ತುಮಕೂರು
`ಕಾಣಿಕೆ’ ಕೊಟ್ಟರೂ ಕೆಲಸ ಆಗದೆ ದಿನವೂ ಕಚೇರಿಗೆ ಅಲೆದಾಡುತ್ತ ಹೈರಾಣಾಗಿದ್ದ ನಾಗರಿಕರೊಬ್ಬರ ಸಂಕಷ್ಟ ಅರಿತ ಸದಸ್ಯರೊಬ್ಬರು ಪಾಲಿಕೆ ಕಚೇರಿಯ ಕಂದಾಯ ಶಾಖೆಯಲ್ಲಿ ಗುಟುರು ಹಾಕಿ ಆಯುಕ್ತರ ಗಮನಕ್ಕೆ ತರುತ್ತೇನೆಂದು ಹೇಳಿದ ತಕ್ಷಣವೇ ಆವರೆಗೆ `ನಾಪತ್ತೆ’ ಆಗಿದ್ದ ಕಡತ ತಕ್ಷಣವೇ ಪತ್ತೆ ಆಯಿತೆಂಬ ಸ್ವಾರಸ್ಯಕರ ಪ್ರಸಂಗವೊಂದು ಇದೀಗ ತುಮಕೂರು ಮಹಾನಗರಪಾಲಿಕೆಯ ಕಚೇರಿಯ ತುಂಬ ಸ್ವಾರಸ್ಯಕರವಾಗಿ ಚರ್ಚೆಯಾಗುತ್ತಿದೆ.
ಘಟನೆಯ ವಿವರ
“ತುಮಕೂರು ನಗರದ ಎಸ್.ಐ.ಟಿ. ಬಡಾವಣೆಯ ನಿವಾಸಿಯೊಬ್ಬರು ತಮ್ಮ ಸ್ವತ್ತಿಗೆ ಸಂಬಂಧಿಸಿದಂತೆ ಖಾತೆ ಮಾಡಿಸಿಕೊಂಡು “ಫಾರಂ ನಂಬರ್-3” ಪಡೆಯಲು ಸುಮಾರು ಆರು ತಿಂಗಳಿಗೂ ಹೆಚ್ಚು ಕಾಲದಿಂದ ಪಾಲಿಕೆ ಕಚೇರಿಗೆ ದಿನವೂ ಅಲೆದಾಡುತ್ತಿದ್ದರು. ನಿಯಮಾನುಸಾರವಾಗಿ ಪಾಲಿಕೆಯ ಶುಲ್ಕವನ್ನೆಲ್ಲ ಭರಿಸಿದ್ದರೂ ಅಲೆದಾಟ ಮಾತ್ರ ತಪ್ಪಿರಲಿಲ್ಲ.
ಅಲೆದೂ ಅಲೆದೂ ಹೈರಾಣಾಗಿದ್ದರು. ಕಚೇರಿಯಲ್ಲಿ ಕೇಳಿದವರಿಗೆಲ್ಲ `ಕಾಣಿಕೆ’ ಕೊಟ್ಟಿದ್ದರು. ಆದರೂ ಅವರ ಕೆಲಸ ಮಾತ್ರ ಆಗಿರಲಿಲ್ಲ. ಯಾರೋ ಒಬ್ಬರು ಮತ್ತೆ 20,000 ರೂ. `ಕಾಣಿಕೆ’ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಇವರು ಕೊಡದ ಕಾರಣ ಸಂಬಂಧಿಸಿದ ಕಡತ `ನಾಪತ್ತೆ’ಯಾಗಿದೆಯೆಂದು ಸಿಬ್ಬಂದಿ ಹೇಳಿದ್ದಾರೆ. ಇದರಿಂದ ಆ ವ್ಯಕ್ತಿ ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ಈ ಹಂತದಲ್ಲಿ ಆಕಸ್ಮಿಕವಾಗಿ ಈ ವಿಷಯ ವಾರ್ಡ್‍ನ ಕಾರ್ಪೋರೇಟರ್ ಗಮನಕ್ಕೆ ಬಂದಿದೆ.
ಅವರು ಸದರಿ ವ್ಯಕ್ತಿಯನ್ನೂ ಜೊತೆಗೆ ಕರೆದುಕೊಂಡು ನೇರವಾಗಿ ಕಂದಾಯ ಶಾಖೆಗೆ ಹೋಗಿದ್ದಾರೆ. ಮೊದಲಿಗೆ ವಿಚಾರಿಸಿದ್ದಾರೆ. ಅಲ್ಲಿನ ಸಿಬ್ಬಂದಿ ಸಮರ್ಪಕ ಉತ್ತರ ಕೊಡಲಿಲ್ಲ. ಜೊತೆಗೆ ಕಡತ ನಾಪತ್ತೆಯಾಗಿದೆಯೆಂದೂ ಮತ್ತೆ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಆ ಕಾರ್ಪೋರೇಟರ್ ಅಲ್ಲಿನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವಿಷಯವನ್ನು ಆಯುಕ್ತರ ಗಮನಕ್ಕೆ ತರುತ್ತೇನೆಂದು ಗುಟುರು ಹಾಕಿದ್ದಾರೆ. ಈ ಹಠಾತ್ ಬೆಳವಣಿಗೆಯಿಂದ ವಿಚಲಿತರಾದ ಅಲ್ಲಿನ ಸಿಬ್ಬಂದಿ ತಕ್ಷಣವೇ `ನಾಪತ್ತೆ’ ಆಗಿದ್ದ ಸದರಿ ಕಡತವನ್ನು `ಪತ್ತೆ’ ಮಾಡಿ, ಈ ಕೆಲಸವನ್ನು ಶೀಘ್ರವಾಗಿ ಮಾಡಿಕೊಡುವುದಾಗಿ ಭರವಸೆ ಕೊಟ್ಟಿದ್ದಾರೆ” ಎಂಬ ವಿಷಯವು ಪಾಲಿಕೆಯ ತುಂಬ ಹಬ್ಬಿದೆ.
ಸದಸ್ಯರ ಮೇಲೆ ಒತ್ತಡ
ಈ ಘಟನೆ ಆದ ಬಳಿಕ ಅಲ್ಲಿನ ಕೆಲ ಸಿಬ್ಬಂದಿ ತಮಗೆ ಬೇಕಾದ ಕೆಲ `ಪ್ರಭಾವಿಗಳ’ ಮೊರೆಹೊಕ್ಕಿದ್ದಾರೆ. ಸದರಿ ಕಾರ್ಪೋರೇಟರ್ ಆಯುಕ್ತರ ಬಳಿ ಹೋಗದೆ, ಸುಮ್ಮನಿರುವಂತೆ ಮಾಡಬೇಕೆಂದು ಆ `ಪ್ರಭಾವಿಗಳನ್ನು’ ಕೇಳಿಕೊಂಡಿದ್ದಾರೆ. ಆಗ ಸದರಿ `ಪ್ರಭಾವಿಗಳು’ ಕಾರ್ಪೋರೇಟರ್‍ಗೆ ದೂರವಾಣಿ ಕರೆ ಮಾಡಿ `ಈ ಪ್ರಕರಣವನ್ನು ಬೆಳೆಸಬೇಡಿ. ಆಯುಕ್ತರವರೆಗೂ ಕೊಂಡೊಯ್ಯಬೇಡಿ. ಸುಮ್ಮನಿದ್ದು ಬಿಡಿ’ ಎಂದು ತೀವ್ರವಾಗಿ ಒತ್ತಡ ಹಾಕಿದರೆಂಬ ಸಂಗತಿಯೂ ಈಗ ಬಹಿರಂಗವಾಗಿದ್ದು ಈ ಬೆಳವಣಿಗೆಯು ಮತ್ತೊಂದು ತಿರುವು ಪಡೆಯುವಂತಾಗಿದೆ.