ಪ್ರಜೆಗಳೇ ಪ್ರಭುಗಳಾದ ದಿನವೆ ಗಣರಾಜ್ಯೋತ್ಸವದ ವಿಶೇಷ : ತಹಶೀಲ್ದಾರ್ ಮಂಜುನಾಥ ಕೆ

ಕೊಟ್ಟೂರು

         ಪಾಕಿಸ್ತಾನದಲ್ಲಿ ಅನ್ಯ ಧರ್ಮದವರು ರಾಷ್ಟ್ರಪತಿಗಳಾಗಿಯೇ ಇಲ್ಲ. ಆದರೆ ನಮ್ಮ ರಾಷ್ಟ್ರದಲ್ಲಿ ಡಾ|| ಜಾಕೀರ್ ಹುಸೇನ್ ಸೇರಿದಂತೆ ನಾಲ್ವರು ರಾಷ್ಟ್ರಪತಿಗಳಾಗಿದ್ದರು. ಇದುವೆ ಭಾರತದ ಸಹಿಷ್ಣುತೆ ಸಾರುವ ಅಂಶ, ರಾಷ್ಟ್ರದ ಸಂವಿಧಾನದಲ್ಲಿ ಇರುವ ಮಹೋನ್ನತ ವಿಷಯ. ಸಂವಿಧಾನದಲ್ಲಿನ ಗಟ್ಟಿತನವನ್ನು ಈ ಅಂಶ ತೋರುವ ಧ್ಯೋತಕವಾಗಿದೆ ಎಂದು ತಹಶೀಲ್ದಾರ್ ಮಂಜುನಾಥ ಕೆ ಹೇಳಿದರು.

         ಕೊಟ್ಟೂರು ತಾಲೂಕು ಆಡಳಿತ ಮತ್ತು ಪಟ್ಟಣ ಪಂಚಾಯಿತಿ ಆಡಳಿತದಿಂದ ಇಲ್ಲಿನ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ 70ನೇ ಗಣರಾಜ್ಯೋತ್ಸವ ದಿನಾಚರಣೆಯ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣವನ್ನು ತಹಶೀಲ್ದಾರ ನೆರವೇರಿಸಿ ನಂತರ ಮಾತನಾಡಿದರು.

         ಪ್ರಜೆಗಳೆ ಪ್ರಭುಗಳಾದ ದಿನ ಗಣರಾಜ್ಯೋತ್ಸವದ ದಿನವಾಗಿದೆ. ಡಾ|| ಬಿ.ಆರ್.ಅಂಬೇಡ್ಕರ್ ಮಾಧವರಾವ್ ಮತ್ತಿತರ ಪ್ರಾಜ್ಞವಂತರು ಇದ್ದ ಸಮಿತಿ ಸಂವಿಧಾನವನ್ನು ರಚಿಸಿ ಇಡೀ ವಿಶ್ವಕ್ಕೆ ಮಾದರಿಯ ಮಾರ್ಗದರ್ಶನವನ್ನು ನೀಡಿದರು. ಸ್ವಾತಂತ್ರ್ಯ, ಸಮಾನತೆ, ಜಾತಿ, ಧರ್ಮ ಮತ್ತಿತರಗಳಲ್ಲಿ ಏಕ ಭಾವನೆ ಮೂಡಿಸುವಲ್ಲಿ ಸಂವಿಧಾನ ಮಹತ್ತರ ಕೆಲಸ ಮಾಡಿದೆ. ಸಹಿಷ್ಣುತೆ ರಾಷ್ಟ್ರದ ಎಲ್ಲೆಡೆ ಮನೆಮಾತಾಗಿದೆ. ಅಸಹಿಷ್ಣುತೆ ಬೇರೆ ದೇಶಗಳಲ್ಲಿ ತಾಂಡವವಾಡುತ್ತಿದೆ. ಇದಕ್ಕೆಲ್ಲಾ ಕಾರಣ ಅಲ್ಲಿನ ಸಂವಿಧಾನ ರಚನೆಯಲ್ಲಿ ಕಂಡುಬರುವ ದೋಷಗಳು. ಆದರೆ ಭಾರತದಲ್ಲಿ ಯಾವುದೇ ದೋಷಗಳು ಕಂಡುಬಂದಿಲ್ಲ. ಈ ಕಾರಣಕ್ಕಾಗಿ ರಾಷ್ಟ್ರವನ್ನು ಸಂವಿಧಾನ ಎತ್ತಿ ಹಿಡಿದಿದೆ ಎಂದು ಅವರು ಹೇಳಿದರು.

         ಸಂವಿಧಾನದ ಆಶಯ ಅನುಗುಣವಾಗಿಯೆ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆಗೊಳಿಸುವ ಮೂಲಕ ಜನಾಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುತ್ತಿವೆ. ರಾಜ್ಯ ಸರ್ಕಾರ ಬೆಳೆ ಸಾಲ ಮನ್ನಾ ಮಾಡುವ ಮೂಲಕ ರೈತರನ್ನು ಕೈಹಿಡಿಯುವ ಕೆಲಸ ಮಾಡುತ್ತಿದೆ. ದುರ್ಬಲ ವರ್ಗದವರನ್ನು ಮುಖ್ಯವಾಹಿನಿಯಲ್ಲಿ ಸದಾ ಇರಿಸಿಕೊಳ್ಳಲು ಕಾರ್ಯಕ್ರಮಗಳನ್ನು ರೂಪಿಸುತ್ತಿವೆ. ಜಿಲ್ಲೆಯಲ್ಲಿ ವಿದ್ಯಾರ್ಥಿ ಬೆಳಕು ಯೋಜನೆ ಮೂಲಕ ನೆರವು ನೀಡಲಾಗುತ್ತಿದೆ ಎಂದು ಹೇಳಿದ ಅವರು ಪ್ರತಿಯೊಬ್ಬರು ರಾಷ್ಟ್ರದ ಅದ್ಯ ಕರ್ತವ್ಯವನ್ನು ನಿರ್ವಹಿಸುವ ಮೂಲಕ ಸಂವಿಧಾನಕ್ಕೆ ಸದಾ ಗೌರವ ಕೊಡುವತ್ತಾ ಮುಂದಾಗಬೇಕು ಎಂದು ಕರೆ ನೀಡಿದರು.

        ಶಾಸಕ ಎಸ್.ಭೀಮಾನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ ನೂತನ ಕೊಟ್ಟೂರು ತಾಲೂಕಿನಲ್ಲಿ ಮುಂದಿನ ವರ್ಷದ ವೇಳೆಗೆ ನಾಲ್ಕು ಕೋಟಿರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಕ್ರೀಡಾಂಗಣವನ್ನು ನಿರ್ಮಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ. ಕೊಟ್ಟೂರು ಸೇರಿದಂತೆ 12 ಕೆರೆಗಳಿಗೆ ನೀರುಣಿಸುವ ಯೋಜನೆಗೆ ಮಂಜೂರಾತಿ ನೀಡುವಂತೆ ಸರ್ಕಾರವನ್ನು ಒತ್ತಾಯಪಡಿಸಲಾಗಿದ್ದು ಫೆಬ್ರವರಿ 8ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್‍ನಲ್ಲಿ ಈ ಯೋಜನೆ ಪ್ರಕಟಗೊಳ್ಳುವ ಭರವಸೆ ಇದೆ ಎಂದು ಹೇಳಿದರು.

         ಗಣರಾಜ್ಯೋತ್ಸವದ ಅಂಗವಾಗಿ ಪೊಲೀಸ್. ಗೃಹ ರಕ್ಷಕ ದಳ, ಎನ್.ಸಿ.ಸಿ, ಭಾರತ ಸ್ಕೌಟ್ಸ್, ಗೈಡ್ಸ್, ಸೇವಾದಳ ಮತ್ತು ಶಾಲಾ ಕಾಲೇಜ್ ವಿದ್ಯಾರ್ಥಿಗಳ ತಂಡದಿಂದ ಪಥಸಂಚಲನ ಹಾಗೂ ಆಕರ್ಷಕ ಕವಾಯಿತು ಪ್ರದರ್ಶನ ಮತ್ತು ಸಾಂಸ್ಕತಿಕ ಕಾರ್ಯಕ್ರಮಗಳು ನಡೆದವು. ಜಿ.ಪಂ.ಸದಸ್ಯ ಪಿ.ಹೆಚ್.ಉಮಾಕೊಟ್ರೇಶ, ಸರ್ಕಲ್ ಇನ್ಸ್‍ಪೆಕ್ಟರ್ ರವೀಂದ್ರ ಎಮ್ ಕುರುಬಗಟ್ಟಿ, ಸಬ್ ಇನ್ಸ್‍ಪೆಕ್ಟರ್ ತಿಮ್ಮಣ್ಣ ಚಾಮನೂರ್, ಎ.ಪಿ.ಎಂ.ಸಿ ಅಧ್ಯಕ್ಷ ಬೂದಿ ಶಿವಕುಮಾರ್ ಉಪಾಧ್ಯಕ್ಷ ಯಲ್ಲಪ್ಪ, ಕಾರ್ಯದರ್ಶಿ ವಿ.ಜಿ.ಹಿರೇಮಠ್, ಪ.ಪಂ.ಸದಸ್ಯರಾದ ವಿದ್ಯಾಶ್ರೀ ಹಳ್ಳಿ, ಕೊಟ್ರೇಶ್ ಮರಬದ, ತೋಟದ ರಾಮಣ್ಣ, ಕೆಂಗಪ್ಪ, ಶಿಕ್ಷಕ ಅಜ್ಜಪ್ಪ ಮತ್ತಿತರರ ಗಣ್ಯರು ಪಾಲ್ಗೊಂಡಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link