ದಾವಣಗೆರೆ
ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಒಟ್ಟು 52 ಅತ್ಯಾಧುನಿಕ ಬಸ್ ತಂಗುದಾಣಗಳು ನಿರ್ಮಾಣವಾಗಲಿವೆ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದರು.
ನಗರದ ಶಿವಾಲಿ ಚಿತ್ರಮಂದಿರದ ಬಳಿಯಲ್ಲಿ ಭಾನುವಾರ ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣಗೊಳ್ಳಲಿರುವ ಬಸ್ ತಂಗುದಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ದಾವಣಗೆರೆ ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರಗಲ್ಲಿ 52 ಕಡೆಗಳಲ್ಲಿ ಅತ್ಯಾಧುನಿಕ ಬಸ್ ತಂಗುದಾಣ ನಿರ್ಮಾಣವಾಗಲಿದ್ದು, ಈ ಪೈಕಿ ಈಗಾಗಲೇ 13 ಕಡೆಗಳಲ್ಲಿರುವ ತಂಗುದಾಣಗಳ ಪುನರ್‍ನವೀಕರಣ, ನಾಲ್ಕು ಕಡೆ ಇರುವುದನ್ನು ಕೆಡವಿ ಹೊಸದಾಗಿ ಕಟ್ಟಡ ನಿರ್ಮಾಣ ಹಾಗೂ ಇನ್ನೂ 32 ಕಡೆಗಳಲ್ಲಿ ಹೊಸದಾಗಿ ನಿರ್ಮಾಣ ಮಾಡಲಾಗುವುದು ಎಂದರು.
ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ತಲೆ ಎತ್ತಲಿರುವ ಈ ಅತ್ಯಾಧುನಿಕ ಬಸ್ ತಂಗುದಾಣವು ಒಂಭತ್ತು ಮೀಟರ್ ಉದ್ದ, ಎರಡು ಮೀಟರ್ ಆಗಲ ವಿಸ್ತೀರ್ಣದಿಂದ ಕೂಡಿರಲಿದೆ. ತಂಗುದಾಣದಲ್ಲಿ ಈ ಟಾಯಲೇಟ್, ಬಸ್‍ಗಳ ಮಾರ್ಗದ ಸೂಚನಾ ಫಲಕ, ಜಾಹೀರಾತು ಫಲಕ, ಅಂಗವಿಕಲರ ಸ್ನೇಹಿಯಾಗಿಲು ಸೌಲಭ್ಯಗಳ ವ್ಯವಸ್ಥೆ, ಮೊಬೈಲ್ ಚಾರ್ಚಿಂಗ್ ಪಾಯಿಂಟ್, ಅಸನಗಳ ವ್ಯವಸ್ಥೆ ಹಾಗೂ ಭದ್ರತೆಗಾಗಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲಾಗುವುದು. ಪ್ರತಿ ತಂಗುದಾಣಕ್ಕೂ 7.50 ಲಕ್ಷ ರೂ. ವೆಚ್ಚವಾಗಲಿದ್ದು, ಮೂರು ತಿಂಗಳಿನಲ್ಲಿ ಕಾಮಗಾರಿಗಳು ಪೂರ್ಣಗೊಳ್ಳಲಿದೆ ಎಂದರು.
ಸ್ಮಾರ್ಟ್‍ಸಿಟಿ ಯೋಜನೆಯಿಂದ ಶೇ.80ರಷ್ಟು ಅನುದಾನವನ್ನು ಭರಿಸಲಾಗುವುದು ಹಾಗೂ ತಂಗುದಾಣ ನಿರ್ಮಾಣಕ್ಕೆ ಗುತ್ತಿಗೆ ಪಡೆದಿರುವಚ ಬೆಂಗಳೂರಿನ ಬೆನಕಾ ಆಟೋಮೇಷನ್ಸ್ ಶೇ.20 ರಷ್ಟು ಅನುದಾನ ಭರಿಸಲಿದೆ ಎಂದರು.
ತಂಗುದಾಣ ಎಲ್ಲೆಲ್ಲಿ:
ಪಿ.ಜೆ. ಹೋಟೆಲ್ ಹತ್ತಿರ, ಎವಿಕೆ ಕಾಲೇಜ್, ವಿಜಯ್ ಹೋಟೆಲ್, ಗುಂಡಿ ಸರ್ಕಲ್, ಯುಬಿಡಿಟಿ ಕಾಲೇಜ್, ಯುಬಿಡಿಟಿ ಹಾಸ್ಟೆಲ್, ವಿದ್ಯಾನಗರ ಎರಡನೆಯ ಬಸ್ ನಿಲ್ದಾಣ, ಕಾಸಲ್ ಶ್ರೀನಿವಾಸ್ ಶೆಟ್ಟಿ ಪಾರ್ಕ್, ಬಾಪೂಜಿ ಸಮುದಾಯ ಭವನ, ಬಿಐeಟಿ ಕಾಲೇಜ್, ವಿದ್ಯಾರ್ಥಿ ಭವನ್ ಸರ್ಕಲ್, ಸ್ಟೇಡಿಯಂ, ಐಟಿಐ ಕಾಲೇಜ್, ಲೋಕಿಕೆರೆ ರಸ್ತೆ ಜಂಕ್ಷನ್, ಇಂಡಸ್ಟ್ರಿಯಲ್ ಏರಿಯಾ ಲೋಕಿಕೆರೆ, ಎಸ್‍ಎಸ್ ಹೈಟೆಕ್ ಆಸ್ಪತ್ರೆ, ಅರಳಿಮರ ಸ್ಟಾಫ್, ಹೆಚ್‍ಕೆಆರ್ ಸರ್ಕಲ್ ನಿಟುವಳ್ಳಿ, ನಿಟುವಳ್ಳಿ ಪೊಲೀಸ್ ಸ್ಟೇಷನ್, ಜಯನಗರದ ಕಾಳಿದಾಸ ಸರ್ಕಲ್, ಜಿಲ್ಲಾ ನ್ಯಾಯಾಲಯ, ಶಿವಾಲಿ ಚಿತ್ರಮಂದಿರ, ಬೂದಿಹಾಳ್ ರಿಂಗ್ ರೋಡ್, ಆರ್‍ಟಿಓ ಸರ್ಕಲ್, ಚಿಗಟೇರಿ ಆಸ್ಪತ್ರೆ ವಿದ್ಯಾನಗರ ಮೊದಲನೆಯ ಬಸ್‍ಸ್ಟಾಪ್, ವಿದ್ಯಾನಗರ ಮೂರನೇ ಬಸ್‍ಸ್ಟಾಪ್, ಶಾಮನೂರು, ಬಿಐeಟಿ ಬಾಯ್ಸ್ ಹಾಸ್ಟೆಲ್ ಸೇರಿದಂತೆ ಇನ್ನಿತರೇ ಕಡೆ ಬಸ್ ತಂಗುದಾಣ ನಿರ್ಮಾಣವಾಗಲಿವೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಮೇಯರ್ ಶೋಭಾ ಪಲ್ಲಾಗಟ್ಟೆ, ಮಾಜಿ ಶಾಸಕ ಬಿ.ಪಿ. ಹರೀಶ್, ಪಾಲಿಕೆ ಸದಸ್ಯರಾದ ದಿನೇಶ್ ಕೆ.ಶೆಟ್ಟಿ, ಗೌರಮ್ಮ ಚಂದ್ರಪ್ಪ, ಸ್ಮಾಟ್‍ಸಿಟಿ ಯೋಜನೆ ಸದಸ್ಯ ನಾಗರಾಜ್, ಕಾಂಗ್ರೆಸ್ ಮುಖಂಡರಾದ ಎಸ್.ಮಲ್ಲಿಕಾರ್ಜುನ, ಚಂದ್ರಪ್ಪ, ನೂರ್ ಅಹಮದ್, ಸ್ಮಾರ್ಟ್‍ಸಿಟಿ ಯೋಜನೆಯ ಜೆಇ ಪ್ರಮೋದ್, ಕನ್‍ಸ್ಟ್ರಕ್ಷನ್ ವ್ಯವಸ್ಥಾಪಕ ಶ್ರೀನಾಥ ರೆಡ್ಡಿ, ಸಚಿನ್, ಪ್ರಮೋದ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
