ಬೆಂಗಳೂರು
ಅಲಯೆನ್ಸ್ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಡಾ. ಅಯ್ಯಪ್ಪ ದೊರೆ ಅವರ ಕೊಲೆ ಕೃತ್ಯದ ತನಿಖೆಯನ್ನು ತೀವ್ರಗೊಳಿಸಿರುವ ಉತ್ತರ ವಿಭಾಗದ ಪೊಲೀಸರು ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೂ ನಾಲ್ವರು ಸಹಕರಿಸಿದ ಮೂವರು ಸೇರಿ ಸೇರಿ, 7 ಮಂದಿಯನ್ನು ಆರ್.ಟಿ. ನಗರದ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಲ್ಲಿ ಇಬ್ಬರು ಮಹಿಳೆಯರಿದ್ದಾರೆ.ಜಯಮಹಲ್ನ ಕಾಂತರಾಜು ಅಲಿಯಾಸ್ ಕಾಟಪ್ಪ (28), ಜೆಸಿ ನಗರದ ಸುನಿಲ್ ರಾವ್ ಅಲಿಯಾಸ್ ಅಪ್ಪು (31), ಆರ್.ಟಿ. ನಗರದ ಫಯಾಜ್ (29), ಜೆಸಿನಗರದ ವಿನಯ್ (24), ಆರ್.ಟಿ. ನಗರದ ಅರುಣ್ ಕುಮಾರ್, ಕನಕನಗರದ ರಿಜ್ವಾನ್ (38), ಕೊಡಿಗೆಹಳ್ಳಿಯ ಸಲ್ಮಾ (28) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳಲ್ಲಿ ಕಾಂತರಾಜು, ಸುನಿಲ್ ರಾವ್, ಫಯಾಜ್ ಹಾಗೂ ವಿನಯ್ ಅವರುಗಳು, ಅಯ್ಯಪ್ಪ ದೊರೆ ಕೊಲೆ ಕೃತ್ಯದಲ್ಲಿ ಪ್ರಮುಖ ಆರೋಪಿ ಸೂರಜ್ ಸಿಂಗ್ ಜೊತೆ ಕೈಜೋಡಿಸಿದ್ದರು ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ. ಕೊಲೆ ಕೃತ್ಯಕ್ಕೆ ಅರುಣ್ ಕುಮಾರ್, ರಿಜ್ವಾನ್ ಹಾಗೂ ಸಲ್ಮಾ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿರುವುದು ತನಿಖೆಯಲ್ಲಿ ಕಂಡುಬಂದಿರುವುದರಿಂದ ಅವರನ್ನು ಬಂಧಿಸಿ, ವಿಚಾರಣೆ ನಡೆಸಲಾಗಿದೆ. ಇಲ್ಲಿಯವರೆಗೆ ಅಯ್ಯಪ್ಪ ಕೊಲೆ ಕೃತ್ಯದಲ್ಲಿ ಅಲಯನ್ಸ್ ವಿವಿಯ ಕುಲಪತಿ ಸುಧೀರ್ ಅಂಗೂರ್, ಸೂರಜ್ ಸಿಂಗ್ ಸೇರಿದಂತೆ, 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ಅಯ್ಯಪ್ಪ ಕೊಲೆ ಕೃತ್ಯದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದ್ದು, ಅಲಯೆನ್ಸ್ ವಿವಿಯ ಮೇಲಿನ ಹಿಡಿತ ಸಾಧಿಸಲು ಅಯ್ಯಪ್ಪ ದೊರೆ ಅವರ ಕೊಲೆ ನಡೆಸಿರುವುದು ಪತ್ತೆಯಾಗಿದೆ ಎಂದು ಅವರು ತಿಳಿಸಿದರು.ಕೊಲೆ ಕೃತ್ಯದ ಬೆನ್ನುಹತ್ತಿದ ಆರ್.ಟಿ. ನಗರದ ಪೊಲೀಸ್ ಇನ್ಸ್ಪೆಕ್ಟರ್ ಮಿಥುನ್ ಶಿಲ್ಪಿ, ಓರ್ವ ಆರೋಪಿಗೆ ಗುಂಡು ಹಾರಿಸಿ ಬಂಧಿಸಿದ್ದಲ್ಲದೆ, ಉಳಿದವರನ್ನು ದಸ್ತಗಿರಿ ಮಾಡಿ ಉತ್ತಮ ಕಾರ್ಯ ಕೈಗೊಂಡಿದ್ದಾರೆ ಎಂದು ಅವರು ಪ್ರಶಂಸಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








