ಸಿರಿಗೆರೆ
ಚಿತ್ರದುರ್ಗ ದಾವಣಗೆರೆ, ಶಿವಮೊಗ್ಗ ತ್ರಿವಳಿ ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ 7 ಸಾಧಕರನ್ನು ಸಿರಿಗೆರೆಯಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ನೀವು ಸಾಧನೆ ಮಾಡಿ ಸಾರ್ಥಕವಾಗಿ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತರಳಬಾಳು ವಿದ್ಯಾಸಂಸ್ಥೆಯಲ್ಲಿ 50ಸಾವಿರ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಅವರಲ್ಲಿ ಸಂಗೀತ ಕ್ಷಮತೆಯುಳ್ಳ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಅನುಕೂಲವಾಗುವ ಸಮಯದಲ್ಲಿ ಸುಗಮ ಸಂಗೀತ ಕಲಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಬಿ.ವಿ.ವಸಂತಕುಮಾರ್ ಮಾತನಾಡಿ, ನಾಡಿಗೆ ವಿವೇಚನೆ ನೀಡುವ ಬೃಹನ್ಮಠ ನಾಡಿನ ಹಳ್ಳಿಗಳಲ್ಲಿ ಪ್ರೌಢಶಾಲೆಗಳನ್ನು, ತರಳಬಾಳು ವಿದ್ಯಾಸಂಸ್ಥೆ ತೆರೆಯದೇ ಇದ್ದರೆ, ಕೃಷಿಕರಿಗೆ ತೋಟ ಮಾಡಿ ಕಾಯಕ ಮಾಡುವುದನ್ನು ಕಲಿಸದಿದ್ದರೆ ನಮ್ಮ ಸ್ಥಿತಿ ಉತ್ತಮವಾಗುತ್ತಿರಲಿಲ್ಲ. ನಾಡಿನ ಸಂಸ್ಕøತಿ ಕಟ್ಟಿದವರಿಗೆ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಿದೆ.
ನೆಲ, ಜಲ, ವನ, ಭಾಷೆ, ಹೆತ್ತ ತಾಯಿಗಳೆಲ್ಲವೂ ಕನ್ನಡವಾಗಬೇಕು. ಅನ್ಯೋನತೆಯಿಂದ ಬದುಕುವುದನ್ನು ಕಲಿಸುತ್ತದೆ. ನೈತಿಕ ಅದಃ ಪತನಗೊಳ್ಳದಂತೆ ನೋಡಿಕೊಳ್ಳಬೇಕು. ದುಡಿದು ತಿನ್ನುವುದನ್ನು ಕಲಿಸಬೇಕು. ಹೊಡೆದು ತಿನ್ನುವುದನ್ನು ಕಲಿಸಬಾರದು. ನಾಡಿನಲ್ಲಿ ಕನ್ನಡ ಆಡಳಿತ ಭಾಷೆ ಆಗಬೇಕು. ಇಂಗ್ಲೀಷ್ ಪತ್ರಗಳನ್ನು ಹಿಂದಿರುಗಿಸಬೇಕು.
ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಮಾತನಾಡಿ, ಬೇರೆಯವರು ಅಭಿಮಾನದ ಮನೆಯವರು, ಪ್ರೀತಿ ಮತ್ತು ಅಭಿಮಾನದಿಂದ ಸನ್ಮಾನಿಸಿರುವುದು ಪುಣ್ಯ ವಿಶೇಷ. ಇದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ಸಾಧನೆ ಮಾಡಲು ಸ್ಪೂರ್ತಿಯಾಗಿದೆ. ಶ್ರೀಗಳವರ ಪ್ರೇರಣೆ ಮತ್ತು ಆಶೀರ್ವಾದ ಇರಲಿ ಎಂದರು.ಜಿಲ್ಲಾಧಿಕಾರಿ ಆರ್.ವಿನೋತ್‍ಪ್ರಿಯಾ ಮಾತನಾಡಿ ನಾಡು-ನುಡಿಯನ್ನು ಬೆಳೆಸುವಲ್ಲಿ ಮಕ್ಕಳು ಶ್ರಮಿಸಬೇಕು ಎಂದರು.
ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ ಮಾತನಾಡಿ, ಸಾಧಕರಿಗೆ ಸನ್ಮಾನಿಸಿದ್ದು, ನಾಡಿನ ಸರ್ವರಿಗೂ ಸನ್ಮಾನಿಸಿದಾಂತಾಗಿದೆ. ನಾಡು-ನುಡಿಗೆ ದುಡಿಯವರನ್ನು ಸನ್ಮಾನಿಸಿರುವುದು ಔಚಿತ್ಯ ಪೂರ್ಣ ಸಾಹಿತ್ಯ, ಸಂಗೀತ, ಕಲೆ, ಜೀವನದ ಸಂಕಷ್ಟಗಳನ್ನು ಹಗುರಗೊಳಿಸುವವು ಎಂದರು.ರಂಗಭೂಮಿ ಕಲಾವಿದ ಕೊಡಗನೂರು ಜಯಕುಮಾರ್ ಮಾತನಾಡಿ, ಪ್ರಶಸ್ತಿ ಹುಡುಕಿಕೊಂಡು ಬಂದಿದೆ. ಪ್ರಶಸ್ತಿ ಬಂದಾಗ ಮಣಿಪಾಲ ಆಸ್ಪತ್ರೆಯಲ್ಲಿದ್ದೆ, 50ವರ್ಷದಿಂದ ರಂಗಭೂಮಿ ಸೇವೆ ಮಾಡಿದ್ದು, ಉಸಿರಿರುವರೆಗೂ ಸೇವೆ ಮಾಡಲು ಪ್ರಯತ್ನಿಸುತ್ತೇನೆ ಎಂದರು.
ಸಾಹಿತಿ ಶಾಂತಗಂಗಾಧರ್ ಮಾತನಾಡಿ, ಅರ್ಜಿಹಾಕದೆ ಪ್ರಶಸ್ತಿ ಪಡೆದವರು, ವಿದ್ಯಾರ್ಥಿಗಳು ಕನ್ನಡದ ಹುಚ್ಚು ಹೆಚ್ಚಿಸಿಕೊಳ್ಳಬೇಕು ಹಾಗೂ ಪ್ರೇರಣೆ ಆಗಲಿ. ಕನ್ನಡದ ಕೆಚ್ಚನ್ನು ಮೂಡಿಸಲಿ ಎಂದರು ಪರಿಸರ ಪ್ರೇಮಿ ಸಾಲುಮರದ ವೀರಾಚಾರ್ ಮಾತನಾಡಿ, ನಮ್ಮ ದೇಹ ಶಿವನು ಕೊಟ್ಟ ಬಾಡಿಗೆ ಮನೆಯಾಗಿದೆ,. ಅದನ್ನು ಸಾರ್ಥಕಪಡಿಸಿಕೊಳ್ಳಬೇಕಾಗಿದೆ. ದೇಶ ನನಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾನು ದೇಶಕ್ಕೆ ಏನು ಕೊಟ್ಟೆ ಎಂದು ಪ್ರಶ್ನಿಸಿಕೊಂಡು ಕೊಡುಗೆ ನೀಡಬೇಕು ಎಂದರು.
ಸಮಾಜಸೇವಕ ಕತ್ತಿಗೆ ಚನ್ನಪ್ಪ ಮಾತನಾಡಿ, ಕನ್ನಡ ತಾಯಿಯ ಆಶಯದಂತೆ ನಾವು ಕೆರೆಕಟ್ಟಿಸುವ, ಸಾಲುಮರ ನೆಡುವ, ದೇವಾಲಯಗಳನ್ನು ಕಟ್ಟಿಸುವಂತಹ ಲೋಕಕ್ಕೆ ಉಪಕಾರದ ಕೆಲಸಗಳನ್ನು ಮಾಡಬೇಕು ಎಂದರು.
ಶ್ರೀನಿವಾಸ ಉಡುಪ ಮಾತನಾಡಿ ಜಿ.ಎಸ್.ಶಿವರುದ್ರಪ್ಪ ವಿರಚಿತ ಕಾಣದ ಕಡಲಿಗೆ ಭಾವಗೀತೆ ಮನಮುಟ್ಟುವಂತೆ ಹಾಡಿ ಜೀವನದ ಮಹತ್ವದ ಗುರಿಯನ್ನು ತಿಳಿಸಿ, ಅದನ್ನು ಇತರರಿಗೆ ತಲುಪುವಂತೆ ತಿಳಿಸಿದರು.ಚಲನಚಿತ್ರ ರಂಗದ ನಟ ಮಂಡ್ಯ ರಮೇಶ್ ಮಾತನಾಡಿ, ಕನ್ನಡ ಕಲಿತರೆ ಉದ್ಯೋಗ ಸಿಗುವುದಿಲ್ಲ ಎಂಬುದು ಸುಳ್ಳು.
ಹಲವಾರು ದೇಶಗಳನ್ನು ಸುತ್ತಿದ ನನಗೆ ಸುಂದರ ನಾಡು, ಕರ್ನಾಟಕ, ನುಡಿ ಕನ್ನಡ, ಬ್ಯಾಂಕಿನಲ್ಲಿ ಕೆಲಸ ಮಾಡುವವರು ತರಳಬಾಳು ಬೃಹನ್ಮಠದಲ್ಲಿ ಓದಿದವರು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದಾರೆ. ಇಂಗ್ಲೀಷ್ ಬಾಷೆ ಕಲಿತರೆ ಮಾತ್ರ ಜೀವನ ಎಂಬುದು ಭ್ರಮೆ. ಇತರೆ ಭಾಷೆಗಳನ್ನು ಕಲಿತರೂ ಕನ್ನಡದಲ್ಲಿ ಬದುಕಬೇಕು. ಆದರ್ಶಗಳನ್ನು ವಾಸ್ತವಕ್ಕಿಳಿಸುವ ಜೀವನುಪಯೋಗಿ ಕೆಲಸ ಮಾಡುತ್ತಿರುವ ಬೃಹನ್ಮಠ ಸಂಸ್ಕೃತಿ ಬೆಳೆಸುತ್ತಿದೆ. ಕನ್ನಡ ಮಾತನಾಡುವ ಮೂಲಕ ಉಳಿಯುತ್ತದೆ. ಮಮ್ಮಿ , ಡ್ಯಾಡಿ ಬಳಸದೆ ಅವ್ವ, ಅಪ್ಪ ಎಂದು ಬಳಸಿ ಎಂದರು.
ಡಾ.ಬಿ.ರಾಜಶೇಖರಪ್ಪ, ಸಾಲುಮರದ ವೀರಾಚಾರ್, ಎಸ್.ಟಿ.ಶಾಂತಗಂಗಾಧರ್, ಜಯಕುಮಾರ್ ಕೊಡಗನೂರ್, ಕತ್ತಿಗೆ ಚನ್ನಪ್ಪ, ಶ್ರೀನಿವಾಸ್ ಉಡುಪ, ಕೆ.ಜ್ಞಾನೇಶ್ವರ್ ಮತ್ತು ಅವರ ಧರ್ಮಪತ್ನಿಯರನ್ನು ಕನ್ನಡ ರಾಜ್ಯೋತ್ಸವದ ನೆನಪಿನ ಫಲಕ, ಶಾಲು, ಹಾರ, ಪುಸ್ತಕ ನೀಡಿ ಅಭಿನಂದಿಸಲಾಯಿತು.
ಸಂಗೀತ ಶಿಕ್ಷಕರಾದ ಸುರೇಶ್ ಕೇಸಾಪುರ ತಂಡದಿಂದ ತರಳಬಾಳು ಸಂಗೀತ ಪಾಠಶಾಲಾ ಮಕ್ಕಳು ವಚನ ಮತ್ತು ನಾಡಗೀತೆ ಹಾಡಿದರು, ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.ಮರುಳಸಿದ್ದಯ್ಯ ಸ್ವಾಗತಿಸಿದರು, ವಿಜಯಲಕ್ಷ್ಮಿ ಮತ್ತು ಪೂಜಾ ನಿರೂಪಿಸಿದರು . ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಎಸ್.ಬಿ.ರಂಗನಾಥ್, ವಿಶೇಷಾಧಿಕಾರಿ ಎಚ್.ವಿ.ವಾಮದೇವಪ್ಪ, ವಿದ್ಯಾಸಂಸ್ಥೆಯ ಶಾಲಾ-ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು, ಸಿರಿಗೆರೆ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ವೃತ್ತನಿರೀಕ್ಷಕ ಗಿರೀಶ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ