ಶಾಸನ ಸಹಿತ ಪುರಾತನ ಅಳತೆಗೋಲುಗಳು ಪತ್ತೆ

ಹರಿಹರ:

        ಹರಿಹರ ಸಮೀಪದ ನದಿಹರಳಹಳ್ಳಿ (ರಾಣೇಬೆನ್ನೂರು ತಾ) ಗ್ರಾಮದಲ್ಲಿ ಪುರಾತನ ಕ್ಷೇತ್ರಕಾರ್ಯ ನಡೆಸುವಾಗ 12 ನೆಯ ಶತಮಾನದ ಶಾಸನ ಸಹಿತ ಎರಡು ಅಳತೆಗೋಲುಗಳು ದೊರೆತಿವೆ. ಪ್ರಾಚೀನ ಇತಿಹಾಸ ಸಂಸ್ಕøತಿಯ ಅಧ್ಯಯನಕಾರರಾಗಿರುವ ರವಿಕುಮಾರ ಕೆ ನವಲಗುಂದ ಮತ್ತು ಹಿ.ಗು. ದುಂಡ್ಯಪ್ಪ ಅವರ ಮಾರ್ಗದರ್ಶನದಲ್ಲಿ ಈ ಉತ್ಖನನ ನಡೆದಿದೆ. ಸಿಕ್ಕಿರುವ ಎರಡು ಮಾಪನಗಳಿಗೆ ಶಾಸನದಲ್ಲಿ ಕೋಲುಗಳು ಎಂದು ಹೆಸರಿಸಲಾಗಿದೆ.

       ನದಿಹರಳಹಳ್ಳಿಯ ಕಲ್ಲೇಶ್ವರ (ಸೋಮೇಶ್ವರ) ದೇವಾಲಯದ ಬಲಭಾಗದ ಅಧಿಷ್ಠಾನ (ತಳಪಾಯ) ದಲ್ಲಿ ದಕ್ಷಿಣ ಉತ್ತರಾಭಿಮುಖವಾಗಿ ಎರಡು ಅಳತೆ ಮಾಪನಗಳನ್ನು ಕೊಡಲಾಗಿದೆ. ಎರಡರಲ್ಲೂ ಶಾಸನಗಳಿದ್ದು, 12 ನೆಯ ಶತಮಾನದಲ್ಲಿ ರಚನೆಯಾಗಿವೆ. ಮೊದಲ ಭೂ ಅಳತೆ ಮಾಪನವು ಯೊಡ್ಡರಲಳತೆಯ ಕೋಲು ಎಂಬ ಶಾಸನದೊಂದಿಗೆ 77 ಇಂಚು (195.6 ಸೆಂ.ಮೀ) ಉದ್ದವನ್ನು ಹೊಂದಿದೆ ಎಂದು ಇತಿಹಾಸಕಾರರು ತಿಳಿಸಿದ್ದಾರೆ.

       ಸದ್ಯ ದೊರೆತಿರುವ ಅಳತೆಯ ‘ಕೋಲು’ ಭೂಮಿಯನ್ನು ಅಳೆಯುವ ಮಾಪನಗಳಾಗಿವೆ. ಈ ರೀತಿಯ ಪ್ರಾಚೀನ ಭೂಮಾಪನ ಕೋಲುಗಳು ಇಡೀ ಕರ್ನಾಟಕಕ್ಕೆ ಒಂದೇ ರೀತಿಯಾಗಿರದೆ ಪ್ರದೇಶವಾರು ವಿವಿಧ ರೀತಿಯಲ್ಲಿ ಬಳಕೆಯಲ್ಲಿದ್ದವು. ಎಂಬುದು ಶಾಸನಗಳಿಂದ ತಿಳಿದುಬರುತ್ತದೆ. ಕೋಲು,ಗಡಿಂಬ,ಘಳೆ ಒಂದೇ ಅರ್ಥದ ಜ್ಞಾತಿರೂಪಗಳು ಗುತ್ತೊಳಲ ಕೋಲು, ಹರಪ್ಪನಹಳ್ಳಿ ಶಾಸನ, ಅಣ್ಣಿಗೆರೆಯ ಕೋಲು, (ಮಲ್ಲಸಮುದ್ರದ ಶಾಸನ), ಭರಣದ ಕೋಲು (ಬಾಗೇವಾಡಿ ಶಾಸನ), ಐವತ್ತು ಗೇಣ ಗಡಿಂಬ (ನಾಗಮಂಗಲ ಶಾಸನ), ದಾನಚಿಂತಾಮಣಿ ಘಳೆ (ಬಿಜಾಪುರ ಮ್ಯೂಜಿಯಂ ಶಾಸನ) ಹೀಗೆ ನೂರಾರು ನೆಲ-ಹೊಲಗಳನ್ನು ಅಳೆಯುವ ಮಾಪನಗಳು ಕರ್ನಾಟಕದುದ್ದಕ್ಕೂ ದೊರೆಯುತ್ತವೆ ಎಂದು ಮಾಹಿತಿ ನೀಡಿದ್ದಾರೆ.

        ಈ ಕೋಲುಗಳನ್ನು ಸಾಮಾನ್ಯವಾಗಿ ಬಿದಿರಿನಿಂದ ಮಾಡಲಾಗುತ್ತಿತ್ತು. ತಮಿಳಿನ ಶಿಲಪ್ಪದಿಗಾರಂ ಕೃತಿಯಲ್ಲಿ ಸೋತ ರಾಜನ ರಾಜಕೊಡೆಯ ಕೋಲುಗಳನ್ನು ಕತ್ತರಿಸಿ ಅದರಿಂದ ಅಳತೆಗೋಲುಗಳನ್ನು ಮಾಡುತ್ತಿದ್ದರು ಎಂಬ ಮಾಹಿತಿ ದೊರಕುತ್ತದೆ. ಸದ್ಯ ನದಿಹರಳಹಳ್ಳಿಯ ಕೋಲಿನ ಪ್ರಮಾಣಗಳು ಗದ್ದೆಯನ್ನು ಅಳೆಯುವ ಮಾಪನಗಳಾಗಿವೆ. ಈ ಊರಲ್ಲಿ 10-11ನೆಯ ಶತಮಾನದ ಹೊತ್ತಿಗೆ ಭತ್ತದ ಗದ್ದೆಗಳಿದ್ದವು. ಪಕ್ಕದಲ್ಲಿ ತುಂಗಭದ್ರಾ ನದಿ ಇರುವುದರಿಂದ ಇದು ಸಹಜವೂ ಕೂಡ. ಚಿಕ್ಕದಾಗಿರುವ ಗದ್ದೆಗಳನ್ನು ಅಳತೆಯಲೆಂದೆ ಈ ರೀತಿಯ ಚಿಕ್ಕ ಪ್ರಮಾಣದ ಅಳತೆಗೋಲುಗಳನ್ನು ಇಲ್ಲಿಯ ಜನರು ತಯಾರಿಸಿಕೊಂಡಿದ್ದರು. ಮತ್ತು ಈ ಪ್ರಮಾಣಗಳು ರಾಜಸತ್ತೆಗೆ ಕಂದಾಯ ವಸೂಲಿ ಮಾಡುವಲ್ಲಿಯೂ ಸಹಾಯಕವಾಗಿದ್ದವು. ಇದೊಂದು ಹೊಸ ಶೋಧ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link