ದಾವಣಗೆರೆ:
2019-20ನೇ ಆರ್ಥಿಕ ವರ್ಷಕ್ಕೆ ಮಹಾನಗರ ಪಾಲಿಕೆ ಮೇಯರ್ ಶೋಭಾ ಪಲ್ಲಾಗಟ್ಟೆರವರು ಪಾಲಿಕೆಯ 9.12 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಿದರು.
ಇಲ್ಲಿನ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಬುಧವಾರ ನಡೆದ ಆಯ-ವ್ಯಯ ಮಂಡನ ಸಭೆಯಲ್ಲಿ 9.12 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಿ, ಆಯ-ವ್ಯಯದ ಪ್ರಾಸ್ತಾವಿಕ ಭಾಷಣವನ್ನು ಸ್ವಲ್ಪಹೊತ್ತು ಮಾಡಿದರು. ಬಳಿಕ ಉಪ ಮೇಯರ್ ಕೆ.ಚಮನ್‍ಸಾಬ್ ಅದನ್ನು ಪೂರ್ಣಗೊಳಿಸಿದರು.
ಪಾಲಿಕೆಯಲ್ಲಿ ಪ್ರಸ್ತುತ ಇರುವ ಆರಂಭಿಕ ಶಿಲ್ಕು 51.97 ಕೋಟಿ ರೂ.ಗಳ ಜತೆಗೆ ರಾಜಸ್ವ ಸ್ವೀಕೃತಿಯಿಂದ 126.91 ಕೋಟಿ ರೂ, ಬಂಡವಾಳ ಸ್ವೀಕೃತಿಯಿಂದ 86.50 ಕೋಟಿ ರೂ. ಅಸಾಮಾನ್ಯ ಸ್ವೀಕೃತಿಯಿಂದ 113.09 ಕೋಟಿ ಸೇರಿದಂತೆ 2019-20ನೇ ಸಾಲಿನಲ್ಲಿ ಪಾಲಿಕೆಯು ಒಟ್ಟು 378.48 ಕೋಟಿ ರೂಪಾಯಿ ಆದಾಯ ಕ್ರೊಢೀಕರಿಸುವ ನಿರೀಕ್ಷೆ ಹೊಂದಿದ್ದು, ರಾಜಸ್ವ ಪಾವತಿಗಾಗಿ 90.94 ಕೋಟಿ ರೂ, ಬಂಡವಾಳ ಪಾವತಿಗಾಗಿ 143.30 ಕೋಟಿ ಹಾಗೂ ಅಸಾಮಾನ್ಯ ಪಾವತಿಗಾಗಿ 135.11 ಕೋಟಿ ಸೇರಿದಂತೆ ಒಟ್ಟು 369.35 ಕೋಟಿ ರೂ.ಗಳನ್ನು ಪಾಲಿಕೆ ಸಿಬ್ಬಂದಿಯ ವೇತನ, ವಿವಿಧ ಅಭಿವೃದ್ಧಿ ಕಾಮಗಾರಿ, ನಾಗರೀಕರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಿ 9.12 ಕೋಟಿ ರೂಪಾಯಿಗಳನ್ನು ಉಳಿಸುವ ಗುರಿಯನ್ನು ಪಾಲಿಕೆ ಹಾಕಿಕೊಂಡಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬರುವ ವಿವಿಧ ಆದಾಯ ಮೂಲಗಳಾದ ರಾಜಸ್ವ ಅನುದಾನದಡಿಯಲ್ಲಿ ಎಸ್‍ಎಫ್‍ಸಿ ಮುಕ್ತ ನಿಧಿಯಿಂದ 2.40 ಕೋಟಿ ರೂ., ಎಸ್‍ಎಫ್‍ಸಿ ವಿದ್ಯುತ್ ಅನುದಾನದಡಿ 22 ಕೋಟಿ ರೂ, ಎಸ್.ಡಬ್ಲ್ಯೂ.ಎಂ ಹಾಗೂ ಎಸ್.ಎಫ್.ಸಿ. ಪ್ರೋತ್ಸಾಹ ಧನದಡಿಯಲ್ಲಿ 2 ಕೋಟಿ ರೂ. ಎಸ್‍ಎಫ್‍ಸಿ ವೇತನ ಅನುದಾನದಿಂದ 28 ಕೋಟಿ ರೂ. ಆದಾಯವನ್ನು ನಿರೀಕ್ಷಿಸಿದೆ.
ಅಲ್ಲದೆ, ಬಂಡವಾಳ ಹಾಗೂ ವಿಶೇಷ ಅನುದಾನ ಮೂಲಗಳಾದ 14ನೇ ಹಣಕಾಸು ಆಯೋಗ ಅನುದಾನದ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಸಮಾನ್ಯ ಮೂಲ ಅನುದಾನದಡಿ 25 ಕೋಟಿ, ಸಾಮಾನ್ಯ ಕಾರ್ಯಾಧಾರಿತ ಅನುದಾನದಿಂದ 8 ಕೋಟಿ ಹಾಗೂ ರಸ್ತೆ ಮತ್ತು ಸೇತುವೆ ನಿರ್ವಹಣೆ ಅನುದಾನಗಳಿಂದ 4 ಕೋಟಿ ರೂ. ಅನುದಾನ ನಿರೀಕ್ಷಿಸಲಾಗಿದೆ.
ಅಮೃತ್ ಯೋಜನೆಯಿಂದ 1.50 ಕೋಟಿ ರೂ, ಸ್ವಚ್ಛ ಭಾರತ ಅಭಿಯಾನದಿಂದ 44 ಕೋಟಿ ರೂ, ಸ್ಥಳೀಯ ಶಾಸಕರುಗಳ ಪ್ರದೇಶ ಅಭಿವೃದ್ಧಿ ಯೋಜನೆಯಡಿ ತಲಾ 50 ಲಕ್ಷ ದಂತೆ 1 ಕೋಟಿ ರೂ. ಹಾಗೂ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯ ಅಡಿಯಲ್ಲಿ 50 ಲಕ್ಷ ರೂ. ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಿಂದ 35 ಕೋಟಿ ಹಾಗೂ ವಾಜಪೇಯಿ ನಗರ ವಸತಿ ಯೋಜನೆಯಿಂದ 94.50 ಕೋಟಿ ಹಾಗೂ ದೀನ್ ದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಿಂದ 75 ಲಕ್ಷ ಆದಾಯವನ್ನು ಪಾಲಿಕೆ ನಿರೀಕ್ಷಿಸಿದೆ.
ಪಾಲಿಕೆಯ ಸ್ವಂತ ಆದಾಯದ ಮೂಲಗಳಾದ ಆಸ್ತಿ ತೆರಿಗೆಯಿಂದ 21.30 ಕೋಟಿ ರೂ, ವಾಣಿಜ್ಯ ಮಳಿಗೆಗಳ ಬಾಡಿಗೆಯಿಂದ 1.05 ಕೋಟಿ ರೂ, ನೀರು ಸರಬರಾಜು ಬಳಕೆದಾರರ ಶುಲ್ಕದಿಂದ 10.60 ಕೋಟಿ ರೂ. ನೀರು ಸರಬರಾಜು ಸಂಪರ್ಕ ಶುಲ್ಕದಿಂದ 95 ಲಕ್ಷ ರೂ. ಜಾಹೀರಾತು ತೆರಿಗೆಯಿಂದ 40 ಲಕ್ಷ ರೂ. ಒಳಚರಂಡಿ ಸಂಪರ್ಕ ಬಳಕೆದಾರರಿಂದ ಶುಲ್ಕದ ರೂಪದಲ್ಲಿ 80 ಲಕ್ಷ ರೂ. ಸಂತೆ ಸುಂಕದಿಂದ 40 ಲಕ್ಷ ರೂ. ಘನತಾಜ್ಯ ನಿರ್ವಹಣೆ ಬಳಕೆದಾರರ ಶುಲ್ಕಿಂದ 1.20 ಕೋಟಿ, ಕಟ್ಟಡ ಪರವಾನಿಗೆ ಶುಲ್ಕದಿಂದ 2.06 ಕೋಟಿ ರೂ. ಉದ್ದಿಮೆ ಪರವಾನಿಗೆ ಶುಲ್ಕದಿಂದ 65 ಲಕ್ಷ, ರಸ್ತೆ ಕಡಿತ ಶುಲ್ಕದಿಂದ 80 ಲಕ್ಷ ರೂ, ಆಸ್ತಿಗಳ ವರ್ಗಾವಣೆ ಮೇಲಿನ ಹೆಚ್ಚುವರಿ ಅಧಿಬಾರ ಶುಲ್ಕದಿಂದ 1 ಕೋಟಿ ರೂ. ಅಭಿವೃದ್ಧಿ 1.70 ಕೋಟಿ ಸೇರಿದಂತೆ ಈ ಎಲ್ಲಾ ಮೂಲಗಳಿಂದ 113.09 ಕೋಟಿ ರೂ. ಆದಾಯ ನಿರೀಕ್ಷಿಸಿದೆ.
ಪಾಲಿಕೆಯ ಆಡಳಿತ ನಿರ್ವಣೆಗಾಗಿ 3.56 ಕೋಟಿ ರೂ, ಮಾನವ ಸಂಪನ್ಮೂಲ ವೆಚ್ಚಗಳಿಗಾಗಿ 37.35 ಕೋಟಿ ರೂ, ಮೂಲಭೂತ ಸೌಕರ್ಯ ಆಸ್ತಿಗಳ ನಿರ್ವಹಣೆ ಮತ್ತು ದುರಸ್ತಿಗಾಗಿ 4.57 ಕೋಟಿ ರೂ. ಹೊರಗುತ್ತಿಗೆ ವೆಚ್ಚಗಳಿಗಾಗಿ 7.50 ಕೋಟಿ ರೂ. ಉಗ್ರಾಣ ಸಾಮಾಗ್ರಿಗಳ ಖರೀದಿಗಾಗಿ 1.80 ಕೋಟಿ, ನಗರದ ಮೂರು ಭಾಗಗಳಲ್ಲಿ ಸ್ಕೈ ವಾಕ್‍ಗಳ ನಿರ್ಮಾಣಕ್ಕೆ 1.50 ಕೋಟಿ ರೂ., ನೀರು ಶುದ್ಧೀಕರಣ ಘಟಕಗಳ ನವೀಕರಣಕ್ಕಾಗಿ 50 ಲಕ್ಷ ರೂ.
ಪೌರ ಕಾರ್ಮಿಕರ ವಸತಿ ಸಮ್ಮುಚ್ಚಯಕ್ಕಾಗಿ 36.66 ಕೋಟಿ ರೂ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಮಲ್ಟಿಫ್ಲೆಕ್ಸ್ ಅಥವಾ ಮಾಲ್ ನಿರ್ಮಾಣದ ಡಿಪಿಆರ್ ತಯಾರಿಕೆಗಾಗಿ 25 ಲಕ್ಷ ರೂ, ಉದ್ಯಾನ ಬೀದಿಯನ್ನು ಸೌಂದರ್ಯಿಕರಿಸಲು 10 ಲಕ್ಷ ರೂ. ಗ್ರಂಥಾಲಯಗಳಿಗೆ ಪುಸ್ತಕಗಳು ಹಾಗೂ ಅಗತ್ಯ ಪರಿಕರಗಳನ್ನು ಒದಗಿಸಲು 25 ಲಕ್ಷ ರೂ. ಗ್ರಂಥಾಲಯದ ತರಬೇತಿ ಕೇಂದ್ರಕ್ಕೆ ಲಗತ್ತಾಗಿ ಶೌಚಾಲಯ ಮತ್ತು ಉಪಹಾರ ಹಾಲ್ ನಿರ್ಮಾಣಕ್ಕೆ 20 ಲಕ್ಷ ರೂ. ಅನುದಾನ ಕಾಯ್ದಿರಿಸಲಾಗಿದೆ.
ಪಾಲಿಕೆ ಆವರಣದಲ್ಲಿ ಕಾಂಟೀನ್ ನಿರ್ಮಾಣಕ್ಕಾಗಿ 25 ಲಕ್ಷ ರೂ., ಬೀದಿ ವ್ಯಾಪಾರಿಗಳಿಗೆ ವೆಂಡಿಂಗ್ ಜೋನ್ ನಿರ್ಮಾಣಕ್ಕಾಗಿ 40 ಲಕ್ಷ ರೂ. ಪರಿಸರ ಸಂರಕ್ಷಣೆಗಾಗಿ 30 ಲಕ್ಷ ರೂ. ಪಾಲಿಕೆಯ ಕೇಂದ್ರ ಕಚೇರಿಯ ಆವರಣದಲ್ಲಿರುವ ಪುಟ್ಟಣ್ಣ ಕಣಗಾಲ್ ವಾದ್ಯ ಮಂಟಪದ ಉನ್ನತೀಕರಣಕ್ಕಾಗಿ 8 ಲಕ್ಷ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ರಾತ್ರಿ ತಂಗುದಾಣ ನಿರ್ಮಾಣಕ್ಕೆ 50 ಲಕ್ಷ ರೂ. ಡಿಜಿಟಿಯಲ್ ಗ್ರಂಥಾಲಯಕ್ಕಾಗಿ 50 ಲಕ್ಷ ರೂ. ಮಕ್ಕಳ ಮಾಹಿತಿ ರಂಜನೆ ಕೇಂದ್ರದ ಸ್ಥಾಪನೆಗಾಗಿ 2 ಕೋಟಿ ರೂ., ಅಂಧ ಮಕ್ಕಳ ಜಿಮ್ ಹಾಗೂ ಆಟದ ಸ್ಥಳ ನಿರ್ಮಾಣಕ್ಕೆ 20 ಲಕ್ಷ ರೂ. ಐದು ಉದ್ಯಾನವನದಲ್ಲಿ ಮಕ್ಕಳ ಆಟಿಕೆ ಸಾಮಾಗ್ರಿಗಳನ್ನು ಅಳವಡಿಸಲು ತಲಾ 10 ಲಕ್ಷದಂತೆ 50 ಲಕ್ಷ ರೂ. ಮಕ್ಕಳ ಈಜುಕೋಳ ನಿರ್ಮಿಸುವ ಉದ್ದೇಶಕ್ಕೆ 50 ಲಕ್ಷ ರೂ. ಮೀಸಲಿಡಲಾಗಿದೆ.
ಅಲ್ಲದೆ, ಪೌರವ್ಯವಸ್ಥೆಯ ವಿವಿಧ ಆಯಾಮಗಳ ಬಗ್ಗೆ ಹೈಸ್ಕೂಲ್ ವಿದ್ಯಾರ್ಥಿಗಳ ಮಟ್ಟದ ಚರ್ಚಾಸ್ಪರ್ಧೆಗಾಗಿ 5 ಲಕ್ಷ ರೂ. ಪಾಲಿಕೆ ಸದಸ್ಯರ ಅಧ್ಯಯನ ಪ್ರವಾಸಕ್ಕಾಗಿ 30 ಲಕ್ಷ ರೂ. ಪಾಲಿಕೆ ನೌಕರರ ಪ್ರವಾಸಕ್ಕಾಗಿ ನಿಧಿ ಸ್ಥಾಪಿಸಿ 25 ಲಕ್ಷ ರೂ. ಕಾಯ್ದಿರಿಸಲಾಗಿದೆ. ಪಾಲಿಕೆ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಕೂಟ ಆಯೋಜನೆಗಾಗಿ 15 ಲಕ್ಷ ರೂ. ಜಿಲ್ಲಾ ಕ್ರೀಡಾಂಗಣದಲ್ಲಿ ಮಹಿಳಾ ವ್ಯಾಯಾಮ ಶಾಲೆ ಸ್ಥಾಪನೆಗಾಗಿ 50 ಲಕ್ಷ ರೂ. ವಾಹನ ದಟ್ಟಣೆ ಪ್ರದೇಶಗಳಲ್ಲಿ ಮೊಬೈಲ್ ಪೊಲೀಸ್ ಚೌಕಿಗಳ ಸ್ಥಾಪನೆಗೆ 25 ಲಕ್ಷ ರೂ. ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ ನೀಡಲು 20 ಲಕ್ಷ ರೂ., ಗರಡಿಮನೆಗಳ ಪ್ರೋತಸಾಹಕ್ಕಾಗಿ 25 ಲಕ್ಷ ರೂ., ಪೌರ ಸನ್ಮಾನಕ್ಕಾಗಿ 5 ಲಕ್ಷ ರೂ.
ಸ್ವಚ್ಛ ಭಾರತ ಯೋಜನೆಯಡಿ ಘನತ್ಯಾಜ್ಯ ನಿರ್ವಹಣೆಗಾಗಿ 43.14 ಕೋಟಿ ರೂ, ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳಿಗಾಗಿ 25 ಲಕ್ಷ ರೂ., ಇ-ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಗಾಗಿ 30 ಲಕ್ಷ ರೂ., ಕಟ್ಟಡ ತ್ಯಾಜ್ಯ ವಿಲೇವಾರಿ ಘಟಕಕ್ಕಾಗಿ 30 ಲಕ್ಷ ರೂ., ಚಿಂದಿ ಆಯುವವರಿಗೆ ಶೆಲ್ಟರ್ ನಿಜರ್ಮಾಣಕ್ಕಾಗಿ 10 ಲಕ್ಷ ರೂ. ಅನುದಾನವನ್ನು ಕಾಯ್ದಿರಿಸಲಾಗಿದೆ.
ಸಮಾಜ ಕಲ್ಯಾಣ ಯೋಜನೆಗಳಾದ ಡೇ-ನಲ್ಮ್ ಯೋಜನೆಯಡಿ ಸ್ವಯಂ ಉದ್ಯೋಗ ನಡೆಸುವ ಯುವಕರಿಗೆ ಪ್ರೋತ್ಸಾಹ ಧನ ನೀಡಲು 75 ಲಕ್ಷ ರೂ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಯೋಜನೆಯಡಿ ಶೇ.24.10 ಅನುದಾನದಲ್ಲಿ ವೈಯಕ್ತಿಕ ಕಾರ್ಯಕ್ರಮಗಳಿಗಾಗಿ 2.20 ಕೋಟಿ ರೂ., ಸಮುದಾಯ ಆಧಾರಿತ ಕಾರ್ಯಕ್ರಮಗಳಿಗಾಗಿ 3.30 ಕೋಟಿ ರೂ., ಅಪೂರ್ಣಗೊಂಡ ಭವನಗಳನ್ನು ಪೂರ್ಣಗೊಳಿಸಲು 50 ಲಕ್ಷ ರೂ., ಪೌರ ಕಾರ್ಮಿಕರ ಬಡಾವಣೆಯಲ್ಲಿ ಮಾದರಿ ಅಂಗನವಾಡಿ ಕೇಂದ್ರ ನಿರ್ಮಾಣಕ್ಕಾಗಿ 25 ಲಕ್ಷ ರೂ. ಎಸ್‍ಎಫ್‍ಸಿ ಮುಕ್ತನಿಧಿ ಅನುದಾನದಡಿ ವೈಯಕ್ತಿಕ ಕಾರ್ಯಕ್ರಮಗಳಿಗಾಗಿ 40 ಲಕ್ಷ ರೂ., ಸಮುದಾಯ ಆಧಾರಿತ ಕಾರ್ಯಕ್ರಮಗಳಿಗಾಗಿ 60 ಲಕ್ಷ ರೂ. ಮೀಸಲಿಡಲಾಗಿದೆ.
ಇನ್ನೂ ಪಾಲಿಕೆಯ ಅನುದಾನದಲ್ಲಿ ವೈಯಕ್ತಿಕ ಕಾರ್ಯಕ್ರಮಗಳಿಗಾಗಿ 12 ಲಕ್ಷ ರೂ., ಸಮುದಾಯ ಆಧಾರಿತ ಕಾರ್ಯಕ್ರಮಗಳಿಗಾಗಿ 18 ಲಕ್ಷ ರೂ. ವಿಕಲ ಚೇತನರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಶೇ.5ರಷ್ಟು ಅನುದಾನ ಕಾಯ್ದಿರಿಸಲಾಗಿದೆ.
2019-20ನೇ ಸಾಲಿನ ಬಜೆಟ್ ಅನ್ನು ಸದಸ್ಯ ದಿನೇಶ್ ಶೆಟ್ಟಿ ಸ್ವಾಗತಿಸಿದರೆ, ಶಿವನಳ್ಳಿ ರಮೇಶ್ ಅನುಮೋದಿಸಿದರು.
ಈ ಸಂದರ್ಭದಲ್ಲಿ ಆಯುಕ್ತ ಮಂಜುನಾಥ್ ಬಳ್ಳಾರಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಹೆಚ್.ತಿಪ್ಪಣ್ಣ, ಅನ್ನಪೂರ್ಣ ಬಸವರಾಜ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ







