58.72 ಕೋಟಿ ರೂ. ರಾಜಸ್ವ ಸಂಗ್ರಹ : ಜಿ.ಎಸ್.ಹೆಗಡೆ

ಚಿತ್ರದುರ್ಗ :
    ಚಿತ್ರದುರ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯು ಪ್ರಸಕ್ತ ವರ್ಷದಲ್ಲಿ ಈವರೆಗೆ 58.72 ಕೋಟಿ ರೂ. ರಾಜಸ್ವ ತೆರಿಗೆ ಸಂಗ್ರಹಿಸುವ ಮೂಲಕ ಶಿವಮೊಗ್ಗ ಸಾರಿಗೆ ವಿಭಾಗದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಚಿತ್ರದುರ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್. ಹೆಗಡೆ ತಿಳಿಸಿದ್ದಾರೆ.
    ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರಕ್ಕೆ ಹಣ ಬೇಕು.  ಸರ್ಕಾರಕ್ಕೆ ಈ ಹಣ ದೊರೆಯುವುದು ಸಾರ್ವಜನಿಕರು ತುಂಬುವ ತೆರಿಗೆಯಿಂದ. ತೆರಿಗೆ ಸಂಗ್ರಹ ವಿಷಯದಲ್ಲಿ ರಾಜ್ಯದಲ್ಲಿ ಮುಂಚೂಣಿಯಲ್ಲಿರುವ ಇಲಾಖೆ ಎಂದರೆ, ಅದು, ಸಾರಿಗೆ ಇಲಾಖೆ, ವಾಹನಗಳ ನೊಂದಣಿ, ನಿಯಮ ಉಲ್ಲಂಘಿಸುವ ವಾಹನಗಳ ಮಾಲೀಕರಿಂದ ದಂಡ ವಸೂಲಿ ಸೇರಿದಂತೆ ಹಲವು ಬಗೆಯಲ್ಲಿ ರಾಜಸ್ವ ಸಂಗ್ರಹಿಸುವ ಕಾರ್ಯವನ್ನು ಸಾರಿಗೆ ಇಲಾಖೆ ಕೈಗೊಳ್ಳುತ್ತಿದ್ದು, ರಾಜಸ್ವ ಸಂಗ್ರಹದಲ್ಲಿ ಸಾರಿಗೆ ಇಲಾಖೆಯದ್ದೇ ಸಿಂಹಪಾಲು.  
  ಚಿತ್ರದುರ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಪ್ರಸಕ್ತ ಸಾಲಿನಲ್ಲಿ 78.01 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿ ನಿಗದಿಪಡಿಸಲಾಗಿದೆ. 2019 ಡಿಸೆಂಬರ್ ಅಂತ್ಯದವರೆಗೆ 58.50 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿ ನಿಗದಿಪಡಿಸಲಾಗಿದ್ದು, ಜಿಲ್ಲೆಯಲ್ಲಿ ಡಿಸೆಂಬರ್ ವರೆಗೆ 58.72 ಕೋಟಿ ರೂ. ರಾಜಸ್ವ ಸಂಗ್ರಹಿಸಿ ಶೇ. 100.36 ರಷ್ಟು ಅಂದರೆ 21.28 ಲಕ್ಷ ರೂ. ಹೆಚ್ಚು ಗುರಿ ಮೀರಿ ರಾಜಸ್ವ ಸಂಗ್ರಹಿಸಲಾಗಿದೆ.
  ಪ್ರಸಕ್ತ ವರ್ಷದಲ್ಲಿ ಅತಿ ಹೆಚ್ಚು 7.85 ಕೋಟಿ ರೂ. ನವೆಂಬರ್ ತಿಂಗಳು ಒಂದರಲ್ಲೇ ಸಂಗ್ರಹವಾಗಿದ್ದು, ಈ ವರ್ಷದಲ್ಲಿ ಅತಿ ಕಡಿಮೆ ಆಗಸ್ಟ್ ತಿಂಗಳಿನಲ್ಲಿ 5.79 ಕೋಟಿ ರೂ. ಸಂಗ್ರಹವಾಗಿದೆ.  ಕಳೆದ 2018-19 ನೇ ಸಾಲಿನಲ್ಲಿ ಜಿಲ್ಲೆಗೆ 69.35 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿಗೆ ಬದಲಾಗಿ 73.43 ಕೋಟಿ ರೂ. ಗುರಿ ಮೀರಿ ರಾಜಸ್ವ ಸಂಗ್ರಹವಾಗಿದೆ. 
   2017-18 ರಲ್ಲಿಯೂ 63.30 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿಗೆ ಬದಲಾಗಿ 66.71 ಕೋಟಿ ರೂ. ಗುರಿ ಮೀರಿ ರಾಜಸ್ವ ಸಂಗ್ರಹವಾಗಿತ್ತು.  ಶಿವಮೊಗ್ಗ ಸಾರಿಗೆ ವಿಭಾಗದಲ್ಲಿ ಬರುವ 06 ಜಿಲ್ಲೆಗಳ ಪೈಕಿ ನಿಗದಿತ ಗುರಿ ಮೀರಿ ರಾಜಸ್ವ ಸಂಗ್ರಹದಲ್ಲಿ ಚಿತ್ರದುರ್ಗ ಜಿಲ್ಲೆಯೇ ಮೊದಲ ಸ್ಥಾನದಲ್ಲಿದೆ ಎಂದು ಅವರು ತಿಳಿಸಿದ್ದಾರೆ
2.30 ಕೋಟಿ ರೂ. ದಂಡ ವಸೂಲಿ : 
   ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಿಂದ ಜಿಲ್ಲೆಯಲ್ಲಿ ವಿವಿಧ ವಾಹನಗಳ ತಪಾಸಣೆ ನಡೆಸುವ ಕಾರ್ಯ ನಿರಂತರವಾಗಿದ್ದು, ಪ್ರಸಕ್ತ ವರ್ಷ ಡಿಸೆಂಬರ್ ವರೆಗೆ ಒಟ್ಟು 41212 ವಾಹನಗಳ ತಪಾಸಣೆ ಮಾಡಲಾಗಿದ್ದು, ಸಾರಿಗೆ ಹಾಗೂ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ 3776 ಪ್ರಕರಣಗಳನ್ನು ದಾಖಲಿಸಲಾಗಿದ್ದು, 14 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.  ಪ್ರಸಕ್ತ ವರ್ಷ ಈವರೆಗೆ ಒಟ್ಟು 2.30 ಕೊಟಿ ರೂ. ದಂಡ ಹಾಗೂ ತೆರಿಗೆ ವಸೂಲಿ ಮಾಡಲಾಗಿದೆ.  ಕಳೆದ 2018-19 ರಲ್ಲಿ ಒಟ್ಟು 15428 ವಾಹನಗಳ ತಪಾಸಣೆ ನಡೆಸಿ, ನಿಯಮ ಉಲ್ಲಂಘಿಸಿದ್ದಕ್ಕಾಗಿ 4646 ಪ್ರಕರಣ ದಾಖಲಿಸಲಾಗಿತ್ತು.  20 ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, 6.16 ಕೋಟಿ ರೂ. ದಂಡ ಹಾಗೂ ತೆರಿಗೆ ವಸೂಲಿ ಮಾಡಲಾಗಿತ್ತು.
ರಸ್ತೆ ಸುರಕ್ಷತಾ ಸಪ್ತಾಹ :
  ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರಿಗೆ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಚಿತ್ರದುರ್ಗ ಆರ್‍ಟಿಒ ಕಚೇರಿಯಿಂದ ಜ. 13 ರಿಂದ 19 ರವರೆಗೆ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಯಿತು.  ಈ ಅವಧಿಯಲ್ಲಿ ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಹಾಗೂ ಕಲಾ ಕಾಲೇಜು ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ನಿಯಮಗಳು, ಹೆಲ್ಮೆಟ್ ಬಳಕೆ ಕುರಿತು ಅರಿವು ಮೂಡಿಸಲು ಕಾರ್ಯಗಾರ ನಡೆಸಲಾಗಿದೆ.  ಚಳ್ಳಕೆರೆ ಪಟ್ಟಣದಲ್ಲಿ ಆಟೋ ರಿಕ್ಷಾ ಹಾಗೂ ಬಸ್ ಚಾಲಕರಿಗೆ ರಸ್ತೆ ಸುರಕ್ಷತೆ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗಿದೆ.
ಜಿಲ್ಲೆಯಲ್ಲಿ 3.70 ಲಕ್ಷ ವಾಹನಗಳು :
    ಜಿಲ್ಲೆಯಲ್ಲಿ ಕಾರು, ಬೈಕ್, ಬಸ್, ಟ್ರ್ಯಾಕ್ಟರ್ ಸೇರಿದಂತೆ ವಿವಿಧ ಬಗೆಯ ಒಟ್ಟು 370607 ವಾಹನಗಳು ಇದುವರೆಗೂ ನೊಂದಣಿಯಾಗಿವೆ.  ಇದರಲ್ಲಿ ಬಹುತೇಕ 2.72 ಲಕ್ಷ ಮೋಟಾರ್ ಬೈಕ್, ಸ್ಕೂಟಿಗಳೇ ನೊಂದಣಿಯಾಗಿವೆ.  ಉಳಿದಂತೆ ಕಾರುಗಳು 20744, ಆಟೋರಿಕ್ಷಾ-12340, ಟ್ರ್ಯಾಕ್ಟರ್-20158, ಗೂಡ್ಸ್ ವಾಹನಗಳು-10917 ಸೇರಿದಂತೆ ಒಟ್ಟು 3.70 ಲಕ್ಷ ವಾಹನಗಳು ನೊಂದಣಿಯಾಗಿವೆ.  ರಾಜ್ಯದ ಇತರೆ ಜಿಲ್ಲೆಗಳನ್ನು ಹೋಲಿಸಿದಾಗ ಚಿತ್ರದುರ್ಗ ಜಿಲ್ಲೆಯಲ್ಲಿ ಕಾರುಗಳು ನೊಂದಣಿಯಾಗುವುದು ಕಡಿಮೆ ಇದೆ.  ಜಿಲ್ಲೆಯಲ್ಲಿ ಸರಾಸರಿ ತಿಂಗಳಿಗೆ ಕಾರುಗಳ ನೊಂದಣಿ ಸಂಖ್ಯೆ 120 ರ ಗಡಿ ದಾಟುವುದಿಲ್ಲ ಎನ್ನುತ್ತಾರೆ ಆರ್‍ಟಿಒ ಜಿ.ಎಸ್. ಹೆಗಡೆ ಅವರು.
 
   ಜಿಲ್ಲೆಯಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಪಾಲನೆ ಕುರಿತಂತೆ ಇಲಾಖೆ ಅರಿವು ಮೂಡಿಸುವ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದೆ.  ಖಾಸಗಿ ವಾಹನಗಳು ನಿಯಮ ಉಲ್ಲಂಘಿಸಿ, ನೊಂದಣಿ ಫಲಕದ ಮೇಲೆ ಬಗೆ ಬಗೆಯ ಹೆಸರುಗಳನ್ನು ನಮೂದಿಸಿ ಹಾಕಿಸಿರುವುದು ಗಮನಕ್ಕೆ ಬಂದಿದ್ದು, ಇದನ್ನು ತೆರವುಗೊಳಿಸಲು ಈಗಾಗಲೆ ಪ್ರಕಟಣೆ ನೀಡಲಾಗಿದೆ.  ವಾಹನಗಳ ತಪಾಸಣೆಯನ್ನೂ ನಡೆಸಲಾಗುತ್ತಿದ್ದು, ಸದ್ಯ ತೆರವುಗೊಳಿಸಲು ತಿಳಿಸುತ್ತಿದ್ದೇವೆ.  ನಂತರದ ದಿನಗಳಲ್ಲಿಯೂ ಕಂಡುಬಂದಲ್ಲಿ ದಂಡ ವಸೂಲಿ ಮಾಡಿ, ಕೇಸ್ ದಾಖಲಿಸಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್. ಹೆಗಡೆ ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link