ತುರುವೇಕೆರೆ
ಜಿಂದಾಬಾದ್ ಜಿಂದಾಬಾದ್ ಹಿಂದೂಸ್ಥಾನ್ ಜಿಂದಾಬಾದ್, ಮುರ್ದಾಬಾದ್ ಮುರ್ದಾಬಾದ್ ಪಾಕಿಸ್ತಾನ್ ಮುರ್ದಾಬಾದ್. ಹಿಂದೂಸ್ಥಾನ್ ಹಮಾರ ಹೈ, ಜೈ ಜವಾನ್ ಜೈ ಕಿಸಾನ್. ಡೌನ್ ಡೌನ್ ಪಾಕಿಸ್ತಾನ್ ಡೌನ್ ಡೌನ್ ಪಾಕಿಸ್ತಾನ್. ಇದು ಪಟ್ಟಣದ ವಿವಿಧ ಮುಸ್ಲಿಂ ಸಂಘಟನೆಯ ಕಾರ್ಯಕರ್ತರು ಮತ್ತು ಮುಸಲ್ಮಾನ್ ಬಾಂಧವರು ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗಿದ ಪರಿ.
ಹೌದು, ಪಟ್ಟಣದ ನೂರಾರು ಮುಸ್ಲಿಂ ಮುಖಂಡರು ಶುಕ್ರವಾರ ತಮ್ಮ ಪ್ರಾರ್ಥನಾ ಮಂದಿರದಲ್ಲಿ ಪ್ರಾರ್ಥನೆ ಮುಗಿಸಿಕೊಂಡು ಪ್ರವಾಸಿ ಮಂದಿರದ ಬಳಿ ಜಮಾಯಿಸಿದರು. ಪಾಕಿಸ್ತಾನದ ಕುತಂತ್ರ ಬುದ್ದಿಗೆ ಛೀಮಾರಿ ಹಾಕಿದರು. ಹಲವಾರು ವರ್ಷಗಳಿಂದಲೂ ಪಾಕಿಸ್ತಾನ ತನ್ನ ಸಣ್ಣತನವನ್ನು ಮುಂದುವರೆಸುತ್ತಲೇ ಇದೆ. ಪಾಕಿಸ್ತಾನದ ಹೆಡೆಮುರಿ ಕಟ್ಟಲು ಭಾರತ ಸನ್ನದ್ಧವಾಗಿದೆ.
ಪಾಕಿಸ್ತಾನದೊಂದಿಗೆ ಯುದ್ಧವಾದಲ್ಲಿ ಪಾಕಿಸ್ತಾನ ಸುಟ್ಟು ಭಸ್ಮವಾಗುವುದರಲ್ಲಿ ಸಂದೇಹವೆ ಇಲ್ಲ. ವಿನಾಕಾರಣ ಭಾರತದೊಂದಿಗೆ ದ್ವೇಷಭಾವನೆಯನ್ನು ಮುಂದುವರೆಸುತ್ತಿರುವ ಪಾಕಿಸ್ತಾನಕ್ಕೆ ಬುದ್ದಿ ಕಲಿಸಲು ಇದು ಸರಿಯಾದ ಸಮಯ ಎಂದು ಮುಸ್ಲಿಂ ಮುಖಂಡ ಜಫ್ರುಲ್ಲಾ ಹೇಳಿದರು.
ಪಾಕ್ ಕುತಂತ್ರಕ್ಕೆ ದೇಶದ ಯೋಧರು ಬಲಿಯಾಗಿದ್ದಾರೆ. ಇದು ಭಾರತಕ್ಕೆ ಪಾಕಿಸ್ತಾನ್ ಎಸೆದಿರುವ ಸವಾಲು. ಇದಕ್ಕೆ ತಕ್ಕ ಉತ್ತರವನ್ನು ಶೀಘ್ರದಲ್ಲೇ ಭಾರತ ತೆಗೆದುಕೊಳ್ಳಲಿದೆ ಎಂದು ಜಾಮಿಯಾ ಮಸೀದಿ ಮುತುವಲ್ಲಿ ಅಸ್ಲಾಂ ಪಾಷಾ ಆಶಾಭಾವನೆ ವ್ಯಕ್ತಪಡಿಸಿದರು. ಗಡಿಯಲ್ಲಿ ಮೃತರಾಗಿರುವ ಯೋಧರ ಕುಟುಂಬದ ನೋವಿಗೆ ಇಡೀ ಭಾರತವೇ ನಿಂತಿದೆ. ಭಾರತದಲ್ಲಿರುವ ಪ್ರತಿಯೊಬ್ಬರೂ ದೇಶಾಭಿಮಾನವನ್ನು ಮೆರೆಯಬೇಕು ಎಂದು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ತೆರಳಿದ ಮುಸ್ಲಿಂ ಬಾಂಧವರು ಪಾಕಿಸ್ತಾನದ ವಿರುದ್ಧ ಧಿಕ್ಕಾರ ಕೂಗಿದರು. ಮುಖಂಡರಾದ ಶಬ್ಬೀರ್, ನಯಾಜ್ ಅಹಮದ್, ಯೂಸೂಫ್ ಸೇಟ್, ಸೈಯದ್ ನೂರುಲ್ಲಾ, ನಸ್ರುಲ್ಲಾ, ರಫೀಕ್, ಜಾಫರ್, ಡಿ.ಕಲ್ಕೆರೆ ಭಕ್ಷ್ ಸೇರಿದಂತೆ ನೂರಾರು ಮುಸ್ಲಿಂ ಯುವಕರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
