ಕೇವಲ 380 ರೂ. ಹೆಚ್ಚಿಸಿ ರೈತರ ಮೂಗಿಗೆ ತುಪ್ಪ ಸವರಲಾಗಿದೆ: ಎಸ್‍ಪಿಎಂ

ತುಮಕೂರು

     ಕೇಂದ್ರ ಸರ್ಕಾರ ಘೋಷಿಸಿರುವ ಕ್ವಿಂಟಾಲ್ ಕೊಬ್ಬರಿಗೆ 10,300 ರೂ. ಗಳನ್ನು ಪುನರ್ ಪರಿಶೀಲಿಸಬೇಕು ಹಾಗೂ ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಟ 20 ಸಾವಿರ ರೂ. ನಿಗಧಿ ಮಾಡಬೇಕು ಎಂದು ಮಾಜಿ ಸಂಸದ ಎಸ್. ಪಿ. ಮುದ್ದಹನುಮೇಗೌಡರು ಒತ್ತಾಯಿಸಿದರು.

    ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಕ್ವಿಂಟಾಲ್ ಕೊಬ್ಬರಿಗೆ ಉತ್ಪಾದನಾ ವೆಚ್ಚವೇ 20,200 ರೂ. ಗಳಾಗುತ್ತವೆ ಎಂದು ವೈಜ್ಞಾನಿಕವಾಗಿ ಲೆಕ್ಕ ಹಾಕಲಾಗಿದೆ. ಜಿಲ್ಲೆಯ ರೈತರಮಟ್ಟಿಗೆ ಕೊಬ್ಬರಿ ವಾಣಿಜ್ಯ ಬೆಳೆ ಆಗಿರದೆ, ಬದುಕಿನ ಬೆಳೆಯಾಗಿದೆ. ರೈತರ ಬದುಕು ಉಳಿಸಲಾದರೂ ಕೇಂದ್ರ ಸರ್ಕಾರ ಕೊಬ್ಬರಿಗೆ ಕ್ವಿಂಟಾಲ್‍ಗೆ 20ಸಾವಿರ ರೂ. ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

   ಕೊಬ್ಬರಿ ಬೆಳೆಗಾರರ ಸಂಕಷ್ಟ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರಕ್ಕೆ ತಂದು ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚು ಮಾಡಬೇಕು ಎಂದು ಒತ್ತಾಯಿಸಿ ತಾವು ಇತ್ತೀಚೆಗೆ ನಗರದಲ್ಲಿ ಧರಣಿ ಸತ್ಯಾಗ್ರಹ ಮಾಡಿದ್ದು, ಕೊಬ್ಬರಿ ಬೆಳೆಗಾರರ ಬೇಡಿಕೆಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿತ್ತು ಎಂದರು. ಇತ್ತೀಚೆಗೆ ಕೇಂದ್ರ ಸರ್ಕಾರ ಕ್ವಿಂಟಾಲ್ ಕೊಬ್ಬರಿಯ ಬೆಂಬಲ ಬೆಲೆಯನ್ನು 9920ರಿಂದ 10,300 ರೂ. ಗಳಿಗೆ ಏರಿಸಿ, ಕೇವಲ 380 ರೂ.ಗಳನ್ನು ಹೆಚ್ಚು ಮಾಡಿ ಘೋಷಿಸಿದೆ. ಆದರೆ ಇದು ರೈತರ ಕಣ್ಣೊರೆಸುವ ಪ್ರಯತ್ನ, ಈ ಹೆಚ್ಚಳ ರೈತರ ಮೂಗಿಗೆ ತುಪ್ಪ ಸವರಿದಂತಾಗಿದೆ ಎಂದು ಮುದ್ದಹನುಮೇಗೌಡರು ಹೇಳಿದರು.

    ತುಮಕೂರು ಜಿಲ್ಲೆಯಲ್ಲಿ ರೈತರು ಕೊಬ್ಬರಿಯನ್ನು ಲಾಭಕ್ಕಾಗಿ ಬೆಳೆಯಲಾಗುತ್ತಿಲ್ಲ. ಬದುಕು ನಿರ್ವಹಣೆಗೆ ತೆಂಗನ್ನು ನಂಬಿಕೊಂಡಿದ್ದಾರೆ. ಸಣ್ಣ, ಅತಿ ಸಣ್ಣ ರೈತರು ಶಕ್ತಿಯಾನುಸಾರ ತೆಂಗು ಬೆಳೆದು ಅದರಿಂದ ಬದುಕು ಸಾಗಿಸುತ್ತಿದ್ದಾರೆ. ಆದರೆ, ಕೊಬ್ಬರಿಗೆ ವೈಜ್ಞಾನಿಕ ಬೆಲೆ ನೀಡದಿರುವುದು ಸರ್ಕಾರ ರೈತರಿಗೆ ಅನ್ಯಾಯ ಮಾಡಿದಂತಾಗಿದೆ. ತಲಾತಲಾಮಾರುಗಳಿಂದ ಜಿಲ್ಲೆಯ ಹಲವು ಭಾಗಗಳಲ್ಲಿ ರೈತರು ತೆಂಗು ಬೆಳೆಯುತ್ತಾ ಬದುಕು ಕಂಡುಕೊಂಡಿದ್ದಾರೆ.

  ಈಗ ಬೆಲೆ ಸಿಗದೆ, ಕಲ್ಪತರು ತೆಂಗನ್ನು ಕಿತ್ತು ಹಾಕಲಾಗದೆ, ಉಳಿಸಿ ಅದರಿಂದ ಲಾಭ ಕಾಣಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ರೈತರನ್ನು ಕಾಪಾಡುವುದು ಸರ್ಕಾರಗಳ ಕರ್ತವ್ಯ, ಕೂಡಲೇ ಕೇಂದ್ರ ಸರ್ಕಾರ ಕೊಬ್ಬರಿಗೆ 20 ಸಾವಿರ ರೂ. ಬೆಂಬಲ ಬೆಲೆ ನಿಗಧಿ ಮಾಡಬೇಕು ಎಂದು ಆಗ್ರಹಿಸಿದರು.

   2018ರಲ್ಲಿ ತಿಪಟೂರಿನಲ್ಲಿ ನಡೆದ ಕೊಬ್ಬರಿ ಬೆಳಗಾರರ ಸಮಾವೇಶದಲ್ಲಿ ಭಾಗವಹಿಸಿದ್ದ ಈಗಿನ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಕೊಬ್ಬರಿ ಬೆಳೆಗಾರರ ಸಂಕಷ್ಟ ಪರಿಹಾರಕ್ಕೆ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದರು. ಕೆಎಂಎಫ್ ಮಾದರಿಯಲ್ಲಿ ನೀರಾವನ್ನು ಸಹಕಾರ ಸಂಘಗಳ ಮೂಲಕ ಮಾರಾಟ ಮಾಡುವ ವ್ಯವಸ್ಥೆ ಜಾರಿಗೆ ತರುವುದಾಗಿ ಹೇಳಿದ್ದರು. ಈ ಪ್ರಯತ್ನವೂ ಆಗಿಲ್ಲ ಎಂದರು.

   ರಾಜ್ಯ ಸರ್ಕಾರ ಹಾಗೂ ರಾಜ್ಯದ ಎಲ್ಲಾ ಸಂಸದರು ಕೇಂದ್ರ ಸರ್ಕಾರಕ್ಕೆ ನಿಯೋಗ ತೆರಳಿ, ಕೊಬ್ಬರಿಗೆ ಕನಿಷ್ಟ 20 ಸಾವಿರ ರೂ. ಬೆಂಬಲ ಬೆಲೆ ನಿಗಧಿ ಮಾಡಲು ಮನವೊಲಿಸಬೇಕು ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮನವಿ ಮಾಡಿದರು.ಮುಖಂಡರಾದ ರಾಯಸಂದ್ರ ರವಿಕುಮಾರ್, ಆರ್.ಕಾಮರಾಜ್, ಆಟೋ ರಾಜು, ಶ್ರೀಕಾಂತ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link