ಹಾವೇರಿ : –
“ಹುಲುಸಾಗು ಬೆಳೆದು ಹಸಿರ ಹೊದ್ದು ಬೆಳಕ ಬೀರುವದು, ಹೂವಾಗಿ ಕಾಯಾಗಿ ಹಣ್ಣಾಗಿ ಸವಿಯ ಸವಿಯುವದು” ಇದು ಯುವ ಕವಿ ವಿರೇಶ ಗಡ್ಡದ್ದೇವರಮಠ ವಾಚಿಸಿದ ಕವನ ಬದುಕಿನ ಅಂತರ್ಯವನ್ನು ತೆಗೆದಿಟ್ಟಿರೆ,
ವಸಂತ ಕಡತಿಯ ಕವನ ಹೊಟ್ಟೆಕಟ್ಟೆ ಮಗನ ಹೊಟ್ಟೆ ತುಂಬಿಸಿದೆ, ಇಂದು ಹೊಟ್ಟೆ ಉರಿಯುತ್ತಿದೆ ಮಗ ಮಗನಾಗದಿದ್ದಕ್ಕೆ ಎನ್ನುವ ಸಾಲು ಪ್ರಸ್ತುತ ಜೀವನವನ್ನು ಬಿಂಬಿಸಿತು.
ಎಸ್.ಆರ್ ಮಠಪತಿ ಕಾವ್ಯ ಮೊನ್ನೆ ಸತ್ತಿತ್ತು ಊರ ಗೌಡರ ಎತ್ತು, ಅದಕ್ಕಾಗಿ ಅಲ್ಲಿ ನೆರೆದಿತ್ತು ಜನ ಸುತ್ತಮುತ್ತ, ನೆರೆದ ಜನ ಕಣ್ಣೀರ ಸುರಿಸುತ್ತಿತ್ತು ಅದರ ವರ್ಣಣೆ ನೆನೆಯುತ್ತ” ಎನ್ನುವ ಕವನ ಗ್ರಾಮ ಜನರ ಜೀವನ ತಿಳಿಸಿತ್ತು.ಹೀಗೆ ಹಲವು ವೈವಿದ್ಯಮಯ ಕಾವ್ಯ ವಾಚನವು ಕಂಡು ಬಂದಿದ್ದು ನಗರದ ಜಿಲ್ಲಾ ಗುರುಭವನದಲ್ಲಿ ನಡೆದ ಹಾವೇರಿ ತಾಲೂಕಾ 7 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ.
ಕವಿಗೋಷ್ಠಿಯಲ್ಲಿ ನಗರದ ಖ್ಯಾತ ವೈದ್ಯ ಡಾ|| ವಿ.ಕೆ ಭಗವತಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಉದಯೋನ್ಮುಖ ಕವಿಗಳು ಕವನ ವಾಚಿಸಿದರು. ರೈತ, ಯೋಧ, ಮೀಟೂ, ರೂಪಾಯಿ ಅಪಮೌಲ್ಯ, ಬದುಕು, ಪ್ರಕೃತಿ, ಲಿಂ. ತೋಂಟದ ಸಿದ್ಧಲಿಂಗ ಶ್ರೀ, ಹೀಗೆ ವೈವಿಧ್ಯಮಯ ಪ್ರಚಲಿತ ವಿಷಯಗಳ ಮೇಲೆ ಕವನಗಳ ವಾಚನ ಮಾಡಿದ್ದು ಸಾಹಿತ್ಯಾಸಕ್ತರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿ ಗಂಗಾಧರ ನಂದಿ ಮಾತನಾಡಿ, ಕಾವ್ಯ ಎನ್ನುವುದು ಕವಿಯಲ್ಲಿ ಪ್ರಕಟಗೊಳ್ಳುವ ಒಂದು ಸೃಜನಶೀಲ ಪ್ರಕ್ರಿಯೆ. ಕವಿಯಾದವನು ತನ್ನ ಕಾವ್ಯ ರಚನೆಯ ಸಂಧರ್ಭದಲ್ಲಿ ಪ್ರಸ್ತುತ ವಿದ್ಯಮಾನಗಳಿಗೆ ಸ್ಪಂದಿಸಿ, ಸಮಷ್ಠಿಯ ಪರಿವರ್ತನೆಗೆ ದಾರಿ ದೀಪವಾಗಬೇಕು ಎಂದು ಹೇಳಿದರು
ಕವಿಯು ಮನುಷ್ಯನ ಬೌದ್ಧಿಕತೆ , ನಾಗರಿಕತೆ, ಆಧುನಿಕತೆ, ಅಭಿವೃಧ್ಧಿ ಮಾರ್ಗ ಹುಡುಕುವುದರೊಂದಿಗೆ ಹೃದಯ ಸ್ಪಂದನ ನೆಲೆಯಲ್ಲಿ ಸೌಂದರ್ಯಾನ್ವೇಷಣೆಯನ್ನು ತನ್ನ ಕಾವ್ಯದಲ್ಲಿ ಹಿಡಿದಿಡುವ ಪ್ರಯತ್ನವನ್ನು ಮಾಡಬೇಕೆಂದು ಯುವ ಕವಿಗಳಿಗೆ ಕಿವಿಮಾತು ಹೇಳಿದರು.
ಕವಿಗೋಷ್ಠಿಯಲ್ಲಿ ಸರ್ವಾಧ್ಯಕ್ಷೆ ಸಿದ್ದುಮತಿ ನೆಲವಿಗಿ, ಲಿಂಗಯ್ಯ ಹಿರೇಮಠ, ಪಿ.ಬಿ ಭಾವನೂರ, ಸುರೇಶ ಕಲ್ಮನಿ, ಸಿ.ಜಿ.ತೋಟಣ್ಣನವರ, ತಾಲೂಕಾ ಕಸಾಪ ಅಧ್ಯಕ್ಷ ವೈ.ಬಿ. ಆಲದಕಟ್ಟಿ, ಎಸ್.ಎನ್. ದೊಡ್ಡಗೌಡರ. ಫಕ್ಕೀರೇಶ ಮರಡೂರ, ಜಿ.ಎನ್ ಹೂಗಾರ, ಪೃಥ್ವಿರಾಜ್ ಬೆಟಗೇರಿ, ಬಿ.ಎಂ ಮಠ ಇನ್ನಿತರರು ಉಪಸ್ಥಿತರಿದ್ದರು.
ಕವಿಗೋಷ್ಠಿಯ ಆಶಯ ಭಾಷಣವನ್ನು ಪ್ರೋ ಪುಷ್ಪಾ ಶಲವಡಿಮಠ ಮಾಡಿದರು. ಆರಂಭದಲ್ಲಿ ಶಿವಬಸವ ಮರಳಿಹಳ್ಳಿ ಸ್ವಾಗತಿಸಿದರು. ಶಿಕ್ಷಕ ಆರ್.ಸಿ ನಂದಿಹಳ್ಳಿ ನಿರೂಪಿಸಿದರು. ಕೊನೆಯಲ್ಲಿ ಎಸ್.ಎಂ ಬಡಿಗೇರ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ