ಚಳ್ಳಕೆರೆ
ಕಳೆದ ಹಲವಾರು ವರ್ಷಗಳ ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಗ್ರಾಮೀಣ ಭಾಗದ ಜನರಿಗೆ ಉದ್ಯೋಗವನ್ನು ನೀಡುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಚೆಕ್ ಡ್ಯಾಂಗಳನ್ನು ನಿರ್ಮಿಸಿ ದುಡಿಯುವ ಕೈಗಳಿಗೆ ಕೂಲಿ ಹಣವನ್ನು ಪಾವತಿಸುವ ಯೋಜನೆಯನ್ನು ಜಾರಿಗೆ ತಂದಿದ್ದು, ಅನುಷ್ಠಾನಗೊಳಿಸಬೇಕಾದ ಅಧಿಕಾರಿಗಳೇ ಯೋಜನೆಗಳನ್ನು ಪ್ರಾರಂಭಿಸದೆ ಸರ್ಕಾರ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪ ಕೇಳಿ ಬಂದಿದೆ.
ತಳಕು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಎರಡು ಗ್ರಾಮಗಳಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡದೆ ಕೂಲಿಹಣ ಮತ್ತು ಸಾಮಾಗ್ರಿ ಹಣವನ್ನು ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಇಂಜಿನಿಯರ್ ಪಡೆದಿದ್ದಾರೆಂದು ಆರೋಪಿಸಲಾಗಿದೆ. ಗ್ರಾಮದ ಮುಖಂಡ ತಳಕು ಓಬಣ್ಣ ಈ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿದ್ದು,
ಈ ಬಗ್ಗೆ ತಳಕು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಎನ್.ಓಬಳೇಶ್ ಸಹ ಅಧಿಕಾರಿಗಳು ಕಾಮಗಾರಿಗಳನ್ನು ಅನುಷ್ಠಾನಗೊಳಿಸದೆ ಬಿಲ್ ಪಡೆದ ಬಗ್ಗೆ ಸಾರ್ವಜನಿಕ ಆರೋಪವನ್ನು ಮನಗಂಡು ತನಿಖೆ ನಡೆಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಕಳೆದ ತಿಂಗಳ ಅಕ್ಟೋಬರ್ 19ರಂದು ದೂರು ನೀಡಿರುತ್ತಾರೆ. ದೂರು ಸ್ವೀಕರಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಭಾಮ ಕೂಡಲೇ ಜಿಲ್ಲಾ ಪಂಚಾಯಿತಿಯ ಓಂಬುಡ್ಸ್ ಮನ್ ಎಂ.ಬಿ.ಶಂಕರಪ್ಪ ಇವರಿಗೆ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿ ವರದಿ ನೀಡಲು ಸೂಚಿಸಿರುತ್ತಾರೆ.
ತಳಕು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ತಿಮ್ಮನಹಳ್ಳಿ ಮಂಜುಳಾ ಎಂಬುವವರ ಜಮೀನು ಪಕ್ಕದ ಸರ್ಕಾರಿ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಾಣಕ್ಕೆ 2 ಲಕ್ಷ, ತಳಕು ಲಂಬಾಣಿ ಹಟ್ಟಿ ಬಳಿಯ ಸರ್ಕಾರಿ ಹಳ್ಳದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ 6 ಲಕ್ಷ ಹಣವನ್ನು ಈಗಾಗಲೇ ಬಿಲ್ ಮೂಲಕ ಸರ್ಕಾರದಿಂದ ಪಡೆದಿದ್ದು, ಕಾಮಗಾರಿ ಮಾತ್ರ ನಡೆದಿಲ್ಲ. ಆದರೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜನಸಂಪರ್ಕ ಸಭೆ ನ.13ರ ಬುಧವಾರ ತಳಕು ಗ್ರಾಮದಲ್ಲಿ ಆಯೋಜಿಸಿದ್ದು, ಈ ಬಗ್ಗೆ ಮನಗಂಡ ಅಧಿಕಾರಿಗಳು ತುರಾತುರಿಯಲ್ಲಿ ಕಾಮಗಾರಿಯನ್ನು ಪ್ರಾರಂಭಿಸಿದ್ದಾರೆ ಎಂಬುವುದು ಸ್ಥಳೀಯ ಆರೋಪವಾಗಿದೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ತಳಕು ಓಬಣ್ಣ, ಎರಡೂ ಕಾಮಗಾರಿಯನ್ನು ಪ್ರಾರಂಭಿಸದೆ ಹಣ ಪಡೆದ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಜಾಗೃತರಾಗದೆ ಸಿಇಒರವರ ಜನಸಂಪರ್ಕ ಸಭೆ ಹಿನ್ನೆಲೆಯಲ್ಲಿ ಆತುರ ಆತೂರವಾಗಿ ಕಳೆದ ಒಂದು ದಿನದಿಂದ ಎರಡೂ ಕಡೆಯ ಕಾಮಗಾರಿಯನ್ನು ಆರಂಭಿಸಿದ್ದಾರೆ. ಆದರೆ, ಎಲ್ಲೂ ಸಹ ಗುಣಮಟ್ಟ ಕಾಣುತ್ತಿಲ್ಲ. ಕಾಮಗಾರಿಯನ್ನು ಪೂರೈಸದೆ ಹಣವನ್ನು ಪಡೆದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ಧಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ