ಹಾವೇರಿ
ಅನುಸೂಚಿತ ಜಾತಿಗಳ ಉಪಯೋಜನೆ ಹಾಗೂ ಬುಡಕಟ್ಟು ಉಪಯೋಜನೆಗಳ ಮಾಹೆಯಾನ ಜಿಲ್ಲೆಯಲ್ಲಿ ಸಾಧಿಸಿದ ಪ್ರಗತಿ ವರದಿಯನ್ನು ಸಮಾಜ ಕಲ್ಯಾಣ ಇಲಾಖೆಯ ಗೂಗಲ್‍ಶೀಟನಲ್ಲಿ ಅಪ್‍ಲೋಡ್ ಮಾಡುವಂತೆ ಅನುಷ್ಠಾನಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ 2013ರನ್ವಯ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಸಕ್ತ ಸಾಲಿನ ಜೂನ್ ಮಾಹೆಯ ಪ್ರಗತಿ ಪರಿಶೀಲನೆ ನಡೆಸಿದರು.
ಪ್ರತಿ ತಿಂಗಳು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿಶೇಷ ಯೋಜನೆಯಡಿ ಸಾಧಿಸಿರುವ ಪ್ರಗತಿಯ ಆರ್ಥಿಕ ಮತ್ತು ಭೌತಿಕ ಸಾಧನೆಯನ್ನು ವಿವರವನ್ನು ಆ್ಯಪ್ ಮೂಲಕವೇ ಮಾಹಿತಿ ನೀಡಬೇಕು. ಸಮಾಜ ಕಲ್ಯಾಣ ಇಲಾಖೆಯ ವೆಬ್‍ಸೈಟ್‍ನಲ್ಲಿ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳುವಂತೆ ಸೂಚಿಸಿದರು.
ಇಲಾಖಾವಾರು ಅನುಸೂಚಿತ ಜಾತಿ ಮತ್ತು ಬುಡಕಟ್ಟು ಉಪಯೋಜನೆಗಳಡಿ ಬಿಡುಗಡೆಯಾದ ಅನುದಾನ, ಅನುಷ್ಠಾನಗೊಂಡಿರುವ ಕಾಮಗಾರಿವಾರು ವಿವರ, ಫಲಾನುಭವಿವಾರು ಮಾಹಿತಿಯನ್ನು ಸಲ್ಲಿಸಬೇಕು. ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಯಾವುದೇ ಲೋಪವಾಗಬಾರದು ಎಂದು ಸೂಚಿಸಿದರು.
ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ ಇಲಾಖೆ, ತುಂಗಾ ಮೇಲ್ದಂಡೆ ಯೋಜನೆ, ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಅಭಿವೃದ್ಧಿ ಇಲಾಖೆ ಕೈಗೊಳ್ಳುವ ರಸ್ತೆ, ಕಟ್ಟಡ ಕಾಮಗಾರಿಗಳ ಪ್ರಗತಿ ಮಾಹಿತಿ ಸಂದರ್ಭದಲ್ಲಿ ಕಾಮಗಾರಿ ಕೈಗೊಂಡ ಸ್ಥಳದ ಮಾಹಿತಿ, ಭೌತಿಕ ಮತ್ತು ಆರ್ಥಿಕ ವಿವರವನ್ನು ಸಲ್ಲಿಸಬೇಕು. ಕಾಮಗಾರಿಯ ಗುಣಮಟ್ಟ ಹಾಗೂ ಅನುಷ್ಠಾನಗೊಂಡಿರುವ ಸ್ಥಳ ಪರಿಶೀಲನೆ ನಡೆಸುವಂತೆ ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೇಷ್ಮೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತೋಟಗಾರಿಕೆ ಇಲಾಖೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಯೋಜನೆಯ ಅನುಷ್ಠಾನ ಕುರಿತ ಪರಿಶೀಲನೆಗೆ ಪ್ರತ್ಯೇಕ ಸಭೆ ನಿಗಧಿಪಡಿಸಲು ಸೂಚಿಸಿದರು. ಕೃಷಿ ಭಾಗ್ಯ ಯೋಜನೆಯಡಿ ಕಳೆದ ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ 1704 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ತುಂಗಾ ಮೇಲ್ದಂಡೆ ಯೋಜನೆಯಡಿ ವಿಶೇಷ ಘಟಕ ಯೋಜನೆಯಡಿ ಕಳೆದ ಸಾಲಿನಲ್ಲಿ 12 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು ಮೂರು ಕಾಮಗಾರಿಗಳು ಮುಕ್ತಾಗೊಂಡಿವೆ. 353.43 ಲಕ್ಷ ರೂ. ಆರ್ಥಿಕ ಸಾಧನೆ ಮಾಡಲಾಗಿದೆ ಎಂದು ತಿಳಿಸಿದರು.
ಜೂನ್ ಮಾಹೆಯಲ್ಲಿ ಕೆ.ಆರ್.ಡಿ.ಎಲ್., ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಣ್ಣ ನೀರಾವರಿ ಇಲಾಖೆ ಶೇ.100 ರಷ್ಟು ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದೆ. ನಗರಾಭಿವೃದ್ಧಿ ಇಲಾಖೆ ಶೇ.87ರಷ್ಟು, ಕೃಷಿ ಇಲಾಖೆ ಶೇ.60 ರಷ್ಟು ಸಾಧನೆ ಮಾಡಿರುವುದಾಗಿ ಸಭೆಗೆ ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ, ಸಮಾಜ ಕಲ್ಯಾಣಾಧಿಕಾರಿ ಶ್ರೀಮತಿ ಚೈತ್ರಾ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಕೆ.ವಾಸಣ್ಣ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪೀರಜಾದೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪಿ.ಎಸ್. ಶೆಟ್ಟೆಪ್ಪನವರ ಒಳಗೊಂಡಂತೆ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.