ದಾವಣಗೆರೆ:
ಭಾರತ ದೇಶದಲ್ಲಿರುವ ಬಹುಸಂಖ್ಯಾತ ದುಡಿಯುವ ವರ್ಗದ ಅಸಂಘಟಿದ ವಲಯದ ಕಾರ್ಮಿಕರು ಶೇ.60 ದಿನ ನಿತ್ಯದ ತಮ್ಮ ಬದುಕಿಗೆ ಭದ್ರತೆ ಇಲ್ಲದೇ ಜೀವಿಸುತ್ತಿರುವುದು ವಿಪರ್ಯಾಸ ಎಂದು ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಜಿ.ಉಮೇಶ್ ಕಳವಳ ವ್ಯಕ್ತಪಡಿಸಿದರು.
ಚನ್ನಗಿರಿಯ ಸಂತೆ ಮೈದಾನದ ಸಿಡಿಪಿಓ ಕಚೇರಿ ಆವರಣದಲ್ಲಿ ಬುಧವಾರ ನಡೆದ ಕಾರ್ಮಿಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಭಾರತ ದೇಶದಲ್ಲಿ 4,600 ಜಾತಿಗಳು ಇದ್ದರೂ ಸಹ ಆಯಾ ಜಾತಿಗಳ ಧರ್ಮದ ಸಂಕೇತದ ಅನುಗುಣವಾಗಿ ಸಹಬಾಳ್ವೆಯಿಂದ ಸರ್ವರೂ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮತಾಂಧರು ಜಾತಿಯ ವಿಷ ಬೀಜಗಳನ್ನು ಬಿತ್ತುತ್ತಾ, ಕೆಳ ಜಾತಿಗಳ ಮಧ್ಯೆ ಜಗಳ ಹಚ್ಚಿದ ಅವರ ಹೆಣದ ರಾಶಿಯ ಮೇಲೆ ತಮ್ಮ ತಮ್ಮ ಪಕ್ಷದ ಧ್ವಜ ಹಿಡಿದು ರಾಜಕೀಯ ದೊಂಬರಾಟ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಈ ದೇಶಕ್ಕೆ ಸಂವಿಧಾನ ತಂದು ಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್‍ರವರ ಸಂವಿಧಾನದ ಪ್ರತಿಗಳನ್ನು ದೇಶದ ಸಂಸತ್ತಿನ ಸಮೀಪದಲ್ಲೇ ಸುಟ್ಟು ಹಾಕಿದರೂ ಸಹ ಕಣ್ಣಿಗೆ ಕಾಣದಂತೆ ಕುಳಿತಿರುವ ಸರ್ಕಾರ ನಾವು ಅಧಿಕಾರಕ್ಕೆ ಬಂದರೆ ಕಾನೂನನ್ನು ಬದಲಾಯಿಸುತ್ತೇವೆ ಎನ್ನುತ್ತಾರೆ. ಮೊತ್ತೊಂದೆಡೆ ಅದೇ ಕಾನೂನಿನ ಅಡಿಯಲ್ಲಿ ಚುನಾಯಿತ ಪ್ರತಿನಿಧಿಗಳಾಗಿ ಆಯ್ಕೆಯಾಗಿ ದೇಶದ ಕಾವಲುಗಾರ ನಾವು ಎಂದು ಫೋಜು ಕೊಡುತ್ತಿದ್ದಾರೆ.
ಈ ದೇಶದ ವಿವಿಧ ಅಂಗಗಳಿಂದ 5555 ಚುನಾಯಿತ ಪ್ರತಿನಿಧಿಗಳಿದ್ದು, ನಿಮ್ಮ ಮನೆಯ ಸದಸ್ಯರನ್ನು ಈ ದೇಶಕ್ಕೆ ಕಾವಲುಗಾರರನ್ನಾಗಿ ನೇಮಿಸುವ ಮೂಲಕ ನಿಜವಾದ ಕಾವಲುಗಾರರಾಗಿ ಎಂದು ಸವಾಲು ಹಾಕಿದರು.
ದುಡಿಯುವ ವರ್ಗದ ಶ್ರಮಜೀವಿಗಳಾದ ತಾವು ಯಾವುದೇ ಕ್ಷುಲ್ಲಕ ಕಾರಣಗಳಿಗೆ ಕಿವಿಗೊಡದೆ ಜಾತ್ಯಾತಿತವಾಗಿ ಜೊತೆಗೂಡಿರುವ ಬೆವರು ಸುರಿಸುವ ನಾವುಗಳು ದಿನನಿತ್ಯದ ಬದುಕನ್ನು ಹಸನು ಮಾಡಿಕೊಳ್ಳುವ ಸಲುವಾಗಿ 1880-86ರ ದಶಕದಲ್ಲಿ ದೇಶಾದ್ಯಂತ ದೊಡ್ಡ ಮಟ್ಟದ ನಡೆದ ಚಳುವಳಿಗಳ ಸಂದರ್ಭದಲ್ಲಿ ಅಮೇರಿಕಾದ ಚಿಕಾಗೋ ನಗರದಲ್ಲಿ ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದ ಲಕ್ಷಾಂತರ ಕಾರ್ಮಿಕರ ಮೇಲೆ ಮಾಲೀಕರ ಗುಂಡಾಗಳು ಮತ್ತು ಪೊಲೀಸರು ಮಾರಣಾಂತಿಕ ಹಲ್ಲೆ ನಡೆಸಿದ ಸಂದರ್ಭದಲ್ಲಿ ಸಾವಿರಾರು ಜನರು ಮರಣ ಹೊಂದಿ, ರಕ್ತದ ಮಡುವಿನಲ್ಲಿ ಬಿದ್ದಂತ ಕಾರ್ಮಿಕರು ತಾವು ತೊಟ್ಟ ಅಂಗಿಯನ್ನು ರಕ್ತದಲ್ಲಿ ಅದ್ದಿ, ಇದು ಕಾರ್ಮಿಕರ ಕೆಂಬಾವುಟ ಚಿರಾಯುವಾಗಿರಲಿ ಎಂದು ಘೋಷಣೆ ಕೂಗುವ ಮೂಲಕ ಹುತಾತ್ಮರಾದರು ಎಂದು ಸ್ಮರಿಸಿದರು.
ಅಂತಹ ಮಹನೀಯರು ಕಟ್ಟಿದಂತ ಕೆಂಬಾವುಟ ಶ್ರಮಜೀವಿಗಳ ದನಿಯಾಗಿ ಕೆಲಸ ಮಾಡುತ್ತಾ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ವಿವಿಧ ಯೋಜನೆ ಅಡಿಯಲ್ಲಿ ದಾವಣಗೆರೆ ಜಿಲ್ಲೆಯಾದ್ಯಂತ ಸಂಬಂಧಿಸಿದ ಫಲಾನುಭವಿಗಳಿಗೆ ವಿದ್ಯಾರ್ಥಿ ವೇತನ, ಮದುವೆ ವೇತನ, ಹೆರಿಗೆ ಸಹಾಯಧನ, ಆಸ್ಪತ್ರೆ ವೆಚ್ಚ, ಮೃತ ಹೊಂದಿದ ಕುಟುಂಬಗಳಿಗೆ ಪರಿಹಾರ ಮಾತ್ರವಲ್ಲದೇ 60 ವರ್ಷ ವಯಸ್ಸಾದ ಕಟ್ಟಡ ಕಾರ್ಮಿಕರಿಗೆ ಸೇರಿ ಸುಮಾರು 21 ಕೋಟಿ ರೂಗಳನ್ನು ನಮ್ಮ ಎಐಟಿಯುಸಿ ಸಂಘಟನೆ ಅಡಿಯಲ್ಲಿ ವಿತರಣೆ ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಚನ್ನಗಿರಿ ತಾಲೂಕಿನಾದ್ಯಂತ ಇರುವ ಎಲ್ಲಾ ಶ್ರಮ ಜೀವಿ ಕಟ್ಟಡ ಕಾರ್ಮಿಕರು ನಮ್ಮ ಸಂಘಟನೆಯ ಸದಸ್ಯತ್ವ ಪಡೆದು, ಕಾರ್ಮಿಕ ಇಲಾಖೆಯೊಂದಿಗೆ ನೊಂದಣಿಯಾಗಿ ಕಲ್ಯಾಣ ಮಂಡಳಿಯ ಸೌಲಭ್ಯ ಪಡೆಯಿರಿ, ದುಶ್ಚಟಗಳಿಂದ ದೂರವಾಗಿ, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ.
ನಿಮ್ಮೊಂದಿಗೆ ನಿಮ್ಮ ಸಂಘಟನೆ ಸದಾ ಕಾಲ ಕೈ ಜೋಡಿಸಿ ಕೆಲಸ ಮಾಡುತ್ತದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘಟನೆಯ ತಾಲೂಕು ಸಂಘದ ಅಧ್ಯಕ್ಷ ಸೈಯದ್ ಗೌಸ್‍ಪೀರ್ ವಹಿಸಿದ್ದರು. ವಕೀಲರ ಸಂಘದ ಕಾರ್ಯದರ್ಶಿ ಹೆಚ್.ಮೋಹನ್, ಉಪಾಧ್ಯಕ್ಷ ಬಿ.ಅರ್.ಮಹೇಂದ್ರಮೂರ್ತಿ, ಚನ್ನಗಿರಿ ವೃತ್ತ ನಿರೀಕ್ಷಕ ಆರ್.ಆರ್. ಪಾಟೀಲ್ , ಡಾ.ಆರ್.ಎಂ.ಗಿರೀಶ್, ಪುರಸಭೆ ಸದಸ್ಯ ಜಿ.ನಿಂಗಪ್ಪ, ತಾಲೂಕು ಅಂಗನವಾಡಿ ಸಂಘದ ಉಪಾಧ್ಯಕ್ಷೆ ಪುಷ್ಪಾವತಿ, ಭಾರತೀ ಪ್ರಸಾದ್, ಹನುಮಂತರಾವ್, ಶಿವಾಜಿರಾವ್, ಜೈನ್‍ವುಲ್ಲಾ, ಸಿ.ಹೆಚ್.ಶ್ರೀನಿವಾಸ್, ಮನೋಹರ, ಮಹಮ್ಮದ್ ರಫೀಕ್ ಇತರರು ಉಪಸ್ಥಿತರಿದ್ದರು.