ತುಮಕೂರು : ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವರ ತಾಕೀತು!!

ತುಮಕೂರು :

      ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ತಿಂಗಳಲ್ಲಿ ಕನಿಷ್ಟ ಒಂದು ಬಾರಿಯಾದರೂ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ತಾಲೂಕು ಪ್ರವಾಸ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

      ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಮೊದಲನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರವಾಸ ಕೈಗೊಳ್ಳುವ ಮಾಹಿತಿಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ಥಳೀಯ ಶಾಸಕರ ಗಮನಕ್ಕೆ ತರಬೇಕು. ತಾಲೂಕು ಪ್ರವಾಸ ಕೈಗೊಳ್ಳದಿದ್ದರೆ ಅಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬೆಲೆ ಏರುತ್ತಿವೆ ಕಾಲ ಮಿತಿಯೊಳಗೆ ಭವನ ನಿರ್ಮಿಸಿ :

      ಸಮಾಜ ಕಲ್ಯಾಣ ಇಲಾಖೆಯಡಿ ನಿರ್ಮಿಸುತ್ತಿರುವ ಭವನಗಳನ್ನು ಕಾಲ ಮಿತಿಯೊಳಗೆ ಪೂರ್ಣಗೊಳಿಸಬೇಕು. ದಿನದಿಂದ ದಿನಕ್ಕೆ ಕಟ್ಟಡ ನಿರ್ಮಾಣಕ್ಕೆ ಬೇಕಾದ ಕಬ್ಬಿಣ, ಸಿಮೆಂಟ್, ಇತರೆ ವಸ್ತುಗಳ ಬೆಲೆಗಳು ಏರಿಕೆ ಆಗುತ್ತಿವೆ. ಕಾಲ ಮಿತಿಯೊಳಗೆ ಪೂರ್ಣಗೊಳಿಸದೆ ಭವನ ನಿರ್ಮಾಣಕ್ಕೆ ನಿಗಧಿ ಮಾಡಲಾಗಿದ್ದ ಅನುದಾನಕ್ಕಿಂತ ಹೆಚ್ಚಿನ ಅನುದಾನ ಖರ್ಚಾದರೆ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ಸಚಿವರು, ಸರ್ಕಾರದಿಂದ ಶ್ರಮವಹಿಸಿ ತರುವ ಅನುದಾನವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಬೇಕು ಎಂದು ನಿರ್ದೇಶಿಸಿದರು.

ಬಡವರು ಹೆಣಗಳನ್ನು ಎಲ್ಲಿ ಹೂಳಬೇಕು? :

      ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿಗಳ ಸಮುದಾಯಕ್ಕೆ ಸ್ಮಶಾನಗಳೇ ಇಲ್ಲ. ಸ್ಮಶಾನ ಜಾಗ ಇದ್ದರೂ ಅದನ್ನು ಗುರುತಿಸಿ ಸ್ಮಶಾನ ನಿರ್ಮಿಸುವ ಕಾರ್ಯಕ್ಕೆ ಮುಂದಾಗಿಲ್ಲ ಎಂದ ಸಚಿವರು ಬಡವರು ಹೆಣಗಳನ್ನು ಎಲ್ಲಿ ಹೂಳಬೇಕು ಎಂದು ಅಧಿಕಾರಿಗಳನ್ನು ಪ್ರಶ್ನಿಸಿ ಸ್ಮಶಾನಗಳ ನಿರ್ಮಾಣಕ್ಕೆ ಹೆಚ್ಚು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಅಂಕಿ-ಅಂಶಗಳಿಗೆ ಸೀಮಿತರಾಗದೆ, ಅಭಿವೃದ್ಧಿಗೆ ಪೂರಕವಾಗಿ :

      ಜಾನುವಾರುಗಳ ಆರೋಗ್ಯಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಸಾಂಕ್ರಾಮಿಕ ರೋಗಗಳು ಬಾಧಿಸದಂತೆ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಜಾನುವಾರುಗಳಿಗೂ ತಪ್ಪದೇ ಲಸಿಕೆ ಹಾಕಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಪಶುಪಾಲನೆ ಇಲಾಖೆ ಅಂಕಿ- ಅಂಶಗಳಿಗೆ ಸೀಮಿತವಾಗದೆ, ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಪಶುಪಾಲನೆ ಮತ್ತು ಪಶುವೈದ್ಯ ಇಲಾಖೆ ಉಪ ನಿರ್ದೇಶಕ ದಿವಾಕರ್ ಅವರಿಗೆ ಸೂಚಿಸಿದರು.

      ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಜಿಲ್ಲೆಯಲ್ಲಿ ಗುರಿ ನಿಗಧಿಯಂತೆ ಬಿತ್ತನೆಯಾಗಲು ಕ್ರಮ ವಹಿಸಬೇಕು. ರೈತರಿಗೆ ಬಿತ್ತನೆ ಬೀಜ ಹಾಗೂ ಗೊಬ್ಬರದ ಕೊರತೆಯಾಗದಂತೆ ಕ್ರಮವಹಿಸುವಂತೆ ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನಾ ಅವರಿಗೆ ನಿರ್ದೇಶಿಸಿದರು.

      ಬೆಸ್ಕಾಂ ಇಲಾಖೆಯಿಂದ ಜಿಲ್ಲೆಯಲ್ಲಿ ಏನೇನು ಕೆಲಸವಾಗಿದೆ ಎಂದು ಪ್ರಶ್ನಿಸಿದ ಸಚಿವರು, ಮುಂದಿನ ಸಭೆಗೆ ಸಂಪೂರ್ಣ ಕ್ರಿಯಾ ಯೋಜನೆ ತರುವಂತೆ ಸೂಚಿಸಿದರು.

      ಈ ವೇಳೆ ಶಾಸಕ ಡಾ.ರಂಗನಾಥ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಬೆಸ್ಕಾಂ ಇಲಾಖೆ ಸಮರ್ಪಕವಾಗಿ ನಿರಂತರ ಜ್ಯೋತಿ ಕಲ್ಪಿಸಬೇಕು. ಯಾವುದೇ ಮನೆಯೂ ವಿದ್ಯುತ್‍ನಿಂದ ವಂಚಿತವಾಗಬಾರದು ಎಂದು ಬೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.
ಮಳೆಗಾಲ ಆರಂಭವಾಗಿದ್ದು, ಪ್ರಾದೇಶಿಕ ಹಾಗೂ ಸಾಮಾಜಿಕ ಅರಣ್ಯ ಇಲಾಖೆಗಳು ನೆಡುತೋಪು ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳಡಿ ಗಿಡಗಳನ್ನು ಬೆಳೆಸುವಂತೆ ನಿರ್ದೇಶಿಸಿದರು.

      ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಲಜೀವನ್ ಮಿಷನ್ ಯೋಜನೆ ಹಾಗೂ ನರೇಗಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಲ್ಲೆಯಲ್ಲಿ ಬಹುತೇಕ ಕೆರೆಗಳು ಭರ್ತಿಯಾಗಿದ್ದು, ಮೀನು ಸಾಕಾಣಿಕೆಗೆ ಹೆಚ್ಚು ಆದ್ಯತೆ ನೀಡಬೇಕು. ಕಡ್ಡಾಯವಾಗಿ ಹರಾಜು ಪ್ರಕ್ರಿಯೆ ಮೂಲಕವೇ ಮೀನು ಸಾಕಾಣಿಕೆಗೆ ಅವಕಾಶ ಮಾಡಿಕೊಡಬೇಕು. ನೇರವಾಗಿ ಸಂಘ ಸಂಸ್ಥೆಗಳಿಗೆ ಮೀನು ಸಾಕಾಣಿಕೆ ಮಾಡಲು ಅವಕಾಶ ಮಾಡಿಕೊಡಬಾರದು ಎಂದು ಸೂಚಿಸಿದರು.

      ಸಭೆಯಲ್ಲಿ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಮಸಾಲೆ ಜಯರಾಮ್, ಬಿ.ಸಿ.ನಾಗೇಶ್, ಡಾ.ರಂಗನಾಥ್, ಡಾ. ರಾಜೇಶ್ ಗೌಡ, ವೀರಭದ್ರಯ್ಯ, ಚಿದಾನಂದಗೌಡ, ಎಂ.ವಿ., ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಶಹಾಪುರವಾಡ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

‘ರೈತ ಸೇತು’ ಆ್ಯಪ್ ಬಿಡುಗಡೆ :

      ಸಭೆಯ ಆರಂಭದಲ್ಲಿ ತೋಟಗಾರಿಕಾ ಇಲಾಖೆಯಿಂದ ರೈತರು ಬೆಳೆದ ಬೆಳೆಗೆ ಆನ್ ಲೈನ್ ಮೂಲಕ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಹೊರತಂದಿರುವ ನೂತನ ‘ರೈತ ಸೇತು’ ಆ್ಯಪ್ ಅನ್ನು ಬಿಡುಗಡೆ ಮಾಡಲಾಯಿತು.

ಕೂತಲ್ಲಿಂದ ಎದ್ರೆ ಏನಾಗುತ್ತೆ ಗೊತ್ತಾ ಎಂದು ಗದರಿದ ಸಚಿವರು :

       ಸಭೆಯಲ್ಲಿ ಸಚಿವರ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸದೆ ತಡಬಡಾಯಿಸಿದ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕರ ನಡವಳಿಕೆಗೆ ಸಿಟ್ಟಾದ ಸಚಿವರು ಕೂತಲ್ಲಿಂದ ಎದ್ರೆ ಏನಾಗುತ್ತೆ ಗೊತ್ತಾ ಎಂದು ಗದರಿ ಅಧಿಕಾರಿಯನ್ನು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಿಲ್ಲಿಸುವ ಮೂಲಕ ಶಿಕ್ಷಿಸಿದರು. ಇಲಾಖೆಯಿಂದ ಕೈಗೊಂಡಿರುವ ಮೆಟ್ರಿಕ್ ಪೂರ್ವ, ನಂತರದ ವಿದ್ಯಾರ್ಥಿ ನಿಲಯಗಳ ಕಟ್ಟಡ ಹಾಗೂ ಭವನ ನಿರ್ಮಾಣಗಳ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸೂಕ್ತ ಕ್ರಮ ವಹಿಸಬೇಕು.
ಹಾಸ್ಟೆಲ್ ಅಥವಾ ಭವನ ನಿರ್ಮಾಣಕ್ಕೆ ಜಾಗದ ಸಮಸ್ಯೆ ಎದುರಾದಲ್ಲಿ ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಿಕೊಂಡು ನಿರ್ಮಾಣ ಕಾಮಗಾರಿ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು. ಸಮಾಜ ಕಲ್ಯಾಣ ಇಲಾಖೆಯಿಂದ ಸಮರ್ಪಕವಾಗಿ ಕಾರ್ಯ ನಿರ್ವಹಿಸುವ ಮೂಲಕ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದವರ ಅಭಿವೃದ್ಧಿಗೆ ಕೆಲಸ ಮಾಡಬೇಕು ಎಂದು ತಿಳಿಸಿದರು.

ಸಿಎಂ ಬದಲಾವಣೆ ವಿಚಾರ, ಬಾಯ್ಬಿಡದ ಜೆಸಿಎಂ :

      ಮಧ್ಯಾಹ್ನದ ಊಟದ ವಿರಾಮದ ನಂತರ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಬಿಡುವಾಗಿರುವುದನ್ನು ಗಮನಿಸಿದ ಸುದ್ದಿಗಾರರು ಇದೇ ಸುಸಮಯವೆಂದು ಅವರನ್ನು ಮುತ್ತಿ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸಿಎಂ ಬದಲಾವಣೆ ವಿಚಾರವಾಗಿ ಪ್ರಶ್ನೆಗಳ ಸುರಿಮಳೆಯನ್ನೆ ಸುರಿಸಿದರು. ಆದರೆ ಸಚಿವರು ಮಾತ್ರ ಈ ವಿಚಾರವಾಗಿ ಸ್ಥಿತ ಪ್ರಜ್ಞರಾಗಿ ಅತ್ಯಂತ ಸಮಾಧಾನದಿಂದ ಈ ವಿಚಾರವಾಗಿ ಮಾತನಾಡುವುದಿಲ್ಲ ಎಂದರು.

ಯಡಿಯೂರಪ್ಪನವರು 5 ವರ್ಷ ಅಧಿಕಾರ ಅವಧಿ ಮುಗಿಸುವ ಮುನ್ನ ಅವರನ್ನು ಇಳಿಸುವುದರಿಂದ ಬಿಜೆಪಿ ಪಕ್ಷಕ್ಕೆ ಹಾನಿಯಾಗುವುದಿಲ್ಲವೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಈ ಹಿಂದೆ ಹೆಗಡೆ, ಪಟೇಲ್, ವೀರೇಂದ್ರ ಪಟೇಲ್, ಬೊಮ್ಮಾಯಿ, ದೇವೆಗೌಡ, ಬಂಗಾರಪ್ಪ, ಮೊಯ್ಲಿ, ಗುಂಡೂರಾವ್, ಧರ್ಮಸಿಂಗ್, ಕುಮಾರಸ್ವಾಮಿ ಯಾರು ತಾನೇ ಸಂಪೂರ್ಣ 5 ವರ್ಷ ಅಧಿಕಾರ ಪೂರ್ಣಗೊಳಿಸಿದ್ದಾರೆ. ರಾಜಕೀಯದಲ್ಲಿ ಈ ರೀತಿಯ ಬೆಳವಣಿಗೆಗಳು ಹೊಸವೇನಲ್ಲ ಹಾಗಾಗಿ ಪಕ್ಷಕ್ಕೆ ಹಾನಿಯಾಗುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap