ಬೆಂಗಳೂರು
ಕಳೆದ 15 ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದ ಒಟ್ಟು 22 ಜಿಲ್ಲೆಗಳು ಪ್ರವಾಹ ಪೀಡಿತವಾಗಿದ್ದು, ಈವರೆಗೂ 60 ಮಂದಿ ಸಾವನ್ನಪ್ಪಿ, 15 ಮಂದಿ ನಾಪತ್ತೆಯಾಗಿ ಸುಮಾರು 7 ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ.
ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಬೆಳಗಾವಿಯಲ್ಲಿ 13, ಬಾಗಲಕೋಟೆ, ಉಡುಪಿ, ಶಿವಮೊಗ್ಗದಲ್ಲಿ 3, ಧಾರವಾಡ, ಮೈಸೂರು, ಹಾಸನ, ಉತ್ತರನ ಕನ್ನಡದಲ್ಲಿ 4, ಗದಗ, ಯಾದಗಿರಿಯಲ್ಲಿ ತಲಾ ಒಬ್ಬರು, ಚಿಕ್ಕಮಗಳೂ ರಿನಲ್ಲಿ 7, ಕೊಡಗು ಜಿಲ್ಲೆಯಲ್ಲಿ 9, ದಕ್ಷಿಣ ಕನ್ನಡದಲ್ಲಿ ಇಬ್ಬರು ಸೇರಿ ಸುಮಾರು 60ಕ್ಕೂ ಹೆಚ್ಚು ಮಂದಿ ಮಳೆ ಅನಾಹುತದಿಂದ ಪ್ರಾಣ ಕಳೆದುಕೊಂಡಿದ್ದಾರೆ.
ಬೆಳಗಾವಿ, ಶಿವಮೊಗ್ಗದಲ್ಲಿ 4, ಕೊಡಗಿನಲ್ಲಿ 6, ಹಾವೇರಿ ಒಬ್ಬರು ಸೇರಿ 15 ಮಂದಿ ನಾಪತ್ತೆಯಾಗಿದ್ದಾರೆ. 859 ಜಾನುವಾರುಗಳ ಪ್ರಾಣ ಹಾನಿಯಾಗಿದ್ದು, 103 ತಾಲ್ಲೂಕುಗಳ ಸುಮಾರು 7ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ.
ಸರ್ಕಾರ 1160 ನಿರ್ವಸತಿ ಕೇಂದ್ರಗಳನ್ನು ಸ್ಥಾಪಿಸಿದ್ದು, ಅದರಲ್ಲಿ 4 ಲಕ್ಷ ಮಂದಿ ಆಶ್ರಯ ಪಡೆದಿದ್ದಾರೆ. 4,58,837 ಹೆಕ್ಟೇರ್‍ನಲ್ಲಿ ಬೆಳೆ ನಷ್ಟವಾಗಿದ್ದು, 56,381 ಮನೆಗಳು ಹಾನಿಗೊಳಗಾಗಿವೆ ಎಂದು ವರದಿ ಹೇಳಿದೆ.
ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಸುಧಾರಿಸಲಾರಂಭಿಸಿದೆ. ಲಿಂಗನಮಕ್ಕಿ, ಸೂಪಾ, ವರಾಹಿ, ಹಾರಂಗಿ, ಹೇಮಾವತಿ, ಕೆಆರ್‍ಎಸ್, ಕಬಿನಿ, ಭದ್ರಾ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ ಜಲಾಶಯಗಳು ತುಂಬಿದ್ದು, ಭಾರೀ ಪ್ರಮಾಣದ ನೀರನ್ನು ಹರಿಯ ಬಿಡಲಾಗುತ್ತಿದೆ.
ಎನ್‍ಡಿಆರ್‍ಎಫ್, ಸೇನೆ, ಎಸ್‍ಡಿಆರ್‍ಎಫ್, ಭಾರತೀಯ ವಾಯು ಪಡೆಯ ನಾಲ್ಕು ಹೆಲಿಕಾಫ್ಟರ್‍ಗಳು ಪರಿಹಾರ ಕಾರ್ಯದಲ್ಲಿ ತೊಡಗಿವೆ ಎಂದು ವಿವರಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
