ಹಾನಗಲ್ಲ :
ರೈತರ ಕೃಷಿ ಭೂಮಿಗೆ ನೀರೊದಗಿಸುವ ಯೋಜನೆಗಳು ಸಾಕಾರವಾದರೆ ರೈತ ಯಾರಿಗೂ ಕೈಚಾಚುವ ಪ್ರಮೇಯೆಗಳೆ ಉದ್ಭವಿಸುವುದಿಲ್ಲ, ಹಾನಗಲ್ಲ ತಾಲೂಕಿನ ನೀರಾವರಿ ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಕೃಷಿ ಪಂಪಸೆಟ್‍ಗಳಿಗೆ ಉತ್ತಮ ವಿದ್ಯುತ್ ಒದಗಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದರು.
ಸೋಮವಾರ ಹಾನಗಲ್ಲಿನ ಧರ್ಮಾನದಿಯಿಂದ ಪಟ್ಟಣದ ಪಕ್ಕದಲ್ಲಿರುವ ಅಚಗೇರಿ ಕೆರೆಗೆ ಕರ್ನಾಟಕ ನೀರಾವರಿ ನಿಗಮ ನಿಯಮಿತದ ತುಂಗಾ ಮೇಲ್ದಂಡೆ ಯೋಜನೆ ವಿಶೇಷ ಘಟಕ ಯೋಜನೆಯಡಿಯಲ್ಲಿ ನೀರು ತುಂಬಿಸುವ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಾಳಂಬೀಡ ಏತ ನೀರಾವರಿ ಯೋಜನೆ ಕಾರ್ಯರೂಪಕ್ಕೆ ಬರುವುದರಿಂದ 90 ಕ್ಕೂ ಅಧಿಕ ನೀರಾವರಿ ಕೆರೆಗಳನ್ನುನ ತುಂಬಿಸಲು ಸಾಧ್ಯ. ಈ ಮೂಲಕ ಹಾನಗಲ್ಲ ತಾಲೂಕಿನ ಉತ್ತರಭಾಗದ ಸಂಪೂರ್ಣ ನೀರಾವರಿ ಮೂಲಕ ರೈತ ನೆಮ್ಮದಿಯಿಂದ ಆತಂಕವಿಲ್ಲದೆ ಕೃಷಿ ಚಟುಚಟಿಕೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ. ರೈತರೂ ಕೂಡ ನೀರಾರಿ ಯೋಜನೆಗಳು ಹಾಗೂ ನೀರಿನ ಬಳಕೆಯಲ್ಲಿ ಜಾಗೃತರಾಗಬೇಕಾದ ಅವಶ್ಯಕತೆ ಇದೆ ಎಂದರು.
ಹಾನಗಲ್ಲ ತಾಲೂಕಿನಲ್ಲಿ ರೇಷ್ಮೇ, ಗೋಡಂಬಿ, ಗೇರು, ಶುಂಠಿ ಬೆಳೆಗಳನ್ನು ಬೆಳೆಯಲು ಅತ್ಯುತ್ತಮವಾದ ವಾತಾವರಣವಿದೆ. ಮಾವಿನ ಬದಲಾಗಿ ಇಂತಹ ವಾಣಿಜ್ಯ ಬೆಳೆಗಳನ್ನು ಬೆಳೆಯುವುದರಿಂದ ಹೆಚ್ಚಿನ ಆರ್ಥಿಕ ಲಾಭ ಪಡೆಯಲು ಸಾಧ್ಯ. ಆದರೆ ಮಾವು ಮತ್ತು ಶುಂಠಿ ವಿಶೇಷವಾಗಿ ಮಧ್ಯವರ್ತಿಗಳ ಹಾವಳಿಯಿಂದ ರೈತರು ಲಾಭ ವಂಚಿತರಾಗುತ್ತಿದ್ದಾರೆ. ಹೀಗಾಗಿ ರೈತರು ಸ್ವತಃ ಮಾರುಕಟ್ಟೆಗೆ ರಮ್ಮ ಬೆಳೆಗಳನ್ನು ಕೊಂಡ್ಯೋಯ್ದು ಮಾರಾಟ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದು ಸಿ.ಎಂ.ಉದಾಸಿ ತಿಳಿಸಿದರು
ರಾಮಲಿಂಗೇಶ್ವರ ಕೆರೆ ಅಭಿವೃದ್ಧಿ ಸಂಘದ ಅಧ್ಯಕ್ಷ ದೇವೆಂದ್ರಪ್ಪ ಮೂಡ್ಲಿಯವರ, ಗುರುಸಿದ್ದಪ್ಪ ಕೊಂಡೋಜಿ, ಪುರಸಭೆ ಮಾಜಿ ಅಧ್ಯಕ್ಷೆ ಹಸೀನಾಬಿ ನಾಯ್ಕನವರ, ಮಾಜಿ ಉಪಾಧ್ಯಕ್ಷ ಗಣೇಶ ಮೂಡ್ಲಿಯವರ, ಜಾಫರಸಾಬ ಕೇಣಿ, ಶಿವಲಿಂಗಪ್ಪ ತಲ್ಲೂರ, ಕಾರ್ಯನಿರ್ವಾಹಕ ಅಭಿಯಂತರ ಪಿ.ಬಿ.ಚನ್ನಬಸಪ್ಪ, ಕಾರ್ಯನಿರ್ವಾಹಕ ಅಧಿಕಾರಿ ಬಿ.ಸುರೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.