ದಾವಣಗೆರೆ
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ಶಾಂತಿಯುತ ಮತದಾನ ನಡೆದಿದ್ದು, 25 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ.
ಕೆಲವೆಡೆ ಮತದಾನ ಬಹಿಷ್ಕಾರ ತಂತ್ರ, ಮತಯಂತ್ರ ಸ್ಥಗಿತ, ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದರುವುದು ಸೇರಿದಂತೆ ಸಣ್ಣಪುಟ್ಟ ಸಮಸ್ಯೆಗಳ ನಡುವೆ ಮತದಾನ ಪ್ರಕ್ರಿಯೆ ಸುಗಮವಾಗಿ ಪೂರ್ಣಗೊಂಡಿತು.ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕು ಹಾಗೂ ದಾವಣಗೆರೆ ಜಿಲ್ಲೆಯ ಜಗಳೂರು, ಹೊನ್ನಾಳ್ಳಿ, ದಾವಣಗೆರೆ, ಹರಿಹರ, ಚನ್ನಗಿರಿ, ನ್ಯಾಮತಿ ತಾಲೂಕು ವ್ಯಾಪ್ತಿಯಲ್ಲಿದ್ದ ಮತದಾರರು ಮಂಗಳವಾರ ಹಕ್ಕು ಚಲಾಯಿಸಿದರು.
ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಮತಯಂತ್ರಗಳೊಂದಿಗೆ ಡಿಮಸ್ಟರಿಂಗ್ ಕೇಂದ್ರ ತಲುಪಿದ ಸಿಬ್ಬಂದಿ ಅವುಗಳನ್ನು ಭದ್ರತಾ ಕೊಠಡಿಗೆ ಹಸ್ತಾಂತರಿಸಿದರು. ನಂತರ ಅಧಿಕಾರಿಗಳು ದಾವಣಗೆರೆ ವಿಶ್ವವಿದ್ಯಾನಿಲಯದ ಶಿವಗಂಗೋತ್ರಿ ಕ್ಯಾಂಪಸ್ ಆವರಣದಲ್ಲಿ ತೆರೆದಿರುವ ಭದ್ರತಾ ಕೊಠಡಿಯಲ್ಲಿ ಮತಯಂತ್ರಗಳನ್ನು ಇರಿಸಿ ಶೀಲ್ ಮಾಡಿದ್ದು, ಮೇ 23ರ ವರೆಗೆ ಈ ಮತಯಂತ್ರಗಳು ವ್ಯಾಪಕ ಭದ್ರತೆಯೊಂದಿಗೆ ಈ ಕೊಠಡಿಗಳಲ್ಲೇ ಇರಲಿವೆ.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಮಧ್ಯೆ ನೆರಹಣಾಹಣಿ ಇದ್ದು, ಅಭ್ಯರ್ಥಿಗಳ ಬೆಂಬಲಿಗರು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಹಕ್ಕು ಚಲಾವಣೆಗೆ ಮತದಾರರಿಗೆ ಸಹಕಾರ ನೀಡಿದರು. ಮತದಾನ ಕೇಂದ್ರಕ್ಕೆ ಕರೆತರುವುದು, ಓಲೈಸುವುದು ಮತಗಟ್ಟೆಯ ಎದುರು ಸಾಮಾನ್ಯವಾಗಿತ್ತು.
ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1,949 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಸೋಮವಾರ ಸಂಜೆಯೇ ಮತಗಟ್ಟೆ ಸೇರಿದ್ದ ಚುನಾವಣಾ ಸಿಬ್ಬಂದಿ ಮತದಾನಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಮತಗಟ್ಟೆಯಲ್ಲೇ ತಂಗಿದ್ದ ಚುನಾವಣಾ ಸಿಬ್ಬಂದಿಗಳು, ಬೆಳಿಗ್ಗೆ 6 ಗಂಟೆಗೆ ಸರಿಯಾಗಿ ಅಭ್ಯರ್ಥಿಗಳ ಏಜೆಂಟರು ಮತಗಟ್ಟೆಗೆ ಧಾವಿಸಿದ ನಂತರದಲ್ಲಿ ಸುಮಾರು ಮುಕ್ಕಾಲು ಗಂಟೆ ಕಾಲ ಅಣಕು ಮತದಾನ ಮಾಡಿ ಮತಯಂತ್ರಗಳ ಕಾರ್ಯ ನಿರ್ವಹಣೆಯನ್ನು ಖಾತರಿಪಡಿಸಿದರು. ಬಳಿಕ ಬೆಳಿಗ್ಗೆ 7ಕ್ಕೆ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 6ರ ವರೆಗೆ ನಡೆಯಿತು.
ಮೊದಲು ಮತ ಚಲಾವಣೆ ಮಾಡಬೇಕು ಎಂಬ ಉತ್ಸಾಹದಲ್ಲಿದ್ದ ಅನೇಕರು ಬೆಳಿಗ್ಗೆ 6.30ರಿಂದ ಮತಗಟ್ಟೆ ಎದುರು ಕಾಯುತ್ತಿದ್ದರು. ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಹಕ್ಕು ಚಲಾವಣೆ ಮಾಡಿ ಹೆಮ್ಮೆ ವ್ಯಕ್ತಪಡಿಸಿದರು. ವಾಯು ವಿಹಾರಕ್ಕೆ ಬಂದವರು, ಕೆಲಸಕ್ಕೆ ಹೋಗುವವರು ಬೆಳಿಗ್ಗೆಯ ಸಮಯದಲ್ಲಿ ಮತ ಚಲಾಯಿಸಿದರು.
ಬೆಳಿಗ್ಗೆ 7 ಗಂಟೆಗೆ ಬಿರುಸಿನಿಂದ ಆರಂಭವಾದ ಮತದಾನವು ಬಿಸಿಲ ಝಳ ಎರುತ್ತಿದ್ದಂತೆ, ಮತದಾರರು ಮತಟ್ಟೆಗಳಿಗೆ ಬರುವುದನ್ನು ಕಡಿಮೆ ಮಾಡಿದ ಕಾರಣ ಮಂದಗತಿಯಲ್ಲಿ ಮುಂದುವರೆದಿತ್ತು. ಬಳಿಕ ಸಂಜೆ ನಾಲ್ಕು ಗಂಟೆಯ ನಂತ ಸೂರ್ಯನ ರೌದ್ರಾವತಾರ ಕಡಿಮೆಯಾದ ನಂತರು ಮತ್ತೆ ಮತದಾನ ಚುರುಕು ಪಡೆಯಿತು.
ಮತಗಟ್ಟೆ ಪ್ರವೇಶಿಸಲು ಸಾಲಗಟ್ಟಿ ನಿಂತಿದ್ದ ಮತದಾರರಿಗೆ ಮೊಬೈಲ್ ಬಳಸದಂತೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದರು. ಮತಗಟ್ಟೆ ಒಳಗೆ ಕಾಲಿಡುವ ಮುನ್ನ ಅವುಗಳನ್ನು ಪೊಲೀಸರು ಪಡೆಯುತ್ತಿದ್ದರು. ಪ್ರತಿಯೊಬ್ಬರನ್ನು ಪರಿಶೀಲಿಸಿ ಒಳಗೆ ಬಿಡುತ್ತಿದ್ದರು. ಆದರೂ, ಕೆಲವರು ಮೊಬೈಲ್ ಹಿಡಿದು ಮತಗಟ್ಟೆಗೆ ಹೋಗಿ ಗೊಂದಲ ಸೃಷ್ಟಿಸಿದರು. ಅದರಲ್ಲೊಬ್ಬ ಜಗಳೂರು ತಾಲೂಕಿನ ಮತಗಟ್ಟೆಯೊಂದರಲ್ಲಿ ಮತ ಚಲಾಯಿಸಿ, ಬ್ಯಾಲೆಟ್ ಯುನಿಟ್‍ನ ಪೋಟೋ ತಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡುವ ಮೂಲಕ ಕಿಡಿಗೇಡಿತನ ಪ್ರದರ್ಶಿಸಿರುವುದು ಬೆಳಕಿಗೆ ಬಂದಿದೆ.
ಮತಯಂತ್ರದ ಸಮೀಪ ಸಾಲಾಗಿ ಕುಳಿತ ಸಿಬ್ಬಂದಿ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಅರ್ಹತೆ ಪಡೆದಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದರು. ಬಳಿಕ ಪುಸ್ತಕದಲ್ಲಿ ಸಹಿ, ಹೆಬ್ಬೆಟ್ಟಿನ ಗುರುತು ಪಡೆಯುತ್ತಿದ್ದರು. ಎಡಗೈ ತೋರು ಬೆರಳಿಗೆ ಶಾಯಿ ಹಾಕಿ, ಮತಚಲಾವಣೆ ಮಾಡಿದ ಮೊಹರು ಒತ್ತುತ್ತಿದ್ದರು. ನಂತರ ವಿದ್ಯುನ್ಮಾನ ಮತಯಂತ್ರದ ಬಳಿಗೆ ತೆರಳು ಅವಕಾಶ ನೀಡುತ್ತಿದ್ದರು.
ಎಲ್ಲ ಮತಗಟ್ಟೆಯಲ್ಲಿಯೂ ಮೂಲ ಸೌಲಭ್ಯ ಕಲ್ಪಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಜಿ.ಎನ್.ಶಿವಮೂರ್ತಿ ಸೂಚಿಸಿದ್ದರೂ ಸಹ ದೊಡ್ಡಬಾತಿ ಸರ್ಕಾರಿ ಶಾಲೆ, ಹರಿಹರದ ಪಿಬಿ ರಸ್ತೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಹಿರಿಯ ಶಾಲೆ, ಉರ್ದು ಉನ್ನತೀಕರಿಸಿದ ಪ್ರಾಥಮಿಕ ಶಾಲೆ, ದುಗ್ಗಾವತಿ ಸರ್ಕಾರಿ ಶಾಲೆ, ತೆಲಿಗಿ ಶಾಲೆ ಸೇರಿದಂತೆ ಇತರೆಡೆಗಳಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಕುಡಿಯಲು ನೀರಿನ ವ್ಯವಸ್ಥೆ ಮಾಡಿರುವುದು ಕಂಡು ಬರಲಿಲ್ಲ. ಹೀಗಾಗಿ ಹಕ್ಕು ಚಲಾವಣೆಗೆ ಸರತಿ ಸಾಲಿನಲ್ಲಿ ನಿಂತು ಸುಸ್ತಾದ ಅನೇಕರು ನೀರು ಕುಡಿಯಲು ಸಿಗದೇ ವಿಧಿ ಇಲ್ಲದೇ, ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದರು.
ಲೋಕಸಭಾ ಕ್ಷೇತ್ರದ ಮತದಾರರು ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಲು ಮಂಗಳವಾರ ತಮ್ಮ ಹಕ್ಕು ಚಲಾಯಿಸಿದ್ದು, ಕಣದಲ್ಲಿದ್ದ 25 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು, ಮೇ 23 ರಂದು ನಡೆಯಲಿರುವ ಮತ ಎಣಿಕೆಯ ನಂತರವೇ ಅಭ್ಯರ್ಥಿಗಳ ಹಣೆಬರಹ ಬಯಲಾಗಲಿದೆ.