ಜನರ ಆಶೋತ್ತರಗಳು ಈಡೇರಿದಾಗ ನ್ಯಾಯಾಂಗ ವ್ಯವಸ್ಥೆ ಯಶಸ್ವಿಯಾಗುತ್ತದೆ: ಅಭಯ್ ಶ್ರೀನಿವಾಸ್ ಓಕಾ.

ಬೆಂಗಳೂರು

    ಜನಸಾಮಾನ್ಯರ ಆಶೋತ್ತರಗಳು ಈಡೇರಿದಾಗ ಮಾತ್ರ ನ್ಯಾಯಾಂಗ ವ್ಯವಸ್ಥೆ ಯಶಸ್ವಿಯಾಗುತ್ತದೆ. ಈ ನಿಟ್ಟಿನಲ್ಲಿ ವಕೀಲರ ಸಮೂಹ ಸಾಮಾನ್ಯ ಜನರ ಸಮಸ್ಯೆಗಳನ್ನು ನ್ಯಾಯಾಂಗ ವ್ಯವಸ್ಥೆ ಮೂಲಕ ಪರಿಹರಿಸಲು ಕಾರ್ಯೋನ್ಮುಖವಾಗಬೇಕು ಎಂದು ರಾಜ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಶ್ರೀ ಅಭಯ್ ಶ್ರೀನಿವಾಸ್ ಓಕಾ ಕರೆ ನೀಡಿದ್ದಾರೆ.

     ಕರ್ನಾಟಕ ವಕೀಲರ ಪರಿಷತ್ ಕಾನೂನು ಪದವಿ ಪಡೆದ ಯುವ ವಕೀಲರಿಗೆ ಆನ್ ಲೈನ್ ನೊಂದಣಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿಗಳು ನ್ಯಾಯಾಂಗ ವ್ಯವಸ್ಥೆಯಲ್ಲಿ ಕೇವಲ ವಕೀಲರಷ್ಟೇ ಯಶಸ್ವಿಯಾದರೆ ಸಾಲದು. ನ್ಯಾಯಾಂಗ ವ್ಯವಸ್ಥೆಯ ಸಫಲತೆಗೂ ಶ್ರಮಿಸಬೇಕು. ನ್ಯಾಯಾಂಗ ಶಿಕ್ಷಣದಿಂದ ಮಾತ್ರ ಉತ್ತಮ ವಕೀಲರಾಗಿ ಹೊರಹೊಮ್ಮಲು ಸಾಧ್ಯವಿಲ್ಲ. ವಕೀಲರಾಗಿ ಪ್ರಮಾಣವಚನ ಸ್ವೀಕರಿಸಿ ವೃತ್ತಿ ಜೀವನ ಆರಂಭಿಸಿದ ನಂತರವೇ ನಿಜವಾದ ವಕೀಲ ವೃತ್ತಿ ಪ್ರಾರಂಭವಾಗುತ್ತದೆ ಎಂದರು.

    ವಕೀಲರು ಕೇವಲ ಕಾನೂನು ವಿಚಾರಗಳನ್ನು ಮಾತ್ರ ಕಲಿಯುವುದಿಲ್ಲ. ತಮ್ಮ ವೃತ್ತಿ ಬದುಕಿನಲ್ಲಿ ವಿಜ್ಞಾನ, ತಂತ್ರಜ್ಞಾನ, ಆಧುನಿಕ ವ್ಯವಸ್ಥೆಗಳ ಕುರಿತು ಕಲಿಯಬೇಕಾಗುತ್ತದೆ. ಬೇರೆ ವೃತ್ತಿಗಳಲ್ಲಿ ಸೀಮಿತವಾದ ಕಲಿಕೆ ಇದ್ದರೆ ವಕೀಲ ವೃತ್ತಿಯ ಆಯಾಮಗಳೇ ಬೇರೆ. ಆಕಾಶಕ್ಕೆ ಹೇಗೆ ಮಿತಿ ಇಲ್ಲವೋ ಹಾಗೆಯೆ ವಕೀಲರ ಕಲಿಕೆಗೂ ಇತಿಮಿತಿ ಎಂಬುದು ಇಲ್ಲ. ನಿರಂತರ ಕಲಿಕೆ ವಕೀಲ ವೃತ್ತಿಗೆ ಭೂಷಣ. ಹೊಸ ವಿಚಾರಗಳನ್ನು ತಿಳಿದುಕೊಂಡಾಗಲಷ್ಟೇ ವೃತ್ತಿ ಬದುಕಿನಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಪ್ರತಿಪಾದಿಸಿದರು.

    ಕೋವಿಡ್-19 ಸಮಸ್ಯೆ ಶಾಶ್ವತವಲ್ಲ ಈ ಹಿಂದೆ ಇಂತಹ ಹಲವಾರು ರೋಗ ರುಜಿನಿಗಳು, ನೈಸರ್ಗಿಕ ವಿಪತ್ತುಗಳನ್ನು ನಾವು ಕಂಡಿದ್ದೇವೆ. ಆದರೆ ಈಗಿನ ಪರಿಸ್ಥಿತಿ ನಾವು ಹೊಸ ಹೊಸ ವಿಚಾರಗಳನ್ನು ಕಲಿಯಲು, ನಮ್ಮಲ್ಲಿರುವ ಜ್ಞಾನವನ್ನು ವಿನಿಮಯ ಮಾಡಿಕೊಳ್ಳಲು ಸದಾವಕಾಶವಾಗಿದೆ. ಮುಂದಿನ 2 ತಿಂಗಳು ಈ ಸಂಕಷ್ಟ ಇರಬಹುದು. ಆದರೆ ಈ ಅವಧಿಯನ್ನು ಯುವ ವಕೀಲರಿಗೆ ವೃತ್ತಿ ಬದುಕಿನ ಸವಾಲುಗಳನ್ನು ಎದುರಿಸಲು ಸೂಕ್ತ ರೀತಿಯಲ್ಲಿ ತರಬೇತಿ ನೀಡಿ ಸಜ್ಜುಗೊಳಿಸಲು ಸಕಾಲವಾಗಿದೆ. ವಕೀಲರ ಪರಿಷತ್ ಆನ್ ಲೈನ್ ವೇದಿಕೆಗಳ ಮೂಲಕ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಜೊತೆಗೆ ನಿರಂತರ ಕಲಿಕೆಯ ಮೂಲ ಮಂತ್ರದೊಂದಿಗೆ ವಕೀಲರ ಸಮುದಾಯಕ್ಕೆ ಮಾರ್ಗ ದರ್ಶನ ಮಾಡಬೇಕೆಂದು ಸಲಹೆ ಮಾಡಿದರು.

   ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾದ ಜೆ ಎಮ್ ಅನಿಲ್ ಕುಮಾರ್, ಕೋವಿಡ್-19 ಸಂಕಷ್ಟ ನಮ್ಮ ವಕೀಲ ಸಮುದಾಯವನ್ನು ದೈಹಿಕವಾಗಿ ದೂರಮಾಡಿರಬಹುದು ಆದರೆ ತಂತ್ರಜ್ಞಾನದ ಮೂಲಕ ನಾವೆಲ್ಲ ಅತ್ಯಂತ ಸಮೀಪಕ್ಕೆ ಬರಲು ಸಹಕಾರಿಯಾಗಿದೆ. ಇಂತಹ ಕಠಿಣ ಪರಿಸ್ಥಿಯಲ್ಲೂ ವಕೀಲರ ಪರಿಷತ್ತಿನ ಚಟುವಟಿಕೆಗಳಿಗೆ ಭಾದಕವಾಗದಂತೆ ನೋಡಿಕೊಳ್ಳಲಾಗುತ್ತಿದೆ. ವಕೀಲ ಸಮುದಾಯದ ಹಿತಾಸಕ್ತಿ ಕಾಪಾಡಲೂ ಪರಿಷತ್ತು ಭದ್ದವಾಗಿದೆ ಎಂದರು.

   ಇಡಿ ದೇಶದಲ್ಲಿಯೆ ಆನ್ ಲೈನ್ ಮೂಲಕ ವಕೀಲರ ನೋಂದಣಿ ಮಾಡುತ್ತಿರುವ ಮೂರನೇ ರಾಜ್ಯ ನಮ್ಮದಾಗಿದ್ದು, ವರ್ಚುಯಲ್ ಕಲಾಪಗಳ ಮೂಲಕ ನ್ಯಾಯಾಂಗ ವ್ಯವಸ್ಥೆಯನ್ನು ಮುನ್ನಡೆನಡೆಸುತ್ತಿರುವ ಎರಡನೇ ರಾಜ್ಯ ಕರ್ನಾಟಕವಾಗಿದೆ. ವಕೀಲರ ವೃತ್ತಿ ನೈಪುಣ್ಯತೆ ಹೆಚ್ಚಿಸಲು ಮತ್ತು ನಿರಂತರ ಕಾರ್ಯಾಗಾರಗಳನ್ನು ಏರ್ಪಡಿಸಲು ಕ್ರಮಕೈಗೊಳ್ಳುವುದಾಗಿ ಹೇಳಿದರು

   ವಕೀಲರ ಪರಿಷತ್ತಿನ ನೋಂದಣಿ ಸಮಿತಿ ಅಧ್ಯಕ್ಷರಾದ ಎಂ ದೇವರಾಜ. ಪರಿಷತ್ತಿಗೆ ನೋಂದಣಿಯಾಗಲು 400 ವಕೀಲರು ಹೆಸರು ನೋಂದಾಯಿಸಿಕೊಂಡಿದ್ದಾರೆ. ದೈಹಿಕವಾಗಿ ಉಪಸ್ಥಿತರಿದ್ದು ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆಯಿಂದ ಹೊರಬಂದು ಆನ್ ಲೈನ್ ಮೂಲಕ ನೋಂದಣಿಮಾಡುವ. ಸಂದರ್ಶಿಸುವ ಎಲ್ಲ ಪ್ರಕ್ರಿಯೆಗಳನ್ನು ಆಧುನೀಕರಣಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ನೋಂದಣಿ ಸಮಿತಿ ಸದಸ್ಯ ಹೆಚ್ ಎಲ್ ವಿಶಾಲ್‍ರಘು ಸ್ವಾಗತಿಸಿದರು ವಿನಯ್ ಬಿ ಮಂಗಳೆಕರ ವಂದಿಸಿದರು. ಉಪಾಧ್ಯಕ್ಷರಾದ ಎನ್ ಶಿವಕುಮಾರ್, ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap