ಮಸೂದೆ ತಿರಸ್ಕಾರಕ್ಕೆ ರಾಜ್ಯಾಲರಿಗೆ ಮನವಿ : ಡಿಕೆಶಿ

ಬೆಂಗಳೂರು

    ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಸದಾಗಿ ಜಾರಿಗೆ ತರುತ್ತಿರುವ ಜನ ವಿರೋಧಿ ಭೂ ಸುಧಾರಣೆ, ಎಪಿಎಂಸಿ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯನ್ನು ತಿರಸ್ಕರಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

    ನೂತನ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವ ವಿಚಾರವಾಗಿ ಸೋಮವಾರ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.’ನಾವು ರಾಜ್ಯಪಾಲರಿಗೆ ಎರಡು ಮನವಿ ಸಲ್ಲಿಸಿದ್ದೇವೆ. ಭೂ ಸುಧಾರಣಾ, ಎಪಿಎಂಸಿ, ಕೈಗಾರಿಕಾ ವಿವಾದ ಕಾಯ್ದೆ ಸಂಬಂಧ ಸರಕಾರ ತೆಗೆದುಕೊಂಡಿರುವ ತೀರ್ಮಾನವನ್ನು ರಾಜ್ಯಪಾಲರ ಮುಂದೆ ಪ್ರಶ್ನಿಸಲಾಗಿದೆ. ಬಂಡವಾಳಶಾಹಿಗಳಿಗೆ ಸಹಾಯ ಮಾಡಲು ಸರ್ಕಾರ ಈ ಕ್ರಮಗಳನ್ನು ತೆಗೆದುಕೊಂಡಿದೆ. ಇಂತಹ ರೈತ ವಿರೋಧಿ ಕಾಯ್ದೆ ಇಲ್ಲದೆ ರಾಜ್ಯವನ್ಮು ಅಭಿವೃದ್ಧಿ ಮಾಡಲು ಸಾಧ್ಯವಿಲ್ಲವೇ? ಕೇಂದ್ರ ಸರ್ಕಾರ ನಮ್ಮ ಮೇಲೆ ಒತ್ತಡ ಹೇರಲು ಮೂರು ಕಾನೂನು ತಂದಿದೆ ಎಂದು ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿ ಆಗಿದ್ದಾಗ ಈ ರೀತಿ ಕಾನೂನು ಮಾಡಲು ಸಾಧ್ಯವಿಲ್ಲ ಎಂದು ಪತ್ರ ಬರೆದಿದ್ದರು. ಆದರೆ ಈಗ ಅವರೇ ತಮ್ಮ ಮಾತು ಮುರಿದು, ಈ ರೈತ ವಿರೋಧಿ ಕಾನೂನು ಮಾಡಲು ಮುಂದಾಗಿದ್ದಾರೆ. ಮೋದಿ ಅವರ ಕುರ್ಚಿ ಬದಲಾದಂತೆ ಅವರ ತೀರ್ಮಾನ ಕೂಡ ಬದಲಾಗಿದೆ ಎಂದು ವ್ಯಂಗ್ಯವಾಡಿದರು.

    ಕಾಂಗ್ರೆಸ್ ರೈತರ ಪರವಾಗಿ ನಿಂತು ಭೂ ಸುಧಾರಣೆ, ಎಪಿಎಂಸಿ, ಕೈಗಾರಿಕೆಗಳ ವಿವಾದ, ಕಾರ್ಮಿಕ ಕಾಯ್ದೆಗಳ ವಿರುದ್ಧ ಹೋರಾಟಕ್ಕೆ ಇಳಿದಿದೆ. ಮೊದಲ ಬಾರಿಗೆ ರಾಜ್ಯ ರಾಜಕೀಯ ಇತಿಹಾಸದಲ್ಲಿ ಒಂದು ಮಸೂದೆಯನ್ನು ವಿಧಾನ ಪರಿಷತ್ ನಲ್ಲಿ ತಿರಸ್ಕರಿಸಲಾಗಿದೆ. ಇವತ್ತು ರೈತ, ಕಾರ್ಮಿಕ ಹಾಗೂ ಕನ್ನಡಪರ ಸಂಘಟನೆಗಳು ಬೀದಿಗಿಳಿದು ಬಂದ್ ಮಾಡುತ್ತಿವೆ. ಸರಕಾರ ಬಲವಂತ ಕಾನೂನು ಕ್ರಮದ ಬೆದರಿಕೆ ಹಾಕುತ್ತಿದೆ. ಹೀಗಾಗಿ ಜನ ವಿರೋಧಿ ಕಾಯ್ದೆಗಳಿಗೆ ರಾಜ್ಯಪಾಲರು ಸಹಿ ಹಾಕಬಾರದು ಎಂದು ಮನವಿ ಸಲ್ಲಿಸಿದ್ದೇವೆ. ರಾಷ್ಟ್ರಪತಿಗಳು ಕೂಡ ಇವುಗಳನ್ನು ವಜಾ ಮಾಡಬೇಕೆಂದು ರಾಜ್ಯಪಾಲರ ಮೂಲಕ ಕೋರಿದ್ದೇವೆ ಎಂದರು.

   ಪ್ರಾಣ ಬೇಕಾದರೆ ಬಿಡುತ್ತೇವೆ, ಸ್ವಾಭಿಮಾನ ಬಿಡಲ್ಲ: ಇದಕ್ಕೂ ಮುನ್ನ ಕಾಂಗ್ರೆಸ್ ಭವನದ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್ ಅವರು, ಸಂಸದ ತೇಜಸ್ವಿ ಸೂರ್ಯ ಅವರು, ‘ಬೆಂಗಳೂರು ಭಯೋತ್ಪಾದಕರ ತಾಣವಾಗಿದೆ’ ಎಂದು ನಿನ್ನೆ ನೀಡಿರುವ ಹೇಳಿಕೆಯನ್ನು ಕಟುವಾಗಿ ಟೀಕಿಸಿದರು.

   ‘ಬೆಂಗಳೂರು ಭಯೋತ್ಪಾದಕರ ತಾಣವಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಎನ್ ಐಎ ಕಚೇರಿ ಆರಂಭಿಸಬೇಕು ಎಂದು ಗೃಹ ಸಚಿವರಿಗೆ ಮನವಿ ಮಾಡಿದ್ದೇನೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಇದು ಬೆಂಗಳೂರು ಹಾಗೂ ರಾಜ್ಯಕ್ಕೆ ಮಸಿ ಬಳಿಯುವ ಪ್ರಯತ್ನವಾಗಿದೆ ಎಂದು ಹರಿಹಾಯ್ದರು.

   ಈತ ಬೆಂಗಳೂರನ್ನು ಕಟ್ಟಿಲ್ಲ. ನಮ್ಮ ನಾಯಕರುಗಳ ಪರಿಶ್ರಮದಿಂದ ಬೆಂಗಳೂರು ವಿಶ್ವಮಟ್ಟದ ಶಿಕ್ಷಣ, ಮಾಹಿತಿ ತಂತ್ರಜ್ಞಾನ ತಾಣವಾಗಿದೆ. ಇಲ್ಲಿಂದ ವಿಶ್ವಕ್ಕೆ ಇಂಜಿನಿಯರ್ ಗಳು, ವೈದ್ಯರು ರವಾನೆಯಾಗಿದ್ದಾರೆಯೇ ಹೊರತು ಭಯೋತ್ಪಾದಕರಲ್ಲ. ಶೇ. 34ರಷ್ಟು ಐಟಿ ರಫ್ತು ಬೆಂಗಳೂರಿನಿಂದ ಆಗುತ್ತಿದೆ. ಅಟಲ್ ಬಿಹಾರಿ ವಾಜಪೇಯಿ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭೂಮಿ ಪೂಜೆಗೆ ಬಂದ ಸಂದರ್ಭದಲ್ಲಿ, ‘ಇಷ್ಟು ದಿನಗಳ ಕಾಲ ವಿಶ್ವ ನಾಯಕರು ಮೊದಲು ದೆಹಲಿಗೆ ಬಂದು ನಂತರ ಬೇರೆ ನಗರಗಳಿಗೆ ಹೋಗುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಮೊದಲು ಬೆಂಗಳೂರಿಗೆ ಬಂದು, ನಂತರ ದೆಹಲಿಗೆ ಹೋಗುತ್ತಿದ್ದಾರೆ’ ಎಂದು ಹೇಳಿದ್ದರು.

    ಇಡೀ ವಿಶ್ವ ಬೆಂಗಳೂರಿನ ಕಡೆ ನೋಡುತ್ತಿರುವಾಗ ತೇಜಸ್ವಿಸೂರ್ಯ ಇಂಥ ಹೇಳಿಕೆ ಮೂಲಕ ರಾಜ್ಯ ಹಾಗೂ ಬೆಂಗಳೂರಿನ ಮಾನ ಹರಾಜು ಹಾಕಿದ್ದಾರೆ. ಈ ಹೇಳಿಕೆ ವಿಚಾರವಾಗಿ ರಾಜ್ಯದ ಮುಖ್ಯಮಂತ್ರಿಗಳು, ರಾಜ್ಯದಿಂದ ಆಯ್ಕೆಯಾಗಿ ಕೇಂದ್ರದಲ್ಲಿ ಸಚಿವರಾಗಿರುವವರು ಪ್ರತಿಕ್ರಿಯೆ ನೀಡಬೇಕು. ಇದು ರಾಜ್ಯಕ್ಕೆ, ಕನ್ನಡಿಗರಿಗೆ ಮಾಡಿರುವ ಅಪಮಾನ. ಈ ಹೇಳಿಕೆಯಿಂದ ಕನ್ನಡಿಗರ ಭಾವನೆಗೆ ಧಕ್ಕೆಯಾಗಿದೆ. ಬೆಂಗಳೂರನ್ನು ಹಾಗೂ ರಾಜ್ಯವನ್ನು ಭಯೋತ್ಪಾದಕರ ತಾಣ ಎಂದು ಕರೆಯಲು ಬಿಡುವುದಿಲ್ಲ. ಈ ವಿಚಾರವಾಗಿ ತೇಜಸ್ವಿ ಸೂರ್ಯ ರಾಜ್ಯದ ಜನರ, ಅದರಲ್ಲೂ ವಿಶೇಷವಾಗಿ ಬೆಂಗಳೂರಿಗರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

    ಈ ಹೇಳಿಕೆಯ ನಂತರ ರಾಜ್ಯದಲ್ಲಿ ಹಾಗೂ ಬೆಂಗಳೂರಿನಲ್ಲಿ ಬಂಡವಾಳ ಹೂಡಲು ಯಾರು ಮುಂದೆ ಬರುತ್ತಾರೆ? ನಾವು ಅಂತಾರಾಷ್ಟ್ರೀಯ ಕಂಪನಿಗಳನ್ನು ಕರೆಸಿ ಇಲ್ಲಿ ಬಂಡವಾಳ ಹೂಡಿಕೆ ಮಾಡಿದ್ದು, ದೇಶದ ಜನರಿಗೆ ಉದ್ಯೋಗ ಕಲ್ಪಿಸಿದ್ದೇವೆ. ಜಗದೀಶ್ ಶೆಟ್ಟರ್ ಅವರೇ, ನೀವು ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಮಾಡಲು ತೀರ್ಮಾನಿಸಿದ್ದೀರಿ. ರಾಜ್ಯದ ಬಗ್ಗೆ ಈ ರೀತಿ ಹೇಳಿಕೆ ಕೊಟ್ಟರೆ ಯಾರು ಬಂದು ಬಂಡವಾಳ ಹೂಡಿಕೆ ಮಾಡುತ್ತಾರೆ?. ರಾಜ್ಯದಲ್ಲಿ ಕೋಮು ಗಲಭೆಗಳು ಇರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕೋಮು ಗಲಭೆಗಳು ನಡೆಯುತ್ತವೆ.

      ಈ ಸಮಯದಲ್ಲಿ ರಾಜ್ಯದ ಘನತೆ, ಮರ್ಯಾದೆಯನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮ ರೂಪಿಸಲಾಗುವುದು. ಇದಕ್ಕೆ ನೀವೆಲ್ಲರೂ ಸಜ್ಜಾಗಬೇಕು. ನಾವು ಪ್ರಾಣ ಬೇಕಾದರೆ ಬಿಡುತ್ತೇವೆ, ಸ್ವಾಭಿಮಾನ ಮಾತ್ರ ಬಿಟ್ಟುಕೊಡುವುದಿಲ್ಲ. ಹುಟ್ಟಿದ ಮೇಲೆ ಒಂದಲ್ಲಾ ಒಂದು ದಿನ ಸಾಯಲೇಬೇಕು. ಹುಟ್ಟು ಉಚಿತ, ಸಾವು ಖಚಿತ. ಈ ಹುಟ್ಟು ಸಾವಿನ ನಡುವೆ ನಮ್ಮ ರಾಜ್ಯದ ರಕ್ಷಣೆ ನಮ್ಮ ಕರ್ತವ್ಯ ಎಂದು ಡಿಕೆಶಿ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap