ಬೆಂಗಳೂರು
ಕೊರೋನಾ ಸೋಂಕು ನಿಯಂತ್ರಣ ಹಾಗೂ ಪರಿಸ್ಥಿತಿ ನಿರ್ವಹಣೆಗಾಗಿ ರಚಿಸಲಾಗಿರುವ ಕಾಂಗ್ರೆಸ್ ಕಾರ್ಯಪಡೆಯ ಸಭೆ ನಾಳೆ ನಡೆಯಲಿದ್ದು, ಸರ್ಕಾರದ ವಿರುದ್ಧ ಕೇಳಿಬಂದಿರುವ ಪಿಪಿಇ ಕಿಟ್ ಹಗರಣದ ದಾಖಲೆ ಬಿಡುಗಡೆಯಾಗುವ ಸಾಧ್ಯತೆಯಿದೆ.
ಕಾರ್ಯಪಡೆಯ ಮುಖ್ಯಸ್ಥ ರಮೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಸಭೆ ನಡೆಯಲಿದೆ. ಶಾಸಕಾಂಗ ನಾಯಕ ಸಿದ್ದರಾಮಯ್ಯ, ಹಿರಿಯ ಮುಖಂಡ ರಾಮಲಿಂಗಾರೆಡ್ಡಿ,ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರುಗಳು, ಕಾರ್ಯಪಡೆಯ ಮುಖ್ಯಸ್ಥರು ಹಾಗೂ ಸದಸ್ಯರುಗಳು ಭಾಗವಹಿಸಲಿದ್ದಾರೆ. ಪಿಪಿಇ ಕಿಟ್ ಹಗರಣವನ್ನು ಯಶಸ್ವಿಯಾಗಿ ಬಳಸಿಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಂತ್ರ ರೂಪಿಸಿರುವ ಕಾಂಗ್ರೆಸ್ ನಾಯಕರು ಈಗಾಗಲೇ ಹಗರಣ ಸಂಬಂಧ ದಾಖಲೆಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಕಳೆದ ನಾಲ್ಕು ದಿನಗಳ ಹಿಂದೆಯೇ ಮತ್ತೊಮಧೂ ಸಭೆ ನಡೆಸಿದ್ದರು. ಹಗರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದು ಮತ್ತೆ ಜನಬೆಂಬಲ ಪಡೆಯಲು ನಿರ್ಣಯಕೈಗೊಳ್ಳಲಾಗಿದೆ.
ಕೊರೋನಾ ವೈದ್ಯಕೀಯ ಚಿಕಿತ್ಸೆಯ ಉಪಕರಣಗಳ ಖರೀದಿಯಲ್ಲಿ ಅಕ್ರಮ ನಡೆದಿರುವ ಕುರಿತು ಧನಿಯೆತ್ತಲು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಶಾಸಕರ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿರುವುದರಿಂದ ಅದಕ್ಕೆ ಪೂರಕ ದಾಖಲೆಗಳನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಪಕ್ಷದ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರಿಗೆ ವಹಿಸಲಾಗಿತ್ತು. ರಾಮಲಿಂಗಾರೆಡ್ಡಿ ಅವರು ದಾಖಲೆಗಳನ್ನು ಕಾರ್ಯಪಡೆ ಮುಂದೆ ಮಂಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ