ಗುತ್ತಲ :
ಮಕ್ಕಳಿಗೆ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆತಾಗ ಮಾತ್ರ ಭವಿಷ್ಯದಲ್ಲಿ ಮಕ್ಕಳ ಜೀವನ ಉಜ್ವಲವಾಗಿರುತ್ತದೆ ಎಂದು ಶ್ರೀ ಶಿವಯೋಗಿಶ್ವರ ಸ್ವಾಮೀಜಿ ಹೇಳಿದರು.
ಗುತ್ತಲ ಸಮೀಪದ ಅಗಡಿಯ ಶ್ರೀ ಪ್ರಭುಸ್ವಾಮಿ ಮಠದಲ್ಲಿ ನಡೆದ ಲಿಂ.ಶ್ರೀ ರುದ್ರಮುನಿ ಮಹಾಶಿವಯೋಗಿಗಳವರ 59ನೇ ಪುಣ್ಯಸ್ಮರಣೆಯ ನಿಮಿತ್ತ ನೂತನ ಕೊಠಡಿಗಳ ಉದ್ಘಾಟನೆ ಮಾಡಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಮಾನಗಳಲ್ಲಿ ಶಿಕ್ಷಣವೂ ಕೂಡಾ ಒಂದು ವ್ಯಾಪಾರವಾಗಿದೆ ಇಂತಹ ಕಾಲದಲ್ಲಿ ಅಗಡಿ ಪ್ರಭುಸ್ವಾಮಿಮಠ ಹಾಗೂ ಗುತ್ತಲ ಕಲ್ಮಠದ ಪೀಠಾಧಿಪತಿಯಾದ ಶ್ರೀ ಗುರುಸಿದ್ಧ ಸ್ವಾಮೀಜಿ ಯಾವೂದೇ ಫಲಾಪೇಕ್ಷೇಯನ್ನು ಅಪೇಕ್ಷಿಸದೆ ಮಕ್ಕಳಿಗೆ ನಿಸ್ವಾರ್ಥತೆಯಿಂದ ಶಿಕ್ಷಣವನ್ನು ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಅಲ್ಲದೇ ಲಿಂ.ಶ್ರೀ ರುದ್ರಮುನಿ ಮಹಾಶಿವಯೋಗಿಗಳವರ 59ನೇ ಪುಣ್ಯಸ್ಮರಣೆಯ ನಿಮಿತ್ತ ಅಗಡಿಯ ಪ್ರಭುಸ್ವಾಮಿ ಮಠದಲ್ಲಿ ಶ್ರೀ ಚೌಡೇಶ್ವರಿ ದೇವಿಗೆ ಹಾಗೂ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯ ಹಾಗೂ ಚೊಚ್ಚಲ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಅದರ ಜೊತೆಗೆ ಚಂಡಿಕಾ ಹೋಮವನ್ನು ಮಾಡಲಾಯಿತು.
ಹೋಮ ಕಾರ್ಯಕ್ರಮದಲ್ಲಿ ಮಹಿಳೆಯರು : ಶ್ರೀ ಚೌಡೇಶ್ವರಿ ದೇವಿಗೆ ಹಾಗೂ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಪೂರ್ಣಗೊಂಡ ನಂತರ ಶ್ರೀ ಮಠಕ್ಕೆ ಆಗಮಿಸಿದಂತಹ ಭಕ್ತಾಧಿಗಳು ಚಂಡಿಕಾ ಹೋಮದಲ್ಲಿ ಪಾಲ್ಗೊಂಡು ತನು ಮನದಿಂದ ಭಾಗವಹಿಸಿದರು.
ಸೀಮಂತ ಕಾರ್ಯಕ್ರಮ : ಅಗಡಿ ಹಾಗೂ ಸುತ್ತಮುತ್ತಲಿನ ಗ್ರಾಮದ ಬಡ ಕುಟುಂಬದ ಗರ್ಭಿಣಿ ಮಹಿಳೆಯರಿಗೆ ಆಶಾ ಕಾರ್ಯಕರ್ತೆಯರು,ಅಂಗನವಾಡಿ ಸಹಾಯಕರು ಹಾಗೂ ಸ್ತ್ರೀ ಸ್ವ-ಸಹಾಯ ಸಂಘಗಳ ಮಹಿಳೆಯರು ಉಡಿ ತುಂಬುವ ಮೂಲಕ ಸೀಮಂತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಶಾಲೆಯ ನೂತನ ಕೊಠಡಿಗಳ ಉದ್ಘಾಟನೆಯ ಅಂಗವಾಗಿ ಶಾಲೆಯ ಮಕ್ಕಳು ಮ,ಆಡಿದಂತಹ ವಸ್ತು ಪ್ರದರ್ಶನ ಪಾಲಕರ ಹಾಗೂ ಶ್ರೀ ಮಠದ ಭಕ್ತರ ಗಮನಸೆಳೆಯಿತು.
ಕಾರ್ಯಕ್ರಮದಲ್ಲಿ : ಗುರುಸಿದ್ಧ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ, ಅಭಿನವ ಪ್ರಭು ಸ್ವಾಮೀಜಿ,ಬಸವರಾಜ ಸ್ವಾಮೀಜಿ, ಹಾವೇರಿ ಸಹಾಯಕ ಕೃಷಿ ನಿರ್ದೇಶಕ ಕರಿಯಲ್ಲಪ್ಪ ಕೊರಚರ, ನಾಗರಾಜ ಬಸೇಗಣ್ಣಿ, ಶಂಭಣ್ಣ ಬಸೇಗಣ್ಣಿ, ಶಿವಮೂರ್ತೆಪ್ಪ ಪಟ್ಟಣಶೆಟ್ಟಿ, ಮಂಜಯ್ಯ ಹಿರೇಮಠ, ಪಕ್ಕಿರಯ್ಯ ಕುಲಕರ್ಣಿ, ಇಮಾಂಬಿ ಹೊಂಬರಡಿ ಹಾಗೂ ಶ್ರೀ ಸಂಗನಬಸವ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ಸಿಬ್ಬಂದಿ ವರ್ಗ ಮತ್ತು ಶ್ರೀ ಮಠದ ಭಕ್ತವೃಂದ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ