ಅಭಿವೃದ್ದಿ ಇಲ್ಲದ ಆಧ್ಯಾತ್ಮ ಆರೊಗ್ಯಕರವಲ್ಲ;ಶಿಮೂಶ

ಚಿತ್ರದುರ್ಗ

   ಅಭಿವೃದ್ಧಿ ಇಲ್ಲದ ಆಧ್ಯಾತ್ಮ, ಆಧ್ಯಾತ್ಮವಿಲ್ಲದ ಅಭಿವೃದ್ಧಿ ಎರಡೂ ಆರೋಗ್ಯಕರವಲ್ಲ, ಅನಾರೋಗ್ಯಕರ ಎಂದು ಚಿತ್ರದುರ್ಗ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

     ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್‍ನ ಶ್ರೀಕೃಷ್ಣ ಪರಿಷನ್ಮಂದಿರದಲ್ಲಿ ಬಸವಕೇಂದ್ರ , ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಿದ್ದ ಡಾ. ಶಿವಮೂರ್ತಿ ಮುರುಘಾ ಶರಣರ ಪುಸ್ತಕೋತ್ಸವ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು

     ಬುದ್ಧ, ಅಂಬೇಡ್ಕರ್, ಬಸವಣ್ಣ ಅವರ ಸಂದೇಶಗಳು ಬಹಳ ಪ್ರಭಾವ ಬೀರಿದ್ದರ ಪರಿಣಾಮ 20ನೇ ವಯಸ್ಸಿನಲ್ಲಿ 1980ರಿಂದಲೇ ದಿನಚರಿ ಬರೆಯಲು ಆರಂಭಿಸಿದೆ. ಆಗ ನನಗೆ ಡೈರಿ ಖರೀದಿಸಿ ಬರೆಯಲು ಹಣವಿರಲಿಲ್ಲ. ಈ ಸಂದರ್ಭದಲ್ಲಿ ಪುಟ್ಟ ಪಾಕೆಟ್ ಡೈರಿ ಬಳಸಿದೆ. ಅಂದಿನಿಂದ ಈವರೆಗೂ ನನ್ನ ಅನುಭವಗಳನ್ನು ದಿನಚರಿಯಲ್ಲಿ ದಾಖಲಿಸಿದ್ದೇನೆ. ಆ ಕಾರಣದಿಂದಲೇ ಇಂದು ಏಕಕಾಲಕ್ಕೆ 20 ಪುಸ್ತಕಗಳನ್ನು ಲೋಕಾರ್ಪಣೆ ಮಾಡಲು ಸಾಧ್ಯವಾಗಿದೆ. ನನ್ನೆಲ್ಲ ಅನುಭವ ಮತ್ತು ಪ್ರಯೋಗಗಳು ಈ ಪುಸ್ತಕಗಳಲ್ಲಿ ದಾಖಲಾಗಿವೆ ಎಂದು ಶರಣರು ಹೇಳಿದರು.

     ಆಧ್ಯಾತ್ಮದ ಹೆಸರಿನಲ್ಲಿ ಕೇವಲ ಭಜನೆ ಮಾಡಿದರೆ ಸಾಲದು. ಬದಲಾಗಿ ಆರೋಗ್ಯಕರ ಅಭಿವೃದ್ಧಿ ಕಾರ್ಯಗಳನ್ನು ಮಠಗಳು ಕೈಗೆತ್ತಿಕೊಳ್ಳಬೇಕು. ಮಠಗಳು ಇರುವುದು ಜನರಿಗಾಗಿ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕಾಯಕಗಳನ್ನು ಕೈಗೆತ್ತಿಕೊಳ್ಳಬೇಕು. ಸ್ವಾಮೀಜಿಗಳು ಅಂತರ್ಮುಖಿಯಾಗುವುದರ ಜೊತೆಗೆ ಪ್ರಯೋಗಶೀಲರಾಗಿಯೂ ಕಾರ್ಯಪ್ರವೃತ್ತ ರಾಗಬೇಕು. ಆಗ ಮಾತ್ರ ಸಮಾಜ ಅಭಿವೃದ್ಧಿಯಾಗುತ್ತದೆ ಎಂದರು.

     ಕೃತಿಗಳನ್ನು ಬಿಡುಗಡೆ ಮಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರೂ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೂ ಆದ ಡಾ. ಚಂದ್ರಶೇಖರ ಕಂಬಾರ ಮಾತನಾಡಿ, ರಾಜ್ಯದಲ್ಲಿ ಅರ್ಧದಷ್ಟು ವಿದ್ಯಾರ್ಥಿಗಳಿಗೆ ಮಠಗಳೇ ಶಿಕ್ಷಣ ಒದಗಿಸುತ್ತಿವೆ. ಮಠಾಧೀಶರು ಈ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಆದರೆ ಇಂಗ್ಲಿಷ್ ಮಾಧ್ಯಮ ಶಿಕ್ಷಣದ ವ್ಯಾಮೋಹದಿಂದ ಸಾಂಪ್ರದಾಯಿಕ ಶಿಕ್ಷಣದ ಬಗ್ಗೆ ಕೀಳರಿಮೆ ಮೂಡುತ್ತಿದೆ ಎಂದರು.

       ಜನರು ಸಂಸ್ಕೃತದಲ್ಲಿಯೇ ಪ್ರಾರ್ಥನೆ ಮಾಡಬೇಕೆಂದಿಲ್ಲ. ನಮ್ಮ ಪ್ರಾದೇಶಿಕ ಭಾಷೆಯಲ್ಲಿಯೇ ಪ್ರಾರ್ಥನೆ ಮಾಡಬಹುದು. ಕರ್ನಾಟಕದಲ್ಲಿ ಭಕ್ತಿ ಪಂಥದ ಕ್ರಾಂತಿ ವಿಶಿಷ್ಟವಾಗಿ ನಡೆದಿದ್ದು ಮಠಗಳಿಂದಲೇ ಎಂದರು.

      ನಮ್ಮದು ಗೊಡ್ಡು ಪುರಾಣ ಎಂಬ ಮನೋಭಾವ ಮೂಡಲು ಪ್ರಮುಖ ಕಾರಣ ಇಂಗ್ಲಿಷ್ ಕಲಿಕೆ. ನಮ್ಮತನವನ್ನು ಬಿಟ್ಟು ಅನ್ಯರ ದಾಸರಾಗುತ್ತಿದ್ದೇವೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಮತ್ತೆ ವಿದೇಶಿಗರ ಗುಲಾಮರಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ. ಸ.ಚಿ. ರಮೇಶ್ ಮಾತನಾಡುತ್ತ, ಶರಣರ ಬರಹಗಳು ಪ್ರಸ್ತುತ ಮತ್ತು ವಿಶ್ವಾಸಾರ್ಹ ವಾಗಿವೆ. ಬಸವಣ್ಣನವರ ಚಿಂತನೆಯ ಮುಂದುವರೆದ ಭಾಗವಾಗಿದ್ದು ಧಾರ್ಮಿಕ ಜ್ಞಾನ ಜನರಿಗೆ ತಿಳಿಸುವ ಕಾಯಕವಾಗಿದೆ ಎಂದು ಅಭಿಪ್ರಾಯಪಟ್ಟರು.

    ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಬೈರಮಂಗಲ ರಾಮೇಗೌಡ, ರಾಜಕಾರಣ ಮತ್ತು ಧರ್ಮ ದಾರಿ ತಪ್ಪಿದ್ದು ಅವುಗಳನ್ನು ಸರಿದಾರಿಗೆ ತರುವ ಶಕ್ತಿ ಸಾಹಿತ್ಯಕ್ಕಿದೆ. ಅಂತಹ ಸಾಹಿತ್ಯದ ಪರಿಚಯವನ್ನು ಡಾ. ಶಿವಮೂರ್ತಿ ಮುರುಘಾ ಶರಣರು ಈ 20 ಪುಸ್ತಕಗಳಲ್ಲಿ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.

     ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಂ.ತಿಮ್ಮಯ್ಯ ಅಧ್ಯಕ್ಷರು ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ಬೆಂಗಳೂರು ಇವರು ವೇದಿಕೆಯಲ್ಲಿದ್ದರು. ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ್, ಅಂಕಣಕಾರ ಪದ್ಮರಾಜ ದಂಡಾವತಿ, ಡಾ. ಮಹೇಶ್ ಜೋಷಿ, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾ ನಿರ್ದೇಶಕರಾದ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ, ಡಾ. ಈ. ಚಿತ್ರಶೇಖರ್, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಮಲ್ಲಿಕಾರ್ಜುನ ಮತ್ತಿರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap