ದಾವಣಗೆರೆ :
2025ರ ವೇಳೆಗೆ 500 ಪ್ಯಾಸೆಂಜರ್ ರೈಲುಗಳನ್ನು ಹಾಗೂ 750 ರೈಲ್ವೆ ನಿಲ್ದಾಣಗಳನ್ನು ಖಾಸಗಿಯವರಿಗೆ ವಹಿಸುವ ಬಗ್ಗೆ ರೈಲ್ವೆ ಸಚಿವಾಲಯ ಗಂಭೀರ ಚಿಂತನೆ ನಡೆಸಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದರು.
ಶುಕ್ರವಾರ ನೈರುತ್ಯ ರೈಲ್ವೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ನಿರ್ಮಿಸಿರುವ ಎರಡನೇ ಪ್ರವೇಶ ದ್ವಾರ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ಸೇವೆ ನೀಡುವ ಉದ್ದೇಶದಿಂದ 2025ರ ವೇಳೆಗೆ 500 ಪ್ಯಾಸೆಂಜರ್ ಟ್ರೈನ್‍ಗಳನ್ನು ಮತ್ತು 750 ರೈಲ್ವೆ ನಿಲ್ದಾಣಗಳನ್ನು ಖಾಸಗಿಯವರಿಗೆ ವಹಿಸಲು ರೈಲ್ವೆ ಸಚಿವಾಲಯ ಗಂಭೀರ ಚಿಂತನೆ ನಡೆಸುತ್ತಿದೆ ಎಂದರು.
ಪ್ರಪಂಚದಲ್ಲಿಯೇ ಅತಿ ದೊಡ್ಡ ಸಾರಿಗೆ ಎಂಬ ಹೆಗ್ಗಳಿಕೆಯನ್ನು ಭಾರತೀಯ ರೈಲ್ವೆ ಹೊಂದಿದ್ದು, 8,700 ಪ್ಯಾಸೆಂಜರ್ ರೈಲುಗಳನ್ನು ಹಾಗೂ ಪ್ರತಿ ದಿನ 120 ಕೋಟಿ ಟನ್‍ನಷ್ಟು ಸರಕು ಸಾಗಾಟ ಮಾಡುವ ಸಾಮಥ್ರ್ಯದ ಗೂಡ್ಸ್ ರೈಲುಗಳನ್ನು ಹೊಂದಿದೆ ಎಂದು ವಿವರಿಸಿದರು.
ಚಿಕ್ಕಜಾಜೂರಿನಿಂದ ಹರಿಹರದವರೆಗೆ ಸುಮಾರು 80 ಕೋಟಿ ವೆಚ್ಚದಲ್ಲಿ ರೈಲ್ವೆಲೈನ್ ಎಲೆಕ್ಟ್ರಿಫಿಕೇಷನ್ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದ್ದು, 2024ರ ವೇಳೆಗೆ ಶೇ.100 ರಷ್ಟು ರೈಲ್ವೆ ಲೈನುಗಳು ವಿದ್ಯುತೀಕರಣಗೊಳ್ಳಲಿದೆ ಎಂದು ಹೇಳಿದರು.ನನ್ನ ಕ್ಷೇತ್ರದಲ್ಲಿ ಹಾದು ಹೋಗಿರುವ ರೈಲ್ವೆ ಸಂಪರ್ಕಕ್ಕೆ ಮೂಲಭೂತ ಸೌಲಭ್ಯಗಳನ್ನು ತರಬೇಕೆಂಬ ಉದ್ದೇಶ ನಮ್ಮದಾಗಿತ್ತು. ಈ ನಿಟ್ಟಿನಲ್ಲಿ ತಿಂಗಳಿಗೆ ಒಂದೂವರೆ ಕೋಟಿ ರೂ. ಆದಾಯ ನೀಡುತ್ತಿರುವ ದಾವಣಗೆರೆ ರೈಲ್ವೆ ನಿಲ್ದಾಣವನ್ನು ಹೊಸದಾಗಿ ನಿರ್ಮಾಣ ಮಾಡುವ ಉದ್ದೇಶದಿಂದ 18 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದು, ಈಗಾಗಲೇ ಕಾಮಗಾರಿ ಭರದಿಂದ ಸಾಗಿದ್ದು, ಜುಲೈ ತಿಂಗಳ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಇಂದು ಉದ್ಘಾಟನೆಗೊಂಡ ಎರಡನೇ ಪ್ರವೇಶದ್ವಾರವನ್ನು ಸುಮಾರು 4.5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿ ಪಡಿಸಲಾಗಿದೆ. ಫುಟ್‍ಓವರ್ ಬ್ರಿಡ್ಜ್, ಫ್ಲಾಟ್‍ಫಾರ್ಮ್ ಶೆಲ್ಟರ್, ಸ್ಟೇಷನ್ ಕಟ್ಟಡ, ಪಾರ್ಕಿಂಗ್ ವ್ಯವಸ್ಥೆ, ಗಾರ್ಡನ್ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿದಿನ ರೈಲ್ವೆಯಲ್ಲಿ ಪ್ರಯಾಣ ಬೆಳೆಸುವ ಸಾವಿರಾರು ಪ್ರಯಾಣಿಕರಿಗೆ ಅನುಕೂಲ ಆಗಲೆಂಬ ಉದ್ದೇಶದಿಂದ ಈ ಪ್ರವೇಶ ದ್ವಾರವನ್ನು ನಿರ್ಮಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ದಳಬೇಕೆಂದು ಸಲಹೆ ನೀಡಿದರು.
ಪ್ರತಿದಿನ ಸುಮಾರು 6500 ಪ್ರಯಾಣಿಕರು ದಾವಣಗೆರೆ ರೈಲ್ವೆ ನಿಲ್ದಾಣವನ್ನು ಬಳಸುತ್ತಿದ್ದು, ಸುಮಾರು 50 ಕ್ಕೂ ಹೆಚ್ಚು ಟ್ರೈನ್‍ಗಳು ಸಂಚರಿಸುತ್ತಿವೆ. ಈ ರೈಲ್ವೆ ನಿಲ್ದಾಣದಲ್ಲಿ ನಾಲ್ಕು ಎಸ್ಕಲೇಟರ್ ಅಳವಡಿಸಲು ಸೂಚಿಸಲಾಗಿದೆ. ಮಾಯಕೊಂಡದಿಂದ ಹರಿಹರದವರೆಗೆ ಈಗಾಗಲೇ 250 ಕೋಟಿ ರೂ. ವೆಚ್ಚದಲ್ಲಿ ಡಬ್ಲಿಂಗ್ ಕಾಮಗಾರಿ ಪೂರ್ಣಗೊಂಡಿದ್ದು, 2020ರ ಮಾರ್ಚ್ ವೇಳೆಗೆ ಹುಬ್ಬಳ್ಳಿವರೆಗಿನ ಡಬ್ಲಿಂಗ್ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಇಲ್ಲಿನ ಡಿಸಿಎಂ ಟೌನ್‍ಶಿಪ್ ಬಳಿ ರೈಲ್ವೆ ಸೇತುವೆ ಅವೈಜ್ಞಾನಿಕವಾಗಿತ್ತು. ಅದನ್ನು ಪುನರ್‍ನಿರ್ಮಾಣ ಮಾಡಿಕೊಡಲು ಸೂಚಿಸಿದ್ದ ಮೇರೆಗೆ 18 ಕೋಟಿ ರೂ. ವೆಚ್ಚದಲ್ಲಿ ಡಿಸಿಎಂ ಕೆಳಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಹರಿಹರದ ಅಮರಾವತಿ ಬಳಿ ರೈಲ್ವೆಗೇಟ್ 208ಕ್ಕೆ 30 ಕೋಟಿ ವೆಚ್ಚದಲ್ಲಿ ಮೇಲು ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು ಶೀಘ್ರದಲ್ಲಿ ಉದ್ಘಾಟನೆ ಮಾಡಲಾಗುವುದು. ನನ್ನ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 8 ಮಾನವಸಹಿತ ಲೆವೆಲ್ ಕ್ರಾಸಿಂಗ್‍ಗಳನ್ನು ಬದಲಾಯಿಸಿ ಸಬ್‍ವೇಗಳನ್ನು ನಿರ್ಮಾಣ ಮಾಡುವ ಮೂಲಕ ಅಪಘಾತ ಪ್ರಮಾಣವನ್ನು ತಗ್ಗಿಸಲಾಗಿದೆ ಎಂದು ಅವರು ವಿವರಿಸಿದರು.
ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ದೇಶಾದ್ಯಂತ ಉತ್ತಮ ರೈಲ್ವೆ ನೀಡುವ ಸೇವೆಯಲ್ಲಿ ಸರ್ಕಾರ ಉತ್ತಮ ಅಭಿವೃದ್ದಿ ಕಾಣುತ್ತಿದೆ. ದಾವಣಗೆರೆ ನಗರದ ರೈಲ್ವೆ ನಿಲ್ದಾಣ ಆಧುನೀಕರಣಗೊಳ್ಳುತ್ತಿರುವುದು ಸಂತೋಷದ ಸಂಗತಿಯಗಿದೆ. ರಾಜ್ಯದಲ್ಲಿ ಉತ್ತಮವಾದ ರೇಲ್ವೇಸ್ಟೇಷನ್ ಅಂದ್ರೆ ದಾವಣಗೆರೆಯದ್ದು ಎಂಬ ಹೆಸರು ತರಲು ಸಂಸದರು ಪಣ ತೊಟ್ಟು ಕೆಲಸ ಮಾಡುತ್ತಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಗೆಸ್ಟ್‍ಹೌಸ್ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಸಂಸದರು ಮಾಡಿಸಲಿ ಎಂದರು.
ಮಹಾನಗರ ಪಾಲಿಕೆ ಮೇಯರ್ ಬಿ.ಜೆ.ಅಜಯ್‍ಕುಮಾರ್ ಮಾತನಾಡಿ, ನಗರದ ರೈಲ್ವೇಸ್ಟೇಷನ್‍ನಲ್ಲಿದ್ದ ಒಂದೇ ದ್ವಾರದಿಂದ ಜನರಿಗೆ ಸಾಕಷ್ಟು ತೊಂದರೆ ಆಗುತ್ತಿತ್ತು. ಇನ್ನೊಂದು ಪ್ರವೇಶ ದ್ವಾರ ಇದ್ದಿದ್ದರೆ ಅನುಕೂಲವಾಗುತ್ತಿತ್ತು ಎಂಬ ಭಾವನೆ ನನ್ನನ್ನು ಸೇರಿದಂತೆ ಸಾರ್ವಜನಿಕರಲ್ಲಿತ್ತು. ಸಂಸದರು ಎರಡನೇ ದ್ವಾರಕ್ಕೆ ಚಾಲನೆ ನೀಡಿರುವುದು ಹೆಮ್ಮೆಯ ವಿಚಾರವಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ ಮಾತನಾಡಿ, ಜನ ಸಾಮಾನ್ಯರಿಗೆ ರೈಲ್ವೆ ಸೇವೆಯು ಅನುಕೂಲಕರವಾಗಿದ್ದು, ಬಸ್, ಕಾರು ಸೇರಿದಂತೆ ಇತರೆ ವಾಹನಗಳಲ್ಲಿ ಸಾರ್ವಜನಿಕರು ಓಡಾಡಿದರೆ ಅಪಘಾತ ವಾಗುವುದರಿಂದ ಸುರಕ್ಷತೆ ಇರುವುದಿಲ್ಲ. ಆದರೆ, ರೈಲ್ವೆ ಪ್ರಯಾಣ ಅಗ್ಗ ಹಾಗೂ ಸುರಕ್ಷಿತವಾಗಿರಲಿದೆ ಎಂದರು.
ಕಾರ್ಯಕ್ರಮದಲ್ಲಿ ಪಾಲಿಕೆ ಉಪ ಮೇಯರ್ ಸೌಮ್ಯ ಎಸ್.ನರೇಂದ್ರ ಕುಮಾರ್, ದಾವಣಗೆರೆ ಹರಿಹರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪೈಲ್ವಾನ್ ರಾಜನಹಳ್ಳಿ ಶಿವಕುಮಾರ್, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಂ.ವೀರೇಶ್ ಹನಗವಾಡಿ ಮತ್ತಿತರರು ಹಾಜರಿದ್ದರು.ನೈರುತ್ಯ ರೆಲ್ವೇ ವಿಭಾಗೀಯ ಪ್ರಾದೇಶಿಕ ವ್ಯವಸ್ಥಾಪಕಿ ಅಪರ್ಣಾ ಗರ್ಗ್ ಸ್ವಾಗತಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
