ಹಾನಗಲ್ಲ :
ಧರ್ಮ ಹಸಿದ ಪ್ರಾಣಿಗೆ ಹೊರಗಿನಂದ ತುರುಕುವ ಹುಲ್ಲಿನಂತಲ್ಲ ಎನ್ನುವ ಮೂಲಕ ಪರಿಪೂರ್ಣ ಮಾನವತ್ವವನ್ನು ಧರ್ಮದ ಮೂಲಕ ಸಾರಿದ ಸ್ವಾಮಿ ವಿವೇಕಾನಂದರು ಪ್ರೀತಿ ವಿಶ್ವಾಸಗಳಿಂದ ಜಗದ ಕಣ್ಣು ತೆರೆಸಿ ಮಹಾ ಮಾನವತಾವಾದಿಯಾದರು ಎಂದು ಸಾಹಿತಿ ಪ್ರೊ.ಮಾರುತಿ ಶಿಡ್ಲಾಪುರ ನುಡಿದರು.
ಗುರುವಾರ ಹಾನಗಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಭಾಷಣದ 75 ನೇ ವರ್ಷಾಚರಣೆ ಅಂಗವಾಗಿ ಆಯೋಜಿಸಿದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ಮಾನವ ಪ್ರಾಣಿಯನ್ನು ಮಾನವ ವ್ಯಕ್ತಿಯನ್ನಾಗಿಸುವ ನೀತಿ ಸಂಹಿತೆ ನಿಡಿದ್ದಾರೆ. ಅವರ ವೀರ ವಾಣಿ ಪುರುಷ ಸಿಂಹದಂತಿದೆ. ಸ್ವಾಮಿ ವಿವೇಕಾನಂದರು ಹೇಳಿದ ಧರ್ಮ ಎಂದರೆ ಸ್ವಾತಂತ್ರ್ಯ, ನ್ಯಾಯ, ಸತ್ಯ, ಮತ್ತು ಪವಿತ್ರ ಜೀವನ ವಿಧಾನವಾಗಿತ್ತು. ಧರ್ಮ ಹಸಿದ ಪ್ರಾಣಿಗೆ ಹೊರಗಿನಂದ ತುರುಕುವ ಹುಲ್ಲಿನಂತಲ್ಲ, ವ್ಯಕ್ತಿ ಅಂತರಂಗದಲ್ಲಿ ಸಹಜವಾಗಿಯೇ ಅರಳುವ ಹೂವಿನಂತೆ ಎಂಬ ಸಂದೇಶ ನೀಡಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ವಿಶ್ವನಾಥ ಬೋಂದಾಡೆ, ಪುಣ್ಯ ಪುರುಷರಿಗೆ ಜನ್ಮ ನೀಡಿದ ಭಾರತ ನಾಡು ಸ್ವಾಮಿ ವಿವೇಕಾನಂದರಂಥ ಆಧ್ಯಾತ್ಮ ದೇಶಭಕ್ತರನ್ನು ನೀಡಿದೆ. ಸನ್ಯಾತತ್ವಕ್ಕೆ ಅದಮ್ಯೆ ಚೇತನ ಒದಗಿಸದ ಅವರು ಮತ್ತೆ ಮತ್ತೆ ಭಾರತದಲ್ಲಿಯೇ ಜನ್ಮ ತಾಳುವೆ ಎನ್ನುವ ಮೂಲಕ ಭಾರತದ ಪಾವಿತ್ರ್ಯತೆಯನ್ನು ಸಾರಿ ಹೇಳಿದ್ದಾರೆ. ಆತ್ಮವಿಶ್ವಾಸದಿಂದ ನೆಮ್ಮದಿಯ ಬದುಕಿಗಾಗಿ ಮಾರ್ಗದರ್ಶನ ಮಾಡಿದ ಸ್ವಾಮಿ ವಿವೇಕಾನಂದರು ಈ ಜಗತ್ತಿಗೆ ಮಾದರಿ. ಚಿಕ್ಯಾಗೋ ಭಾಷಣದ ಮೂಲಕ ಭಾರತದ ಧರ್ಮ ಹಾಗೂ ಸನಾತನ ಶಕ್ತಿಯ ಬೆಳಕನ್ನು ಹರಿಸಿದ್ದಾರೆ ಎಂದರು.
ಎನ್‍ಎಸ್‍ಎಸ್ ಅಧಿಕಾರಿ ಪ್ರೊ.ಎಚ್.ಎಸ್.ಬಾರ್ಕಿ, ಉಪನ್ಯಾಸಕರಾದ ಪ್ರೊ.ಎಸ್.ಎಸ್.ನಿಸ್ಸೀಮಗೌಡರ, ಪ್ರೊ.ಸುಮಂಗಲಾ ನಾಯನೇಗಿಲ, ಪ್ರೊ.ರೂಪಾ ಹಿರೇಮಠ, ಪ್ರೊ.ಎಸ್.ಎಂ.ಜವಳಿ, ಪ್ರೊ.ಕೆ.ಎಸ್.ತೀರ್ಥಂಕರ, ಸಿ.ವಾಯ್.ಹಾವೇರಿ, ಪ್ರೊ.ಮೂಕಾಂಬೆ ನಾಯಕ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಕವನಾ ನೆಲ್ಲೀಬೀಡ ಪ್ರಾರ್ಥನೆ ಹಾಡಿದರು. ಜ್ಯೋತಿ ಬಾರ್ಕಿ ಸ್ವಾಗತಿಸಿದರು. ಕಾವ್ಯಾ ಮಲಗುಂದ ಕಾರ್ಯಕ್ರಮ ನಿರೂಪಿಸಿದರು. ದಾದಾಪೀರ ಮುರಡಿ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ