ತುಮಕೂರು
ತುಮಕೂರು ಗ್ರಾಮಾಂತರ ಕ್ಷೇತ್ರದ ಹೆಗ್ಗೆರೆಯಲ್ಲಿ 680 ಮತದಾರರನ್ನು ಮತ ಪಟ್ಟಿಯಲ್ಲಿ ಕೈಬಿಡುವ ಮೂಲಕ ಶಾಸಕರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಮಾಜಿ ಶಾಸಕ ಬಿ.ಸುರೇಶ್ ಗೌಡ ಆರೋಪ ಮಾಡಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆ ಎಂದರೆ ಗ್ರಾಮೀಣ, ನಗರ ಪ್ರದೇಶಗಳ ಜನತೆ ಮತದಾನದ ಮೂಲಕ ತಮ್ಮ ಹಕ್ಕು ಚಲಾವಣೆ ಮಾಡುವುದಾಗಿದೆ. ಆದರೆ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಹೆಗ್ಗೆರೆ ಒಂದರಲ್ಲೇ 680 ಜನರ ಮತವನ್ನು ಕಸಿದುಕೊಂಡು ಮತದಾರರನ್ನು ಮತ ಪಟ್ಟಿಯಿಂದ ಕೈಬಿಡಲಾಗಿದೆ. ಇದರಲ್ಲಿ ಗ್ರಾಮಾಂತರ ಶಾಸಕರ ಕೈವಾಡ ಇದ್ದು, ಇವರಿಂದಿಗೆ ಬಿಎಲ್‍ಇಗಳು ಇತರೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಶಾಸಕರು ಹಾಗೂ ಅಧಿಕಾರಿಗಳು ಈ ಕೃತ್ಯದಲ್ಲಿ ಶಾಮೀಲಾಗಿದ್ದಾರೆ. ಗ್ರಾಪಂ ರೆವೆನ್ಯೂ ಇನ್ಸ್‍ಪೆಕ್ಟರ್, ತಹಸೀಲ್ದಾರ್ ನೇರವಾಗಿ ಭಾಗಿಯಾಗಿದ್ದಾರೆ. ಹೆಗ್ಗೆರೆಯಲ್ಲಿ 30 ವರ್ಷಗಳಿಂದ ಶಾಶ್ವತವಾಗಿ ವಾಸ ಮಾಡುತ್ತಿರುವ ಹಿಂದೂಗಳನ್ನು ಅದರಲ್ಲಿ ಬಿಜೆಪಿಗೆ ಮತ ಹಾಕುವಂತವರನ್ನೇ ಆಯ್ಕೆ ಮಾಡಿ ಮತ ಪಟ್ಟಿಯಲ್ಲಿ ಕೈಬಿಡಲಾಗಿದೆ ಎಂದು ಆರೋಪಿಸಿದರು.
ಶಾಸಕರ ಕುಮ್ಮಕ್ಕಿನಿಂದ ಅಧಿಕಾರಿಗಳು ಬಿಜೆಪಿಗೆ ಮತ ಹಾಕುವ ಮತದಾರರನ್ನು ಮತ ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಇವರೆಲ್ಲರೂ ಅಲ್ಲಿಯೇ ವಾಸಿಸುವ ಜನರಾಗಿದ್ದಾರೆ. ಆದರೆ ಬಾಡಿಗೆ ಮನೆಯಲ್ಲಿ ವಾಸಿಸುವ ಬೇರೆ ಸಮುದಾಯದವರನ್ನು ಕೈಬಿಟ್ಟಿಲ್ಲ. ಶಾಸಕರ ಒತ್ತಡದಿಂದ ಈ ಕೃತ್ಯದಲ್ಲಿ ತಹಸೀಲ್ದಾರ್ ನೇರವಾಗಿ ಶಾಮೀಲಾಗಿದ್ದಾರೆ. ಈ ಬಗ್ಗೆ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದ್ದು, ಶೀಘ್ರ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೇ ತುಮಕೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ. ಅವರ ಮಗ ರಾಜ್ಯದ ಸಿಎಂ ಆಗಿರುವುದರಿಂದ ಅಧಿಕಾರ ದುರುಪಯೋಗ ಆಗುವುದು ನೂರಕ್ಕೆ ನೂರರಷ್ಟು ಸತ್ಯ. ಹೀಗಾಗಿ ಗ್ರಾಮಾಂತರದಲ್ಲಿ ಈ ರೀತಿಯ ಕೃತ್ಯ ನಡೆಸಲಾಗಿದೆ. ಯಾವುದೇ ಒಬ್ಬ ಮತದಾರರನನ್ನು ಪಟ್ಟಿಯಿಂದ ಹೊರಬೇಕಾದರೆ ಮೊದಲು ಬಿಎಲ್‍ಒ 2ಗೆ ತಿಳಿಸಬೇಕು. ಫಾರಂ ನಂ.7ರಲ್ಲಿ ಅರ್ಜಿ ಬರೆದುಕೊಟ್ಟಿರಬೇಕು.
ಫಾರಂ ನಂ 8ರ ನೋಟೀಸ್ ಪಡೆದು ಅವರನ್ನು ಕೈ ಬಿಡಬೇಕು. ಆದರೆ ಇಲ್ಲಿ ಯಾರೊಬ್ಬರಿಗೂ ಮನವಿ ಮಾಡದೆ, ಮಾಹಿತಿ ನೀಡದೆ ಮತಪಟ್ಟಿಯಿಂದ ಹೊರಹಾಕಿದ್ದಾರೆ ಎಂದು ಆರೋಪ ಮಾಡಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಏ.23 ಕ್ಕೆ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅಧಿಕಾರಿಗಳ ಜೊತೆ ಹೇಮಾವತಿ ವಿಚಾರವಾಗಿ ತುರ್ತು ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ನಾವು ಈ ಬಗ್ಗೆ ಆರೋಪ, ಟೀಕೆ ಮಾಡುವುದಿಲ್ಲ. ಅವರು ಪ್ರಚಾರ ಮಾಡುವ ವೇಳೆ ಎಲ್ಲಾ ಗ್ರಾಮಗಳ ಕೆರೆಗಳನ್ನು ಪರಿಶೀಲನೆ ಮಾಡಲಿ. ಜನಸಾಮಾನ್ಯರ ಸಮಸ್ಯೆ ಆಲಿಸಲಿ
ಅದನ್ನು ಬಿಟ್ಟು ಚುನಾವಣೆ ನಂತರ ಸಭೆ ಕರೆಯುತ್ತೇನೆ ಎಂದರೆ ಅದು ಅದು ಹೇಗೆ ? ನೀರವಾರಿ ವಿಚಾರಕ್ಕೆ ಈ ರೀತಿ ಎಸ್ಕೇಪಿಂಗ್ ಉತ್ತರ ಏಕೆ ? ನೀರಿನ ವಿಚಾರದಲ್ಲಿ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ. ಈಗಲೇ ಸಭೆ ಕರೆದು ಮಾತನಾಡಿ, ತುಮಕೂರಿನ ಹೇಮಾವತಿ ಹರಿಸಿ ಅದರಿಂದಾರೂ ಜನರಿಗೆ ನಿಮ್ಮ ಮೇಲೆ ನಂಬಿಕೆ ಬರುತ್ತದೆ. ಆಗಲಾರದೂ ಶೇ.10ರಷ್ಟಾದರೂ ಜನ ಮತಹಾಕುತ್ತಾರೆ ಎಂದು ಸವಾಲೆಸೆದರು.
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಮಾವತಿ ನೀರನ್ನು ಕನಕಪುರ, ರಾಮನಗರ ಹಾಗೂ ಮಾಗಡಿಗೆ ತೆಗೆದುಕೊಂಡು ಹೋಗಲು ಹೊರಟಿದ್ದಾರೆ. ಇದಕ್ಕೆ ನಾವು ಬಿಡಲ್ಲ. ವೈ.ಕೆ.ರಾಮಯ್ಯರಂತೆ ನಾವು ರಸ್ತೆಗಿಳಿದು ಪ್ರತಿಭಟನೆ ಮಾಡುತ್ತೇವೆ. ಸಿಎಂ, ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರದ ಪ್ರತಿಕೃತಿ ದಹನ ಮಾಡಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರಲ್ಲದೆ, ‘ನಮ್ಮಲ್ಲಿ ಕೆಜೆಪಿ, ಬಿಜೆಪಿ ಎಂಬ ತಾರತಮ್ಯ ಇಲ್ಲ. ನಮ್ಮಲ್ಲಿ ಯಾವುದೇ ಒಡಕು ಮೂಡಿಲ್ಲ. ಯಾರೋ ಸುಮ್ಮನೆ ಸುದ್ದಿ ಹಬ್ಬಿಸುತ್ತಿದ್ದಾರೆ. ನಮ್ಮ ಧ್ವನಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದು. ಬಿಜೆಪಿ ಪರ ಪ್ರಚಾರ ಮಾಡುವುದೇ ನಮ್ಮ ಹೆಮ್ಮೆ’ ಎಂದು ಸಮರ್ಥನೆ ಮಾಡಿಕೊಂಡರು
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾನರಸಿಂಹಮೂರ್ತಿ, ಜಿ.ಪಂ ಸದಸ್ಯ ವೈ.ಎಚ್.ಹುಚ್ಚಯ್ಯ, ತಾಪಂ ಅಧ್ಯಕ್ಷ ಗಂಗಹನುಮಯ್ಯ, ಮುಖಂಡರಾದ ಲಕ್ಷ್ಮೀಶ, ಶಿವಕುಮಾರ್, ರೇಣುಕಯ್ಯ, ಈಶ್ವರಯ್ಯ ಮತ್ತಿತರರಿದ್ದರು.
ಅಂತಾರಾಷ್ಟ್ರೀಯ ಮಟ್ಟದ ಕಾಮಿಡಿ
ಜೆಡಿಎಸ್ ಪಕ್ಷದವರಿಗೆ ಹತಾಶ ಭಾವನೆ ಮೂಡಿದೆ. ಮಂಡ್ಯದಲ್ಲಿನ ‘ನಿಖಿಲ್ ಎಲ್ಲಿದಿಯಪ್ಪ’ ಹೇಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾಮಿಡಿಯಾಗಿದೆ. ಇದರಿಂದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಎದುರು ತನ್ನ ಮಗ ಸೋಲುವ ಭೀತಿ ಇದ್ದು, ಸಿಎಂ ಹತಾಶರಾಗಿದ್ದಾರೆ. ಮುಂದೆ ಇನ್ಯಾರನ್ನ ಎಲ್ಲಿದಿಯಪ್ಪ ಎನ್ನಬೇಕು ಎಂಬ ಸ್ಥಿತಿ ಬರುತ್ತದೆಯೋ? ಎಂದು ಮಾಜಿ ಶಾಸಕ ಸುರೇಶ್‍ಗೌಡ ವ್ಯಂಗ್ಯವಾಡಿದರು.
ಬೂತ್‍ಗಳಲ್ಲಿ ಕೈ ಬಿಟ್ಟ ಮತದಾರರ ಸಂಖ್ಯೆ
ಬೂತ್ ನಂ. 52ರಲ್ಲಿ 6 ಮತದಾರರು,ಬೂತ್ ನಂ. 53ರಲ್ಲಿ 15 ಮತದಾರರು,ಬೂತ್ ನಂ. 54ರಲ್ಲಿ 46 ಮತದಾರರು ,ಬೂತ್ ನಂ. 55ರಲ್ಲಿ 133 ಮತದಾರರು,ಬೂತ್ ನಂ. 56ರಲ್ಲಿ 117 ಮತದಾರರು,ಬೂತ್ ನಂ. 57ರಲ್ಲಿ 69 ಮತದಾರರು
,ಬೂತ್ ನಂ. 58ರಲ್ಲಿ 216 ಮತದಾರರು,ಬೂತ್ ನಂ. 59ರಲ್ಲಿ 78 ಮತದಾರರು,ಬೂತ್ ನಂ. 52ರಲ್ಲಿ 6 ಮತದಾರರು