ಚಳ್ಳಕೆರೆ
ಚಿತ್ರದುರ್ಗ ಲೋಕಸಭಾ ಕ್ಷೇತ್ರ ಚುನಾವಣೆ ಮತದಾನ ಏ.18ರಂದು ನಡೆದಿದ್ದು, ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಾರಂಭದಲ್ಲಿ ನೀರಸ ಮತದಾನ ಕಂಡು ಬಂದರೂ ಅಂತಿಮವಾಗಿ ಮತದಾನ ಚುರುಕುಗೊಂಡು ಶೇ.72.22 ಮತದಾನವಾಗಿದ್ದು, ಅತಿ ಹೆಚ್ಚು ಮತದಾನ ಚಳ್ಳಕೆರೆ ಕ್ಷೇತ್ರದ ಮತಗಟ್ಟೆ ಸಂಖ್ಯೆ 125 ಇಮಾಂಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶೇ.88.33 ಅತಿಹೆಚ್ಚು ಮತದಾನ ನಡೆದ ಕೇಂದ್ರವಾಗಿದೆ. ಅತಿ ಕಡಿಮೆ ಮತದಾನ ಮತಗಟ್ಟೆ ಸಂಖ್ಯೆ 95 ಬಾಪೂಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶೇ.50.45ರಷ್ಟು ಮತದಾನವಾಗಿದೆ.
ಇಮಾಂಪುರ ಮತದಾನ ಕೇಂದ್ರದಲ್ಲಿ 454 ಮತಗಳಿದ್ದು, 401 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ಧಾರೆ. ಬಾಪೂಜಿ ಪ್ರಥಮ ದರ್ಜೆ ಕಾಲೇಜು ಮತಗಟ್ಟೆ ಸಂಖ್ಯೆಯಲ್ಲಿ 1203 ಮತದಾರರಿದ್ದು, ಕೇವಲ 612 ಮತದಾರರು ಮಾತ್ರ ಮತ ಚಲಾಯಿಸಿದ್ದಾರೆ. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಚಳ್ಳಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ 80.29 ಮತದಾನವಾಗಿದ್ದು, ಅತಿ ಹೆಚ್ಚು ಮತದಾನ ಜೋಗಿಯರಹಟ್ಟಿ ಮತಗಟ್ಟೆಯಲ್ಲಿ ನಡೆಸಿದ್ದು, ಅಲ್ಲಿ ಶೇ.92.90 ಮತದಾನವಾಗಿತ್ತು.
ಚಳ್ಳಕೆರೆ ಗ್ರಾಮಾಂತರ ಮತ್ತು ನಗರ ಪ್ರದೇಶದಲ್ಲಿ ಈ ಬಾರಿ ಎಲ್ಲೆಡೆ ಪ್ರಾರಂಭದಲ್ಲಿ ನೀರಸ ಮತದಾನವಾದರೂ ಮಧ್ಯಾಹ್ನದ ವೇಳೆಗೆ ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಸ್ವಯಂ ಪ್ರೇರಣೆಯಿಂದ ಮತದಾರರು ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ್ಧಾರೆ. ಪ್ರತಿಯೊಂದು ಚುನಾವಣೆಯ ವಿಶೇಷವೆಂದರೆ ಮತದಾರನಿಗೆ ವಿವಿಧ ಪಕ್ಷಗಳ ಮುಖಂಡರು ಹಣಕಾಸು ಸೇರಿದಂತೆ ಇನ್ನಿತರೆ ವಸ್ತುಗಳನ್ನು ಕೊಡುಗೆಯಾಗಿ ನೀಡಿ ತಮ್ಮ ಪಕ್ಷಕ್ಕೆ ಮತ ನೀಡುವಂತೆ ಒತ್ತಾಯಿಸುತ್ತಿದ್ದರು ಹಾಗೂ ಪರ್ಯಾಯವಾಗಿ ಮತ ನೀಡಲು ಮತದಾರನ ಮೇಲೆ ನಿಯಮ ಬಾಹಿರವಾಗಿ ಕೆಲವೆಡೆ ಆಮಿಷ ಒಡ್ಡಿ ಮತ ನೀಡುವಂತೆ ಒತ್ತಾಯಿಸುತ್ತಿದ್ದರು. ಪ್ರತಿಯೊಬ್ಬ ಮತದಾರನ ಮನೆ ಬಾಗಿಲು ತಟ್ಟಿ ಅವನನ್ನು ಜಾಗೃತಿಗೊಳಿಸಿ ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ಹಲವಾರು ರೀತಿಯಲ್ಲಿ ಒತ್ತಡ ಹೇರುತ್ತಿದ್ದರು.
ಆದರೆ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷದ ಅಭ್ಯರ್ಥಿ ಯಾವುದೇ ಮತದಾರನಿಗೂ, ಯಾವುದೇ ರೀತಿಯ ಆಮಿಷಗಳನ್ನು ಒಡ್ಡದೆ ತಮ್ಮ ತಮ್ಮ ಪಕ್ಷಗಳಿಗೆ ಮತ ನೀಡುವಂತೆ ಕೈಮುಗಿದು ಪ್ರಾರ್ಥಿಸಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಮನೆ, ಮನೆಗೆ ಭೇಟಿ ನೀಡುವ ಬದಲು ಇಡೀ ಗ್ರಾಮವನ್ನೇ ಪ್ರಚಾರದ ವಾಹನದ ಮೂಲಕ ಸುತ್ತುವರೆದು ಮತಯಾಚಿಸಿದ್ಧಾರೆ.
ಮತದಾರನಿಗೆ ಮಾತ್ರ ಯಾವುದೇ ರೀತಿಯ ಆಮಿಷವನ್ನು ಒಡ್ಡದೆ ಮತದಾರ ತಮಗೆ ಇಷ್ಟ ಬಂದ ಪಕ್ಷ ಮತ್ತು ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಬಹುದಾದ ಪರಿಸ್ಥಿತಿ ಈ ಬಾರಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ಲೋಕಸಭಾ ಚುನಾವಣೆ ಮತದಾನ ಮುಗಿದಿದ್ದು, ಮತದಾರರು ಆತ್ಮವಿಶ್ವಾಸದಿಂದ ತಮಗೆ ಇಷ್ಟ ಬಂದ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿದ್ದು, ಎಲ್ಲಾ ಮತಗಳು ಭದ್ರವಾಗಿ ಚಿತ್ರದುರ್ಗದ ಸರ್ಕಾರಿ ಪ್ರಥಮ ದರ್ಜೆ ವಿಜ್ಞಾನ ಕಾಲೇಜನಲ್ಲಿ ಭದ್ರವಾಗಿದೆ. ಈಗಾಗಲೇ ಪೊಲೀಸ್ ಇಲಾಖೆ ಹಗಲು ರಾತ್ರೆ ಪಹರೆ ಕಾಯುತ್ತಿದ್ದು, ಇನ್ನೂ ಒಂದು ತಿಂಗಳು ನಾಲ್ಕು ದಿನಗಳ ಕಾಲ ಮತ ಏಣಿಕೆಗಾಗಿ ಅನಿವಾರ್ಯವಾಗಿ ಕಾಯಲೇಬೇಕಾದ ಸ್ಥಿತಿ ಉಂಟಾಗಿದೆ.