ದಿ.ಎಂ.ಪಿ.ರವೀಂದ್ರ ಅವರ 50ನೇ ಜನ್ಮ ದಿನೋತ್ಸವ

ಹರಪನಹಳ್ಳಿ:

       ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ಅವರು ವಿಧಾನಸಭೆಯಲ್ಲಿ ಗಟ್ಟಿ ದನಿಯಾಗಿ ಹೋರಾಟ ನಡೆಸಿದ ಫಲವಾಗಿ ಹರಪನಹಳ್ಳಿ ತಾಲ್ಲೂಕು ಸಂವಿಧಾನದ 371ಜೆ ಸೌಲಭ್ಯ ಪಡೆದುಕೊಳ್ಳುತ್ತಿದೆ ಎಂದು ಹೈದರಾಬಾದ ಕರ್ನಾಟಕ ಹೋರಾಟ ಸಮಿತಿ ಸಂಚಾಲಕ ರಜಾಕ ಉಸ್ತಾದ ಹೇಳಿದರು.

       ಮಾಜಿ ಶಾಸಕ, ದಿ.ಎಂ.ಪಿ.ರವೀಂದ್ರ ಅವರ 50ನೇ ಜನ್ಮ ದಿನೋತ್ಸವ ಅಂಗವಾಗಿ ಎಂ.ಪಿ. ಪ್ರಕಾಶ ಸಮಾಜಮುಖಿ ಟ್ರಸ್ಟ್ ವತಿಯಿಂದ ಪಟ್ಟಣದ ಎಡಿಬಿ ಕಾಲೇಜಿನಲ್ಲಿ ಶುಕ್ರವಾರ ಸಂಜೆ ಏರ್ಪಡಿಸಲಾಗಿದ್ದ ವಿಚಾರ ಸಂಕಿರಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

     ಹರಪನಹಳ್ಳಿ ಜನತೆಗೆ ಹೈ.ಕ ಸೌಲಭ್ಯ ಕೊಡಿಸುವ ಸಲವಾಗಿ ರವೀಂದ್ರರ ಸಾಕಷ್ಟು ಪ್ರಯತ್ನ ನಡೆಸಿದ್ದರು. ಅದು ಶೀಘ್ರ ಈಡೇರದಿದ್ದಾಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲೂ ಮುಂದಾಗಿದ್ದರು. ಆಗ ಸರ್ಕಾರ ಇವರ ಬೇಡಿಕೆಗೆ ಮಣಿದು ಬಳ್ಳಾರಿ ಜಿಲ್ಲೆಗೆ ಸೇರಿಸುವ ಜನರ ಆಶೋತ್ತರಕ್ಕೆ ಸ್ಪಂದಿಸಿತ್ತು. ಹೀಗೆ ಜನರ ಹೋರಾಟದ ಜತೆಗೆ ಜನಪ್ರತಿನಿಧಿಗಳ ಇಚ್ಛಾಶಕ್ತಿಯೂ ಬೇಕಾಗುತ್ತದೆ ಎಂದರು.
ಹೈದರಾಬಾದ್ ಕರ್ನಾಟಕಕ್ಕೆ 371ಜೆ ಸೌಲಭ್ಯದ ಪ್ರಮುಖ ರುವಾರಿಗಳಾದ ವೈಜನಾಥ ಪಾಟೀಲ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಆ ಭಾಗದ ಜನತೆ ನೆನೆಯಲೇಬೇಕು. ಹಾಗೆಯೇ ಹರಪನಹಳ್ಳಿ ಜನತೆ ಕೂಡ ಈ ಇಬ್ಬರ ನಾಯಕರ ಜತೆ ಎಂ.ಪಿ.ರವೀಂದ್ರ ಅವರನ್ನು ಸ್ಮರಿಸಬೇಕು. ಹರಪನಹಳ್ಳಿ ಬಳ್ಳಾರಿಯ ಒಂದು ಭಾಗವಾಗಿದ್ದರಿಂದ ಸೇರ್ಪಡೆ ವಿಷಯದಲ್ಲಿ ಹೈ.ಕ ಭಾಗದ ಜನರು ಚಕಾರ ಎತ್ತಲಿಲ್ಲ ಎಂದು ಹೇಳಿದರು.

       ಹಂಪಿ ವಿವಿಯ ಶಿವಪ್ರಕಾಶ ಮಾತನಾಡಿ, ಜಿಲ್ಲೆಗೆ ಹರಪನಹಳ್ಳಿ ಸೇರಿಸಿದ್ದು ಎಂ.ಪಿ.ರವೀಂದ್ರರ ಜೀವಮಾನದ ಸಾಧನೆ. ಕೇವಲ ಒಂದು ಬಾರಿ ಶಾಸಕರಾಗಿ ಅವರು ಕೈಗೊಂಡ ಕಾರ್ಯಗಳು ಸದಾ ಸ್ಮರಣೀಯ. ಅವರು ಬದುಕಿದ್ದರೆ ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ಹೆಸರು ಮಾಡುತ್ತಿದ್ದರು. ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಿ ಸಾಕಷ್ಟು ಹೆಸರು ಮಾಡಿದ್ದರು ಎಂದರು.

      ಜಾನಪದ ಅಕಾಡೆಮಿ ಸದಸ್ಯ ಪಿಚ್ಚಳ್ಳಿ ಶ್ರೀನಿವಾಸ ಮಾತನಾಡಿ, ಸಜ್ಜನ ರಾಜಕಾರಣಿ ಎಂ.ಪಿ. ಪ್ರಕಾಶ ಅವರು ಸಾಂಸ್ಕೃತಿಕ ರಂಗಕ್ಕೆ ಸಲ್ಲಿಸಿದ ಸೇವೆಯನ್ನು ಮುಂದುವರಿಸಿದವರು ರವೀಂದ್ರರು. ನೆಲಮೂಲ ಸಂಸ್ಕೃತಿ, ಜನಪದ ಕ್ಷೇತ್ರವನ್ನು ಪೋಷಣೆ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು.

       ಎಂ.ಪಿ. ಪ್ರಕಾಶ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ.ವೀಣಾ ಮಾತನಾಡಿ, ಸೋಲಿಲ್ಲದ ಸರದಾರನಂತೆ ಬದುಕು ಕಂಡವರು ಸಹೋದರ ರವೀಂದ್ರರು. ಅವರು ನಮ್ಮನ್ನು ಅಗಲಿದ್ದರೂ ಅವರ ಪ್ರತಿಬಿಂಬವನ್ನು ಜನರಲ್ಲಿ ಕಾಣುತ್ತಿದ್ದೇವೆ. ಅಪ್ಪಾಜಿ ಹಾಗೂ ರವೀಂದ್ರ ಅಣ್ಣ ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗುತ್ತಿದ್ದೇವೆ ಎಂದು ಹೇಳಿದರು.

        ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಬಿ. ಪರಶುರಾಮಪ್ಪ ಮಾತನಾಡಿ, ರವೀಂದ್ರರದ್ದು ನೇರ-ನುಡಿ ವ್ಯಕ್ತಿತ್ವ. ಚುನಾವಣೆ ಸಂದರ್ಭದಲ್ಲಿ ಸುಳ್ಳು ಪ್ರಚಾರ ಮಾಡಲಿಲ್ಲ. ಜನರು 371ಜೆ ಸೌಲಭ್ಯದ ಬಗ್ಗೆ ಅರ್ಥ ಮಾಡಿಕೊಳ್ಳದೇ ಅವರ ಸೋಲಿಗೆ ಕಾರಣರಾದರು. ಅವರಿಗೆ ಆಗಿರುವ ಅನ್ಯಾಯವನ್ನು ಮುಂದಿನ ದಿನಗಳಲ್ಲಿ ಸರಿಪಡಿಸಬೇಕಿದೆ. ಉಸಿರು ನಿಂತ ಮೇಲೆ ಹೆಸರು ಬರುತ್ತೆ ಎಂಬುದಕ್ಕೆ ರವೀಂದ್ರರೇ ಸಾಕ್ಷಿ ಎಂದರು.

        ಸಾನ್ನಿಧ್ಯ ವಹಿಸಿದ್ದ ಲಿಂಗನಾಯಕನಹಳ್ಳಿ ಶ್ರೀ ಚನ್ನಬಸವ ಮಹಾಸ್ವಾಮೀಜಿ ಮಾತನಾಡಿ, ರವೀಂದ್ರರು ಸಣ್ಣ ವಯಸ್ಸಿನಲ್ಲೂ ಮುತ್ಸದಿ ಕೆಲಸ ಮಾಡಿದ್ದಾರೆ. ಎಂ.ಪಿ.ಪ್ರಕಾಶ ಕುಟುಂಬ ಜನಸೇವೆ ಇಲ್ಲಿಗೆ ನಿಲ್ಲಬಾರದು. ಹೀಗಾಗಿ ಮಾತೋಶ್ರೀ ರುದ್ರಾಂಬ ಅವರು ತಮ್ಮ ಮಕ್ಕಳಲ್ಲಿ ಯಾರನ್ನಾದರು ಒಬ್ಬರನ್ನು ರಾಜಕೀಯವಾಗಿ ಮುಂಚೂಣಿಗೆ ತರಬೇಕು ಎಂದು ಹೇಳಿದರು.

       ಎಂ.ಪಿ.ರುದ್ರಂಬಾ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಹಲಗೇರಿ ಮಂಜಪ್ಪ, ಎಂ.ಪಿ.ಸುಮಾ, ಡಾ.ಮಹಾಂತೇಶ ಚರಂತಿಮಠ, ಸಾಬಳ್ಳಿ ಜಂಬಣ್ಣ, ಟಿ.ಎಚ್.ಎಂ. ಮಂಜುನಾಥ, ಕವಿತಾ ವಾಗೇಶ್, ಶಿವಕುಮಾರ ನಾಯ್ಕ, ಡಿ.ಶ್ರೀಕಾಂತ, ದುಗ್ಗಾವತ್ತಿ ಸಿದ್ದೇಶ್, ಮುಸಾಸಾಬ್, ರೇಖಮ್ಮ, ಕಾಂತೇಶ್ ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap