ಬೆಂಗಳೂರು
ಸಹಕಾರ ಇಲಾಖೆಯ ಅಪರ ನಿಬಂಧಕ ಸತೀಶ್ ಬಿಬಿಎಂಪಿಯ ಸಹಾಯಕ ಕಂದಾಯ ಅಧಿಕಾರಿ ಮಂಜುನಾಥ್ ಸೇರಿ ನಾಲ್ವರು ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿರುವ ಭ್ರಷ್ಟಾಚಾರ ನಿಗ್ರಹ ದಳದ (ಎಸಿಪಿ) ಅಧಿಕಾರಿಗಳು ನಗದು, ಚಿನ್ನಾಭರಣ ವಲ್ಲದೇ ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ-ಪಾಸ್ತಿಯನ್ನು ಪತ್ತೆ ಹಚ್ಚಿದ್ದಾರೆ.
ಸಹಕಾರ ಇಲಾಖೆಯ ಸಹಕಾರ ಸಂಘಗಳ ಅಪರ ನಿಬಂಧಕ ಸತೀಶ್, ಬಿಬಿಎಂಪಿಯ ಜೆಬಿ ನಗರ ಉಪವಿಭಾಗದ ಸಹಾಯಕ ಕಂದಾಯಾಧಿಕಾರಿ ಮಂಜುನಾಥ್, ವಿಜಯಪುರದ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಉಪ ನಿರ್ದೇಶಕ ಶರತ್ ಗಂಗಪ್ಪ ಇಜ್ರಿ, ಗದಗ ಜಿಲ್ಲೆ ಮಂಡರಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರ ಪ್ರಕಾಶ್ ಗೌಡ ಕುದರಿಮೊಟಿ ಕಚೇರಿ, ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಅಕ್ರಮ ಆಸ್ತಿ-ಪಾಸ್ತಿ ಪತ್ತೆ ಹಚ್ಚಲಾಗಿದೆ.
ಅಧಿಕಾರಿಗಳಿಗೆ ಸೇರಿದ ಆಸ್ತಿ-ಪಾಸ್ತಿಗಳಿರುವ ಬೆಂಗಳೂರು, ವಿಜಯಪುರ ಸೇರಿದಂತೆ 10 ಕಡೆಗಳಲ್ಲಿ ಮಂಗಳವಾರ ಮುಂಜಾನೆಯಿಂದ ದಾಳಿ ನಡೆಸಿ, ಬಲೆಗೆ ಬಿದ್ದಿರುವ ಅಧಿಕಾರಿಗಳು ಗಳಿಸಿರುವ ಆಸ್ತಿ-ಪಾಸ್ತಿಯನ್ನು ವಶಪಡಿಸಿಕೊಂಡು ದಾಖಲೆಪತ್ರಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ಒಟ್ಟಾರೆ ಅಕ್ರಮ ಆಸ್ತಿಯ ಮೌಲ್ಯ ಸದ್ಯಕ್ಕೆ ತಿಳಿದುಬಂದಿಲ್ಲ.
ಸತೀಶ್ ಅವರ ನಗರದ ಆಲಿ ಆಸ್ಕರ್ ರಸ್ತೆಯಲ್ಲಿನ ಕಚೇರಿ, ವಾಸದ ಮನೆ, ಸಂಬಂಧಿಕರ ಮನೆ ಮೇಲೆ ದಾಳಿ ನಡೆಸಿದ್ದರೆ, ಮಂಜುನಾಥ್ ಅವರ ಜೆಬಿ ನಗರದಲ್ಲಿನ ಕಚೇರಿ, ಮನೆ, ಚೆನ್ನರಾಯಪಟ್ಟಣದ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಲಾಗಿದೆಎಂದು ಎಸಿಬಿಯ ಐಜಿಪಿ ಚಂದ್ರಶೇಖರ್ ತಿಳಿಸಿದ್ದಾರೆ.
ಕೋಟಿಗಟ್ಟಲೆ ನಗದು
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಆಪ್ತರಾಗಿರುವ ಶರತ್ ಅವರ ಬಸವೇಶ್ವರ ಮನೆ ಮೇಲೆ ದಾಳಿ ನಡೆಸಿದ್ದು, ಅವರ ವೀರಶೈವ ಕೋ-ಆಪರೇಟಿವ್ ಬ್ಯಾಂಕ್‍ನಲ್ಲಿನ 3 ಅಕೌಂಟ್‍ಗಳಲ್ಲಿನ 1.5 ಕೋಟಿ ವಶಪಡಿಸಿಕೊಂಡು ಮನೆಯಲ್ಲಿದ್ದ ಕೆಜಿ ಗಟ್ಟಲೆ ಚಿನ್ನ-ಬೆಳ್ಳಿಯನ್ನು ಜಪ್ತಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ.
ಶರತ್‍ಗಂಗಪ್ಪ ಇಜ್ರಿ ಅವರ ವಿಜಯಪುರದ ಕಚೇರಿ, ಮನೆ, ಸಂಬಂಧಿಕರ ಮನೆ ಮೇಲೆ ದಾಳಿ ನಡೆಸಲಾಗಿದ್ದು, ನಗದು, ಚಿನ್ನಾಭರಣ, ಐಷಾರಾಮಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೃಷಿ ಅಧಿಕಾರಿ ಪ್ರಕಾಶ್‍ಗೌಡ ಅವರ ಮಂಡರಗಿಯಲ್ಲಿನ 2 ವಾಸದ ಮನೆ, ರೈತ ಸಂಪರ್ಕ ಕೇಂದ್ರದ ಮೇಲೆ ದಾಳಿ ನಡೆಸಿ ದಾಖಲೆಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.ಶರದ್‍ಗಂಗಪ್ಪ ಅವರ ಬಳಿ 5 ಅಪಾರ್ಟ್‍ಮೆಂಟ್‍ಗಳು, 2 ಬ್ಯಾಂಕ್ ಲಾಕರ್‍ಗಳು, ನಗದು ಪತ್ತೆಯಾಗಿದ್ದು, ಅವುಗಳ ಪರಿಶೀಲನೆ ನಡೆಸಲಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
