು.
ವಿಮಾನಯಾನ ಸಚಿವರಾಗಿ ಏರ್‍ಪೋರ್ಟ್ ತರದ, ಕೈಗಾರಿಕ ಸಚಿವರಾಗಿ ಸಣ್ಣ ಕೈಗಾರಿಕೆಯೂ ತರದ ಜಿ.ಎಂ.ಸಿದ್ದೇಶ್ವರ್ ಅವರು ಕಳೆದ ಐದು ವರ್ಷದ ಅವಧಿಯಲ್ಲಿ 10 ಸಾವಿರ ಕೋಟಿ ಅನುದಾನ ತಂದಿರುವುದಾಗಿ ಹೇಳಿಕೊಂಡು, ಕರಪತ್ರ ಮುದ್ರಿಸಿಕೊಂಡು ಕ್ಷೇತ್ರದ ಜನರನ್ನು ಮೂರ್ಖರನ್ನಾಗಿಸಲು ಹೊರಟಿದ್ದಾರೆಂದು ದೂರಿದರು.
ತಮ್ಮ ಅಧಿಕಾರದ ಪ್ರಭಾವ ಬಳಸಿ ತಮ್ಮ ಮತ್ತು ಅವರ ಸಹೋದರರ ಮಾಲೀಕತ್ವದ ಶ್ರೀಶೈಲ ಎಜ್ಯುಕೇಷನ್ ಟ್ರಸ್ಟ್‍ಗೆ ಜವಳಿ ಪಾರ್ಕ್‍ಗೆ ಮೀಸಲಿದ್ದ ಕರೂರು ಕೈಗಾರಿಕ ಪ್ರದೇಶದಲ್ಲಿ 28 ಎಕರೆ ಜಮೀನು ಪಡೆದ ಸಿದ್ದೇಶ್ವರ್ ತಮ್ಮ ಸಂಸ್ಥೆಗೆ ಜಮೀನು ಪಡೆಯಲು ತೋರಿದ ಇಚ್ಛಾಸಕ್ತಿ ಹಾಗೂ ಬದ್ಧತೆಯನ್ನು ಕೈಗಾರಿಕೆ ಹಾಗೂ ಏರ್‍ಪೋರ್ಟ್ ಸ್ಥಾಪನೆಗೆ ಬೇಕಾಗಿರುವ ಭೂಮಿ ಪಡೆಯಲು ಏಕೆ ತೋರಿಸಲಿಲ್ಲ ಎಂದು ಪ್ರಶ್ನಿಸಿದರು.
ಕಳೆದ 25 ವರ್ಷಳಿಂದ ದಾವಣಗೆರೆ ಕ್ಷೇತ್ರಕ್ಕೆ ಗ್ರಹಣ ಹಿಡಿದಿದ್ದು, ಈ ಗ್ರಹಣಕ್ಕೆ ಮುಕ್ತಿ ಕೊಡಿಸುವ ನಿಟ್ಟಿನಲ್ಲಿ ಈ ಬಾರಿ ಕ್ಷೇತ್ರದ ಮತದಾರರು ಸಾಮಾನ್ಯ ಕುಟುಂಬದಿಂದ ಬಂದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರನ್ನು ಬೆಂಬಲಿಸಬೇಕೆಂದ ಅವರು, ಈ ಬಾರಿ ಪಕ್ಷಕ್ಕೆ ಜೆಡಿಎಸ್ ಹಾಗೂ ಕಮ್ಯುನಿಷ್ಟ್ ಪಕ್ಷಗಳು ಬೆಂಬಲ ಸೂಚಿಸಿರುವುದರಿಂದ ಕಾಂಗ್ರೆಸ್‍ಗೆ ಆನೆ ಬಲ ಬಂದಿದ್ದು, ಈ ಬಾರಿ ನಮ್ಮ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ ಗೆಲುವು ಸಾಧಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಐದು ವರ್ಷ ದೇಶವಾಳಿದ ನರೇಂದ್ರ ಮೋದಿಯವರು ದಿನವೂ ಸಹ ಸುಸ್ಥಿರ ಆಡಳಿತ ನೀಡಲ್ಲ. ದುರಾಡಳಿತವನ್ನೇ ನೀಡಿದ್ದಾರೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳ ಮೇಲೆ ನಿರಂತರ ದಾಳಿ ನಡೆ ನಡೆಯುತ್ತಿವೆ. ಸಂವಿಧಾನವನ್ನೇ ಇಲ್ಲವಾಗಿಸುವ ಹುನ್ನಾರ ನಡೆಯುತ್ತಿದ್ದು, ಜಾತ್ಯತೀತ ತತ್ವಕ್ಕೆ ಮೋದಿ ಮಾರಕವಾಗಿದ್ದಾರೆಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಲಿಯಾಕತ್ ಅಲಿ, ಬಿ.ಹೆಚ್.ಉದಯಕುಮಾರ್, ಎ.ಅಬ್ದುಲ್ ಜಬ್ಬಾರ್, ಹೆಚ್.ಹರೀಶ್, ಖಾಜಿ ಖಲೀಲ್, ಡಿ.ಶಿವಕುಮಾರ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
