ತುಮಕೂರು
ಸಮಾಜದಲ್ಲಿ ಗೌರವಿಸಿಕೊಳ್ಳಬೇಕಾದರೆ ಆ ವ್ಯಕ್ತಿ ದೊಡ್ಡ ಸಾಧನೆ, ತ್ಯಾಗ ಮಾಡಬೇಕು, ಆ ಸಾಧನೆ ಹಾದಿಯಲ್ಲಿ ಏಳುಬೀಳು, ಪರಿಶ್ರಮವಿರುತ್ತದೆ. ಇದನ್ನೆಲ್ಲಾ ಮೆಟ್ಟಿ ಯಶಸ್ವು ಪಡೆಯಬೇಕಾಗುತ್ತದೆ, ಟಿ. ಆರ್. ಆಂಜನಪ್ಪನವರು ಸಮಾಜ ಗೌರವಿಸುವಂತಹ ಸೇವೆ, ಸಾಧನೆ ಮಾಡಿದ್ದಾರೆ.
ಇವರ ಸೇವೆ ಸಮಾಜಕ್ಕೆ ಇನ್ನೂ ಹೆಚ್ಚು ದೊರೆಯಲಿ ಎಂದು ಕಾನೂನು ಸಚಿವ ಜೆ. ಸಿ. ಮಾಧುಸ್ವಾಮಿ ಆಶಿಸಿದರು.ಟಿ. ಆರ್. ಆಂಜನಪ್ಪ ಅಭಿಮಾನಿ ಬಳಗ ಭಾನುವಾರ ಸಂಜೆ ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಚಾರ್ಟೆಡ್ ಅಕೌಂಟೆಂಟ್ ಟಿ. ಆರ್. ಆಂಜನಪ್ಪ ಅವರ 70ನೇ ಹುಟ್ಟು ಹಬ್ಬ ಆಚರಣೆ ಸಮಾರಂಭವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದ ಸಚಿವರು, ಆಂಜನಪ್ಪರಿಗೆ ಶುಭ ಕೋರಿದರು.
ಮಾಜಿ ಸಚಿವ ಲಕ್ಷ್ಮೀನರಸಿಂಹಯ್ಯನವರೊಂದಿಗೆ ಆಂಜನಪ್ಪ ಹಾಗೂ ನಾನು ರಾಜಕೀಯ ಪಾಠ ಕಲಿತವರು. ಲಕ್ಷ್ಮೀನರಸಿಂಹಯ್ಯ ನವರು ನಮಗೆ ಮೇಷ್ಟ್ರು. ಅವರು ಒಳ್ಳೆ ಮೇಷ್ಟ್ರು, ಅವರು ನಮಗೆ ಪಾಠ ಹೇಳುತ್ತಿರಲಿಲ್ಲ, ಬದಲಿಗೆ ವಿದ್ಯಾರ್ಥಿಗಳು ಹೇಳಿದಂತೆ ಕೇಳುತ್ತಿದ್ದರು ಎಂದು ಮಾಧುಸ್ವಾಮಿ ಆ ದಿನಗಳನ್ನು ನೆನಪಿಸಿಕೊಂಡರು. ಆಗ ರಾಜಕಾರಣದಲ್ಲಿ ಜಾತಿ ಬೇಧದ ಸೋಂಕು ಇರಲಿಲ್ಲ, ಅದ್ಯಾವ ಪ್ಮಣ್ಯಾತ್ಮ ರಾಜಕಾರಣಕ್ಕೆ ಜಾತಿ ತಂದುಬಿಟ್ಟನೋ, ಕರ್ನಾಟಕದ ದುರ್ದೈವ ಎಂದರು.
ಆಂಜನಪ್ಪ ಅವರು ರಾಜಕಾರಣ ಕಲಿತಿದ್ದರೂ ಪೂರ್ಣ ಪ್ರಮಾಣದ ರಾಜಕಾರಣಿಯಾಗಲಿಲ್ಲ. ಸಮಾಜ ಸೇವೆ ಮಾಡಲು ರಾಜಕಾರಣಕ್ಕೇ ಬರಬೇಕು ಎಂದೇನಿಲ್ಲ, ಮಾಡುವ ವೃತ್ತಿಯ ಜೊತೆಗೆ ಸಮಾಜ ಸೇವೆಯನ್ನೂ ಮಾಡಬಹುದು. ಆಂಜನಪ್ಪ ಅವರು ಬಡ ಮಕ್ಕಳ ಶಿಕ್ಷಣಕ್ಕೆ ಪೂರಕವಾಗಿ ನಿಂತಿದ್ದಾರೆ. ಇವರ ಸೇವೆ ಹೀಗೇ ಮುಂದುವರೆಯಲಿ ಇನ್ನಷ್ಟು ಬಡ ಮಕ್ಕಳಿಗೆ ಅನುಕೂಲವಾಗಲಿ ಎಂದು ಸಚಿವ ಮಾಧುಸ್ವಾಮಿ ಹಾರೈಸಿದರು.
ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ. ಎನ್.ರಾಜಣ್ಣನವರು ಮಾತನಾಡಿ, ಚಾರ್ಟೆಡ್ ಅಕೌಂಟೆಂಟ್ ಕಠಿಣವಾದ ಕೆಲಸವಲ್ಲ. ಅದನ್ನು ರೂಢಿಸಿಕೊಂಡು ಆಂಜನಪ್ಪನವರು ಯುವಕರಿಗೆ ಮಾರ್ಗದರ್ಶಕರಾಗಿದ್ದಾರೆ. ಇವರು ಯಾವತ್ತೂ, ಯಾರನ್ನೂ ಕಟುವಾಗಿ ಮಾತಾನಾಡಿಲ್ಲ, ಮನಸು ನೋಯಿಸುವ ಕೆಲಸ ಮಾಡಿಲ್ಲ, ಎಲ್ಲರೊಂದಿಗೆ ವಿಶ್ವಾಸವಾಗಿ ಬೆರೆಯುವ ಸಹನೆ ಇವರಲ್ಲಿದೆ ಎಂದರು.
ಬೇರೆಯವರ ಕಷ್ಟ, ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಥಿತಿ ಹೊಂದಿರುವ ಆಂಜನಪ್ಪನವರು, ಯುಜನರಿಗೆ ಮಾದರಿಯಾಗಿದ್ದಾರೆ. ಲಕ್ಷ್ಮೀನರಸಿಂಹಯ್ಯರ ಜೊತೆ ರಾಜಕಾರಣ ಮಾಡಿದರೂ ಇವರು ರಾಜಕೀಯ ಅಧಿಕಾರದ ಆಸೆಪಡಲಿಲ್ಲ. ಸಮಾಜ ಸೇವೆ, ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಲ್ಲಿ ತೊಡಗಿಕೊಂಡು ಸಾಂಸ್ಕøತಿ ವ್ಯಕ್ತಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಕೆ. ಎನ್. ರಾಜಣ್ಣ ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಘಟಕದ ಸಭಾಪತಿಯಾದ ಎಸ್. ನಾಗಣ್ಣನವರು ಪ್ರಾಸ್ತಾವಿಕ ನುಡಿ ನುಡಿಯುತ್ತಾ, ಸಾಧಕರನ್ನು ಗೌರವಿಸಿ, ಅವರ ಸಾಧನೆಯನ್ನು ಇಂದಿನ ತಲೆಮಾರಿಗೆ ಪರಿಚಯಿಸುವುದು ಒಳ್ಳೆ ಸಂಪ್ರದಾಯ. ಇದರಿಂದ ಸಾಧನೆಯ ಹಾದಿಯಲ್ಲಿರುವವರಿಗೆ ಇವರು ಪ್ರೇರಣೆಯಾಗಲಿ ಎಂಬ ಆಶಯ ಎಂದರು.
ಸಾಂಸ್ಕೃತಿಕ, ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವ ಆಂಜನಪ್ಪನವರು, ಲೆಕ್ಕಪರಿಶೋಧನೆಯಲ್ಲಿ ಪರಿಣಿತಿ ಹೊಂದಿ, ಯಾವುದೇ ಕ್ಲಿಷ್ಟತೆಗಳನ್ನೂ ತಾಳ್ಮೆಯಿಂದ ಬಗೆಹರಿಸುತ್ತಾರೆ. ಅನೇಕರಿಗೆ ಇದರ ಅನುಭವವಾಗಿದೆ. ರಾಜ್ಯ ಚಾರ್ಟೆಡ್ ಅಕೌಂಟೆಂಟ್ ಸಂಘದ ಅಧ್ಯಕ್ಷರೂ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆಯಲ್ಲಿ ತೊಡಗಿರುವ ಆಂಜನಪ್ಪನವರ ಸೇವೆ ಸಮಾಜಕ್ಕೆ ಮತ್ತಷ್ಟು ದೊರೆಯಬೇಕು ಎಂದು ಆಶಿಸಿದರು.
ಟಿ. ಆರ್. ಆಂಜನಪ್ಪ ಹಾಗೂ ಇವರ ಪತ್ನಿ ತೇಜೋವತಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ನಂತರ ಮಾತನಾಡಿದ ಆಂಜನಪ್ಪ, ತಾವು ಲಕ್ಷ್ಮೀನರಸಿಂಹಯ್ಯರಿಂದ ರಾಜಕೀಯದ ಅರಿವು ಪಡೆದೆ ಹೊರತು ರಾಜಕಾರಣ ಮಾಡಲಿಲ್ಲ ಎಂದು ಹೇಳಿ. ಚಾರ್ಟೆಡ್ ಅಕೌಂಟೆಡ್‍ನಲ್ಲಿ ತಮ್ಮ ಗುರುವಾದ ಆಡಿಟರ್ ರಾಮಚಂದ್ರರವರನ್ನು ಸ್ಮರಿಸಿದರು.
ತಮ್ಮ 40-50 ವರ್ಷಗಳ ಲೆಕ್ಕಪರಿಶೋಧನೆ ವ್ಯವಹಾರದ ಆಗಿನ ಪರ್ವಕ್ಕೂ ಈಗಿನ ಪರ್ವಕ್ಕೂ ವ್ಯತ್ಯಾಸವಿದೆ, ಬದಲಾಗುತ್ತಿರುವ ತಾಂತ್ರಿಕತೆ, ಕೌಶಲ್ಯವನ್ನು ಇವತ್ತಿಗೂ ಚಿಕ್ಕವಯಸ್ಸಿನವರಿಂದ ಕಲಿಯುತ್ತಿದ್ದೇನೆ, ಕಲಿಕೆ ನಿರಂತರವಾಗಿರ ಬೇಕು. ಕಲಿಕೆಯ ತುಡಿತ ಯಾರಿಗೂ ಕಮ್ಮಿ ಆಗಬಾರದು ಎಂದು ಆಂಜನಪ್ಪ ಹೇಳಿದರು.ಉದ್ಯಮಿ ಎನ್. ಆರ್. ಜಗದೀಶ್, ವಿದ್ಯಾನಿಕೇತನ ಶಾಲಾ ಸಂಸ್ಥೆ ಅಧ್ಯಕ್ಷ ಜಿ. ಸೀತಾರಾಮ್, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಡಾ. ಎಂ. ಆರ್. ಹುಲಿನಾಯ್ಕರ್, ಚಾರ್ಟೆಡ್ ಅಕೌಂಟೆಂಟ್ ಮುರುಗೇಶ್, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಾದ ಆನಂದ್, ಶ್ರೀಧರ್ ಮತ್ತಿತರರು ಆಂಜನಪ್ಪರಿಗೆ ಶುಭ ಕೋರಿ ಮಾತನಾಡಿದರು.ಟಿ.ಆರ್.ಹೆಚ್. ಪ್ರಕಾಶ್ ಸ್ವಾಗತಿಸಿದರೆ, ಉದ್ಯಮಿ ರಮೇಶ್‍ಬಾಬು ಕಾರ್ಯಕ್ರಮ ನೀರೂಪಿಸಿದರು, ಧನಿಯಾ ಕುಮಾರ್ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ