ಚಿತ್ರದುರ್ಗ:
ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ನಶಿಸಿ ಹೋಗುತ್ತಿರುವ ರಂಗಭೂಮಿ ಉಳಿಯಬೇಕಾದರೆ ನಾಟಕಗಳನ್ನು ವೀಕ್ಷಿಸುವ ಮೂಲಕ ರಂಗಕಲಾವಿದರನ್ನು ಪ್ರೋತ್ಸಾಹಿಸುವಂತೆ ಕೆ.ಎಸ್.ಆರ್.ಟಿ.ಸಿ.ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಸನ್ನಕುಮಾರ್ ಕೆ.ಬಾಲ್ಯಾನಾಯ್ಕ ರಂಗಾಸ್ತರಲ್ಲಿ ಮನವಿ ಮಾಡಿದರು.
ಶ್ರೀಸಾಹಿತ್ಯ ಸಾಮ್ರಾಜ್ಯ ನಾಟ್ಯ ಸಂಘ ಎಂ.ಕೆ.ಹಟ್ಟಿ ಸಾಂಸ್ಕತಿಕ ಚಟುವಟಿಕೆಗಳ ರಂಗವೇದಿಕೆ ವತಿಯಿಂದ ತ.ರಾ.ಸು.ರಂಗಮಂದಿರದಲ್ಲಿ ಗುರುವಾರ ಹಾಸ್ಯಭರಿತ ಮುದುಕನ ಮದುವೆ ನಾಟಕ ಉದ್ಘಾಟಿಸಿ ಮಾತನಾಡುತ್ತ ರಂಗಕಲೆಗೆ ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ಕೋರಿದರು.
ಡಿ.ವೈ.ಎಸ್ಪಿ.ವಿಜಯಕುಮಾರ್ ಸಂತೋಷ್ ಮಾತನಾಡಿ ರಂಗಭೂಮಿ ನಶಿಸಿ ಹೋಗುತ್ತಿರುವ ಇಂದಿನ ಕಾಲದಲ್ಲಿ ಹಾಸ್ಯ ಚಕ್ರವರ್ತಿ ಬಿರುದಾಂಕಿತ ಕುಮಾರಸ್ವಾಮಿ ಮತ್ತು ದಂಪತಿಗಳು ಮುದುಕನ ಮದುವೆ ಮೂಲಕ ರಂಗಾಸಕ್ತರನ್ನು ಇನ್ನು ತಮ್ಮತ್ತ ಸೆಳೆದಿಟ್ಟುಕೊಂಡಿದ್ದಾರೆಂದರೆ ಸುಲಭದ ಕೆಲಸವಲ್ಲ. ರಂಗಾಸಕ್ತರು ರಂಗಭೂಮಿ ಕಲಾವಿದರನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಕರೆ ನೀಡಿದರು.
ಸಿರಿಗನ್ನಡ ವೇದಿಕೆ ಪ್ರಧಾನ ಕಾರ್ಯದರ್ಶಿ ಬಸವರಾಜು ಟಿ.ಬೆಳಗಟ್ಟ ಮಾತನಾಡುತ್ತ ಆಧುನಿಕ ಯುಗದಲ್ಲಿ ಕಾವ್ಯ, ನಾಟಕ, ಸಂಗೀತ, ಕಾದಂಬರಿಗಳನ್ನು ಕಡೆಗಣಿಸಲಾಗುತ್ತಿದೆ. ಮೊಬೈಲ್, ಫೇಸ್‍ಬುಕ್, ವಾಟ್ಸ್‍ಪ್ ಹಾವಳಿ ಜಾಸ್ತಿಯಾಗಿರುವುದರಿಂದ ನಾಟಕಗಳನ್ನು ನೋಡುವವರೆ ಇಲ್ಲದಂತಾಗಿದ್ದಾರೆ. ರಂಗಭೂಮಿ ಗಟ್ಟಿಯಾಗಿ ಉಳಿಯಬೇಕು. ಪದ್ಮಭೂಷಣ ವರನಟ ಡಾ.ರಾಜ್‍ಕುಮಾರ್ ಚಿತ್ರರಂಗದಲ್ಲಿ ಹೆಸರುವಾಸಿಯಾಗಿರುವುದಕ್ಕೆ ನಾಟಕವೇ ಮೂಲ ಕಾರಣ ಎಂದು ಹೇಳಿದರು.
ಸಾಹಿತಿ ಮತ್ತು ನ್ಯಾಯವಾದಿ ವಿನಯಕುಮಾರ್ ಸಾಹುಕಾರ್ ಮಾತನಾಡಿ ಕಲೆ, ಸಾಹಿತ್ಯ, ಸಂಗೀತಕ್ಕೆ ರಾಜನ ಅಧಿಕಾರವನ್ನು ಮೀರುವಷ್ಟು ಶಕ್ತಿಯಿದೆ. ಸಾರ್ವಭೌಮಕ್ಕಿಂತ ಹೆಚ್ಚಿನ ಅಧಿಕಾರ ಸಂಗೀತಕ್ಕಿದೆ. ನೆಹರು ಪ್ರಧಾನನಮಂತ್ರಿಯಾಗಿದ್ದಾಗ ಸ್ಲಂನಲ್ಲಿರುವ ಮಹಮದ್ ರಫಿರವರನ್ನು ಕರೆಸಿ ಹಾಡಿಸುತ್ತಿದ್ದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್ ಮಾತನಾಡುತ್ತ ಹಾಸ್ಯಭರಿತವಾದ ಮುದುಕನ ಮದುವೆ ನಾಟಕ ತತ್ವ, ಮೌಲ್ಯಾಧಾರಿತ, ಸಿದ್ದಾಂತಗಳಿಂದ ಕೂಡಿದೆ. ಇದೊಂದು ಶ್ರೇಷ್ಟ ನಾಟಕವಾಗಿದ್ದು, ಭಾವನಾತ್ಮಕ ಸಂಬಂಧಗಳು ಉಳಿಯಬೇಕಾಗಿದೆ ಎಂದು ತಿಳಿಸಿದರು.
ಉದ್ಯಮಿ ಸೈಟ್‍ಬಾಬಣ್ಣ, ನಗರಸಭೆ ಮಾಜಿ ಅಧ್ಯಕ್ಷ ಡಿ.ಮಲ್ಲಿಕಾರ್ಜುನ್, ಡಾ.ರಾಮಚಂದ್ರನಾಯಕ ಇವರುಗಳು ಮಾತನಾಡಿದರು.
ನ್ಯಾಯವಾದಿ ಕಣ್ಣಪ್ಪ, ಸಾಹಿತಿ ರೇವಣ್ಣ ಬಳ್ಳಾರಿ, ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ನಾಗರಾಜ್ ರಂಗಭೂಮಿ ಕಲಾವಿದ ಡಿ.ರಾಮಸ್ವಾಮಿ ವೇದಿಕೆಯಲ್ಲಿದ್ದರು.ಬಿ.ಕುಮಾರಸ್ವಾಮಿ ಮತ್ತು ದಂಪತಿ ಹಾಗೂ ಇನ್ನಿಬ್ಬರನ್ನು ಸನ್ಮಾನಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
