ತುಮಕೂರು:
ತಳ್ಳುವ ಗಾಡಿಗಳಿಂದ ಟ್ರಾಫಿಕ್ ಜಾಂ – ವ್ಯಾಪಾರ ಕುಸಿತ | ಮಳಿಗೆ ವರ್ತಕರ ಅಳಲು
ನಗರದ ಪ್ರಮುಖ ವಾಣಿಜ್ಯ ರಸ್ತೆಯಲ್ಲೊಂದಾದ ವಿವೇಕಾನಂದ ರಸ್ತೆಯಲ್ಲಿ(ಶಿರಾನಿ ರಸ್ತೆ) ಬೀದಿ ಬದಿ ವ್ಯಾಪಾರಸ್ಥರೆ ರಸ್ತೆಯ ಇಕ್ಕೆಲ್ಲಗಳನ್ನು ಅತಿಕ್ರಮಿಸಿರುವುದರಿಂದ ರಸ್ತೆ ಕಿರಿದಾಗಿ ಪದೇ-ಪದೇ ಟ್ರಾಫಿಕ್ ಜಾಮ್ ಉಂಟಾಗುವುದು ಒಂದೆಡೆಯಾದರೆ, ಸಾವಿರಾರು ರೂಪಾಯಿ ಬಾಡಿಗೆ ಕಟ್ಟಿ ಶಾಪಿಂಗ್ ಕಾಂಪ್ಲೆಕ್ಸ್‍ನಲ್ಲಿ ವಿವಿಧ ಅಂಗಡಿ ಮಳಿಗೆಗಳನ್ನು ತೆರೆದಿರುವವರು ವ್ಯಾಪಾರ ಕುಸಿತದಿಂದ ಚಿಂತೆಗೀಡಾಗಿದ್ದಾರೆ.
ಹೌದು ನಗರದ ಪ್ರಮುಖ ವಾಣಿಜ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಹಾಗೂ ವಾಣಿಜ್ಯ ರಸ್ತೆಯೂ ಆಗಿರುವ ವಿವೇಕಾನಂದ ರಸ್ತೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಪಡಿಸಿರುವುದು ಸರಿಯಷ್ಟೇ. ಆದರೆ ಅಭಿವೃದ್ಧಿಯಾದ 30 ಅಡಿ ರಸ್ತೆಯಲ್ಲಿ ಸುಗಮ – ಸಂಚಾರ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಸ್ತೆ ಇಕ್ಕೆಲಗಳಲ್ಲಿ ಫುಟ್‍ಪಾತ್ ಜೊತೆಗೆ ವಾಹನ್ ಪಾರ್ಕಿಂಗ್‍ಗೂ ವ್ಯವಸ್ಥೆ ಮಾಡಿದ್ದು, ಇದರೊಂದಿಗೆ ಬೀದಿ ಬದಿ ತಳ್ಳುವ ಗಾಡಿಗಳವರು ಪ್ರತಿನಿತ್ಯ ನೆಲೆಯಾಗುವುದು ಪಾಲಿಕೆಯಿಂದ ಲೈಸೆನ್ಸ್ ಪಡೆದು ತೆರಿಗೆ ಕಟ್ಟಿ ಅಧಿಕೃತ ವ್ಯಾಪಾರ ಮಾಡುತ್ತಿರುವವರಿಗೆ, ದ್ವಿಚಕ್ರ, ನಾಲ್ಕು ಚಕ್ರ ವಾಹನ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ.
ಎಂ.ಜಿ.ರಸ್ತೆ ಜಂಕ್ಷನ್‍ನಿಂದ ಅಶೋಕ ರಸ್ತೆ ಜಂಕ್ಷನ್‍ವರೆಗೆ ಸದಾ ಜನಜಂಗುಳಿ:
ಎಂ.ಜಿ.ರಸ್ತೆ ಜಂಕ್ಷನ್‍ನಿಂದ ಅಶೋಕ ರಸ್ತೆ ಜಂಕ್ಷನ್‍ವರೆಗಿನ ವಿವೇಕಾನಂದ ರಸ್ತೆಯಲ್ಲಿ ಸದಾ ಜನಜಂಗುಳಿಯಿಂದ ಕೂಡಿದ್ದು, ಕೆಎಸ್‍ಆರ್‍ಟಿಸಿ ಬಸ್ ಸ್ಟ್ಯಾಂಡ್ ಮೂಲಕ ಎಂಜಿ.ರಸ್ತೆ ಪ್ರವೇಶಪಡೆಯುವ ಸಂಪರ್ಕ ರಸ್ತೆ ಮುಚ್ಚಿರುವುದರಿಂದ ಸಾವಿರಾರು ವಿದ್ಯಾರ್ಥಿಗಳು,
ಜನರು ವಿವೇಕಾನಂದ ರಸ್ತೆಯನ್ನೇ ಎಂ.ಜಿ.ರಸ್ತೆ, ಹೊರಪೇಟೆ, ಜನರಲ್ ಕಾರಿಯಪ್ಪ ರಸ್ತೆ ಪ್ರವೇಶಕ್ಕೆ ಅವಲಂಬಿಸಿದ್ದಾರೆ. ಈ ಜನಜಂಗುಳಿಯ ನಡುವೆಯೇ ರಸ್ತೆಯಲ್ಲೇ ಟೇಬಲ್ ಕುರ್ಚಿ, ಮಂಚ, ಛತ್ರಿ ಎಲ್ಲವನ್ನು ಇಟ್ಟು ಬೀದಿ ಬದಿ ವ್ಯಾಪಾರಿಗಳು ವಹಿವಾಟು ನಡೆಸುತ್ತಿದ್ದು,
ಕಾರುಗಳು ಎದುರು- ಬದಿರು ಬಂದಾಗ ಒಂದು ಪಕ್ಕಕ್ಕೆ ಸರಿದ ಮೇಲೆ ಮತ್ತೊಂದು ನಿಂತು ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನಗಳಿಗೂ ಇದೇ ಅನಾನೂಕೂಲತೆ ಇದೆ.
60ಕ್ಕೂ ಅಧಿಕಮಳಿಗೆಗಳು:
ಮಹದೇವಸ್ಟೋರ್‍ನಿಂದ, ಅಶೋಕರಸ್ತೆವರೆಗೆ ಜೈ ಭಾರತ್, ಸಂತೃಪ್ತಿ, ಶಾರದಾ, ಸಿಂಧೂರ್ ಟೆಕ್ಸ್‍ಟೈಲ್ ಕಾಂಪ್ಲೆಕ್ಸ್, ಮಾಕಂ ಛತ್ರದ ಮಳಿಗೆ ಸಂಕೀರ್ಣ, ಸುಧಾ ಲಾಡ್ಜ್ ಸೇರಿ ಹಲವು ಕಟ್ಟಡಗಳಲ್ಲಿ 60ಕ್ಕೂ ಅಧಿಕ ಮಳಿಗೆಗಳಿಂದ ಅಧಿಕೃತ ಮಳಿಗೆಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರುತಮ್ಮ ಅಂಗಡಿ ತೆರೆದಿದ್ದಾರೆ.
ಮಳಿಗೆ ವ್ಯಾಪಾರಸ್ಥರ ಅಳಲು:
ಇದರಿಂದಾಗಿ ದೊಡ್ಡ ಮೊತ್ತದಲ್ಲಿ ವ್ಯಾಪಾರ ಮಾಡಲು ಬರುತ್ತಿದ್ದ ಗ್ರಾಹಕರೇ ನಮ್ಮ ಅಂಗಡಿಗೆ ಬರದಂತಾಗಿದ್ದು, ನಿಮ್ಮ ಅಂಗಡಿ ರಸ್ತೆ ಪ್ರವೇಶ ಪಡೆಯುವುದೇ ಕಷ್ಟ.
ನಾವ್ಯಾಕೆ ಕಷ್ಟಪಟ್ಟು ಅಲ್ಲಿಗೆ ಬಂದು ವ್ಯವಹಾರ ಮಾಡಬೇಕು ಎಂದು ಎಷ್ಟೋ ಹಳೇ ಗ್ರಾಹಕರು ಬರುವುದನ್ನೇ ಬಿಟ್ಟಿದ್ದಾರೆ ಎಂದು ಹಿರಿಯ ವರ್ತಕರಾದ ಆರ್.ನಾಗರಾಜು ಆದಿಯಾಗಿ ಹಲವು ವರ್ತಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಕಿವಿಗೊಡದಿರಲು ಕಾರಣವೇನು?:
ಈ ರೀತಿ ರಸ್ತೆ ಅತಿಕ್ರಮಣವನ್ನು ಯಾರು ತಡೆಯುತ್ತಿಲ್ಲ. ತುಮಕೂರು ಮಹಾನಗರಪಾಲಿಕೆ ಆಡಳಿತ, ಅಧಿಕಾರಿಗಳಿಗೆ ಐದಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ. ಅನಧಿಕೃತ ವ್ಯಾಪಾರಿಗಳನ್ನು ಪ್ರಶ್ನಿಸದ ಸ್ಥಿತಿ ನಿರ್ಮಾಣವಾಗಿದೆ.
ಇದೇ ರಸ್ತೆಯಿಂದ ಮುಂದಕ್ಕೆ ಜನರಲ್ ಕಾರಿಯಪ್ಪ ರಸ್ತೆಯ ಪ್ರವೇಶದ್ವಾರದಲ್ಲಿ ಸಂಚಾರಿ ಠಾಣೆ ಇದ್ದು, ಪೊಲೀಸರು ಕಂಡು ಕಾಣದಂತಿದ್ದಾರೆ. ಪಾಲಿಕೆ ಜನಪ್ರತಿನಿಧಿಗಳು ತಲೆ ಕೆಡಿಸಿಕೊಳ್ಳುತ್ತಿಲ್ಲ. ರಾಜಕೀಯ ಒತ್ತಡ, ಹಣ ಇದರ ಹಿಂದೆ ಇದೆಯಾ ಎನ್ನುವ ಶಂಕೆ ಮೂಡಿದೆ ಎಂಬ ಸಂದೇಹವನ್ನು ಮಳಿಗೆ ವರ್ತಕರು ವ್ಯಕ್ತಪಡಿಸಿದ್ದಾರೆ.
ಸ್ಮಾರ್ಟ್ ಸಿಟಿಯಾಗುತ್ತಿರುವ ತುಮಕೂರು ನಗರಕ್ಕೆ ಕಪ್ಪು ಚುಕ್ಕೆಯಂತೆ ವಿವೇಕಾನಂದ ರಸ್ತೆ ಮಾರ್ಪಟ್ಟಿದೆ. ರಸ್ತೆಯ ಅರ್ಧಭಾಗದಷ್ಟು ಜಾಗ ಪುಟ್‍ಪಾತ್, ಬೀದಿ ಬದಿ ವ್ಯಾಪಾರಕ್ಕೆ ಮೀಸಲಾಗಿದ್ದು, ಸುಗಮ ವಾಹನ ಸಂಚಾರಕ್ಕೆ ಆಸ್ಪದವೇ ಇಲ್ಲವಾಗಿದೆ.
ಬೀದಿ ಬದಿ ವ್ಯಾಪಾರಸ್ಥರಿಗೆ ಸ್ಮಾರ್ಟ್‍ಸಿಟಿಯಡಿ ಅಭಿವೃದ್ಧಿ ಪಡಿಸಿರುವ ಕನ್ಸರ್‍ವೆನ್ಸಿ ಜಾಗದಲ್ಲಿ ಅವಕಾಶ ಕಲ್ಪಿಸಿ. ಅಧಿಕೃತ ವರ್ತಕರು, ಬೀದಿ ಬದಿ ವ್ಯಾಪಾರಿಗಳು ಸಂಘರ್ಷಕ್ಕಿಳಿಯದಂತೆ ಪರಿಸ್ಥಿತಿ ನಿರ್ಮಿಸುವುದು ನಗರಾಡಳಿತದ ಜವಾಬ್ದಾರಿ.
-ಎಸ್.ಆರ್.ಶ್ರೀಧರಮೂರ್ತಿ, ಚಿನ್ನಾಭರಣ ವರ್ತಕ ಹಾಗೂ ಟೂಡಾ ಮಾಜಿ ಅಧ್ಯಕ್ಷ.
ಬೀದಿ ಬದಿ ವ್ಯಾಪಾರಿಗಳಿಗೂ ಪ್ರತ್ಯೇಕ ಸ್ಥಳ ಕಲ್ಪಿಸಿ
ಕೋವಿಡ್ ಲಾಕ್‍ಡೌನ್ ಸಂಕಷ್ಟದಿಂದ ಅನೇಕರು ಉದ್ಯೋಗ ಕಳೆದುಕೊಂಡು ಬೀದಿ ಬದಿ ವ್ಯಾಪಾರಕ್ಕಿಳಿದಿದ್ದಾರೆ. ಇವರ ಬದುಕು ಸಾಗಿಸಬೇಕಾಗಿರುವುದು ಅನಿವಾರ್ಯವಾಗಿರುವುದರಿಂದ ಇಂತಹ ವ್ಯಾಪಾರ ಮಾಡಲೆಂದೇ ಅಭಿವೃದ್ದಿ ಪಡಿಸಲಾದ ಎಂ.ಜಿ.ರಸ್ತೆಯಲ್ಲಿರುವ ಕನ್ಸರ್‍ವೆನ್ಸಿಗಳಿಗೆ ಅವರನ್ನು ಸ್ಥಳಾಂತರಿಸಬೇಕು ಎಂಬುದು ವರ್ತಕರೇ ಸಲಹೆ ನೀಡುತ್ತಾರೆ.
ಆದರೆ ನಗರಾಡಳಿತ ಮಾತ್ರ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗುತ್ತಿರುವುದು ಬೀದಿ ಬದಿ-ಮಳಿಗೆಗಳ ವರ್ತಕರ ಮಧ್ಯೆಯೇ ಸಾಮರಸ್ಯ ಹದಗೆಡಲು ಕಾರಣವಾಗಿದೆ.
– ಎಸ್.ಹರೀಶ್ ಆಚಾರ್ಯ ತುಮಕೂರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ