ದಾವಣಗೆರೆ:
ಕಾರ್ಮಿಕರಿಗೆ ಕೊರೊನಾ ಸೋಂಕು ನಿಯಂತ್ರಣ ಕ್ರಮವಾಗಿ ಘೋಷಿಸಲಾಗಿದ್ದ ಲಾಕ್‍ಡೌನ್ ಕಾಲಾವಧಿಯ ಪೂರ್ಣ ವೇತನ ನೀಡಬೇಕು, ಸೋಂಕನ್ನೇ ನೆಪಮಾಡಿಕೊಂಡು ಕೆಲಸ ನಿರಾಕರಣೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಜಯದೇವ ವೃತ್ತದಿಂದ ಜೆಸಿಟಿಯು ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಹೊರಟ ವಿವಿಧ ಸಂಘಟನೆಗಳ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಎಸಿ ಕಚೇರಿಗೆ ತೆರಳಿ, ಉಪವಿಭಾಗಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ಹಿರಿಯ ಮುಖಂಡ ಎಚ್.ಕೆ.ರಾಮಚಂದ್ರಪ್ಪ, ಲಾಕ್ ಡೌನ್ ಕಾಲಾವಧಿಯ ಪೂರ್ಣ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ದೇಶಾದ್ಯಂತ ಎಲ್ಲಾ ಕಾರ್ಖಾನೆ ಗೇಟ್, ಕೆಲಸ ಮಾಡುವ ಪ್ರದೇಶ, ವಾಸಸ್ಥಳಗಳ ಬಳಿ ದೈಹಿಕ ಅಂತರದೊಂದಿಗೆ ಸುರಕ್ಷಾ ಕ್ರಮಗಳನ್ನು ಪಾಲಿಸಿಕೊಂಡು ಜೆಸಿಟಿಯು ನೇತೃತ್ವದಲ್ಲಿ ಕಾರ್ಮಿಕರು, ಶ್ರಮಿಕ ವರ್ಗ ಪ್ರತಿಭಟನೆ ನಡೆಸುತ್ತಿದೆ ಎಂದರು.
ಕೊರೋನಾ ವೈರಸ್ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರ ಪ್ರಕಟಿಸಿದ 20 ಲಕ್ಷ ಕೋಟಿ ಪ್ಯಾಕೇಜ್ ಹಿಂದಿನ ಬಜೆಟ್ ಘೋಷಣೆ ಹೊರತು ಬೇರೇನೂ ಅಲ್ಲ. ಕೊರೋನಾ ಸಂದರ್ಭದಲ್ಲೇ ಕಾರ್ಮಿಕ ವಿರೋಧಿ, ರೈತ ವಿರೋಧಿ ಕಾಯ್ದೆ ಜಾರಿಗೊಳಿಸುತ್ತಿದೆ. ವೈರಸ್ ಸಂಕಷ್ಟದಲ್ಲೇ ಕಾರ್ಮಿಕ ವಿರೋಧಿ, ರೈತ ವಿರೋಧಿ ಕಾಯ್ದೆ ಜಾರಿಗೊಳಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾರ್ವಜನಿಕ ಉದ್ಯಮಗಳ ಖಾಸಗೀಕರಣಕ್ಕೂ ಕೇಂದ್ರ ಕೈ ಹಾಕಿದೆ. ಲಾಕ್‍ಡೌನ್‍ನಿಂದ ಕಂಗಾಲಾದ ಕಾರ್ಮಿಕರ ಹಿತರಕ್ಷಣೆಗೆ ಏನೊಂದೂ ಕ್ರಮ ಕೈಗೊಳ್ಳದ ಸರ್ಕಾರ ಮಾತ್ರ ದುಡಿಯುವ ವರ್ಗವನ್ನು ಸಂಪೂರ್ಣ ಕಡೆಗಣಿಸಿದೆ. ಸರ್ಕಾರಿ ನೌಕರರಿಗೆ, ಪಿಂಚಣಿದಾರರಿಗೆ ಡಿಎ ಕಡಿತ ರದ್ಧುಪಡಿಸಬೇಕು. ಎನ್‍ಪಿಎಸ್ ರದ್ಧುಪಡಿಸಿ, ನಿಶ್ಚಿತ ಪಿಂಚಣಿ ಮರು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ವಿದ್ಯುತ್ ತಿದ್ದುಪಡಿ ಮಸೂದೆ 2020 ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ಕೈಬಿಡಬೇಕು. ಎಲ್ಲಾ ಸ್ಕೀಂ ಕೆಲಸಗಾರರ ಗೌರವಧನ ಹೆಚ್ಚಿಸಬೇಕು. ಪ್ರತಿ ವ್ಯಕ್ತಿಗೂ 6 ತಿಂಗಳವರೆಗೆ ತಲಾ 10 ಕೆಜಿ ಆಹಾರ ಧಾನ್ಯ ನೀಡಬೇಕು. ಕೋವಿಡ್-19ನ್ನು ವೈದ್ಯಕೀಯ ತುರ್ತು ಪರಿಸ್ಥಿತಿಯೆಂದು ಪರಿಗಣಿಸಿ, ಕಾನೂನು ಸುವ್ಯವಸ್ಥೆಯ ವಿಷಯವಾಗಿ ಪರಿಗಣಿಸಬಾರದು ಎಂದು ಆಗ್ರಹಿಸಿದರು.
ಕೊರೊನಾ ಸೋಂಕನ್ನೇ ನೆಪ ಮಾಡಿಕೊಂಡು ಆರ್ಥಿಕ ಸಂಕಷ್ಟದ ಹೆಸರಿನಲ್ಲಿ ಕಾರ್ಮಿಕರ ಕೆಲಸ ನಿರಾಕರಣೆ ಮಾಡುತ್ತಿರುವ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕಾರ್ಪೋರೇಟ್ ಬಂಡವಾಳ ಪರ ಕಾರ್ಮಿಕ ಕಾನೂನು ತಿದ್ದುಪಡಿ ಕೈಬಿಟ್ಟು, ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಬೇಕು. ಕೊರೋನಾ ಫ್ರಂಟ್ ಲೈನ್ ವಾರಿಯರ್ಸ್ ಸೇವೆ ಕಾಯಂಗೊಳಿಸಲಿ. ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಪ್ರತಿ ಕುಟುಂಬಕ್ಕೂ 6 ತಿಂಗಳ ಕಾಲ ಮಾಸಿಕ 7500 ರು. ನೇರ ನಗದು ವರ್ಗಾವಣೆ ಮಾಡಬೇಕು. ಖಾತರಿ ಯೋಜನೆಯಡಿ 200 ದಿನಕ್ಕೆ ಕೆಲಸ ಹೆಚ್ಚಿಸಬೇಕು. ವಲಸೆ ಕಾರ್ಮಿಕರು, ನಗರ ಪ್ರದೇಶಕ್ಕೂ ಖಾತರಿ ಯೋಜನೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜೆಸಿಟಿಯು ಮುಖಂಡರಾದ ಮಂಜುನಾಥ ಕೈದಾಳೆ, ಬಿ.ಎಂ.ಕರಿಬಸಯ್ಯ, ಆನಂದರಾಜ, ಆವರಗೆರೆ ಚಂದ್ರು, ಬಿ.ಎಸ್.ಚಂದ್ರಶೇಖರಯ್ಯ, ಕೆ.ಎಚ್.ಆನಂದರಾಜ, ಕರಿಬಸಪ್ಪ, ಬಿ.ಎಸ್.ನಾಗರಾಜಾಚಾರ್, ಎನ್.ಮುತ್ತುರಾಜ, ತಿಪ್ಪೇಸ್ವಾಮಿ, ನಾಗರಾಜಾಚಾರ್, ಆವರಗೆರೆ ವಾಸು, ಶ್ರೀನಿವಾಸ, ಎಚ್.ಎನ್.ಗಂಗಾಧರ್, ಹುಬ್ಬಳ್ಳಿ ಬಸವರಾಜ, ಜಬೀನಾ ಖಾನಂ, ಚಂದ್ರಶೇಖರ, ಗದಿಗೇಶ ಪಾಳೇದ, ನರೇಗಾ ರಂಗನಾಥ, ಕೆ.ಬಾಲಾಜಿ, ಕೈದಾಳೆ ರವಿಕುಮಾರ, ರಮೇಶ, ಆವರಗೆರೆ ರಂಗನಾಥ, ಐರಣಿ ಚಂದ್ರು, ರೈತ ಮುಖಂಡರಾದ ಹುಚ್ಚವ್ವನಹಳ್ಳಿ ಮಂಜುನಾಥ್, ಗುಮ್ಮನೂರು ಬಸವರಾಜ್, ಕೈದಾಳೆ ರವಿಕುಮಾರ್, ಕಾಡಜ್ಜಿ ಪ್ರಕಾಶ್, ಕೋಲ್ಕುಂಟೆ ಉಚ್ಚೆಂಗಪ್ಪ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
