ಶಾಲೆಯನ್ನು ತೊರೆದ ಮಕ್ಕಳಿಗೆ ಮತ್ತೆ ಕರೆತಂದು ಶಿಕ್ಷಣ ನೀಡುವ ಕಾರ್ಯ ಶ್ಲಾಘನೀಯ

0
27

ಚಳ್ಳಕೆರೆ

          ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು’ ಮಕ್ಕಳು ವಿದ್ಯಾವಂತರಾದರೆ ಮಾತ್ರ ಬದುಕಿಗೆ ಅರ್ಥವಿರುತ್ತದೆ ಎಂಬ ಕಟುಸತ್ಯವನ್ನು ಎಲ್ಲರೂ ಅರಿಯಬೇಕಿದೆ. ಎಲ್ಲಾ ಮಕ್ಕಳಿಗೆ ಸಮನಾಂತರ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಶಾಲೆ ಬಿಟ್ಟ ಮಕ್ಕಳನ್ನು ಸಹ ಪುನಃ ಶಾಲೆಗೆ ಸೇರಿಸುವ ಅಂದೋಲನಕ್ಕೆ ಚಾಲನೆ ನೀಡಿರುವುದು ಸಂತಸ ವಿಷಯವೆಂದು ತಾಲ್ಲೂಕು ಪಂಚಾಯಿತಿ ಸದಸ್ಯ ಟಿ.ಸುನಂದಮ್ಮ ತಿಳಿಸಿದರು.

        ಅವರು, ಬುಧವಾರ ತಾಲ್ಲೂಕಿನ ಹಿರೇಹಳ್ಳಿ ಕ್ಲಸ್ಟರ್ ವಿಭಾಗದ ಮಕ್ಕಳ ಗ್ರಾಮ ಸಭೆ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ಶಾಲೆಯನ್ನು ತೊರೆದ ಮಕ್ಕಳಿಗೆ ಮತ್ತೆ ಶಾಲೆಗೆ ಸೇರುವ ಅವಕಾಶವಿರಲಿಲ್ಲ. ಆದರೆ, ಸರ್ಕಾರ ಎಲ್ಲಾ ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಮಕ್ಕಳ ಗ್ರಾಮ ಸಭೆ ಮೂಲಕ ಪೋಷಕರಲ್ಲಿ ಜಾಗೃತಿ ಉಂಟು ಮಾಡುತ್ತಿರುವುದು ಹೆಚ್ಚು ಸಂತಸ ತಂದಿದೆ ಎಂದು ತಿಳಿಸಿದರು.

         ಪ್ರಾಸ್ತಾವಿಕವಾಗಿ ಮಾತನಾಡಿದ ಸಿಆರ್‍ಪಿ ಎನ್.ಮಾರಣ್ಣ, ಹಿರೇಹಳ್ಳಿ ಕ್ಲಸ್ಟರ್ ವಿಭಾಗದಲ್ಲಿ ಒಟ್ಟು 11 ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, 100ಕ್ಕೂ ಹೆಚ್ಚು ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡುವ ಜವಾಬ್ದಾರಿ ನಿರ್ವಹಿಸುತ್ತಿದ್ಧಾರೆ. ಆದರೆ, ಹಲವಾರು ಕಾರಣದಿಂದಾಗಿ ಮಕ್ಕಳು ಶಾಲೆಗೆ ಗೈರು ಹಾಜರಾಗಿ ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ಧಾರೆ. ಈ ಬಗ್ಗೆ ಪೋಷಕರಲ್ಲೂ ಸಹ ಜಾಗೃತಿ ಉಂಟು ಮಾಡಲು ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.

        ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಟಿ.ಬಸವರಾಜು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ಉತ್ತಮ ಶಿಕ್ಷಣವನ್ನು ಪಡೆದಾಗ ಮಾತ್ರ ಇಂತಹ ಶ್ರಮಗಳು ಸಾರ್ಥಕವಾಗುತ್ತವೆ. ಮಕ್ಕಳು ಶಾಲೆಯನ್ನು ಕೈಬಿಡಲು ಪೋಷಕರೇ ಪರೋಕ್ಷವಾಗಿ ಕಾರಣವಾಗುತ್ತಾರೆ. ಪೋಷಕರು ಜಾಗೃತಿ ವಹಿಸಿದಲ್ಲಿ ಮಕ್ಕಳು ಶಾಲೆಗೆ ಗೈರು ಹಾಜರಾಗಲು ಸಾಧ್ಯವಾಗುದಿಲ್ಲ. ಈ ನಿಟ್ಟಿನಲ್ಲಿ ಎಲ್ಲಾ ಪೋಷಕರು ದಯಮಾಡಿ ಮಕ್ಕಳು ಶಾಲೆಯಿಂದ ಹೊರ ಉಳಿಯದಂತೆ ನೋಡಿಕೊಳ್ಳಬೇಕಿದೆ. ಶಿಕ್ಷಣ ಇಲಾಖೆಯ ಈ ಕಾರ್ಯಕ್ರಮ ಉತ್ತಮ ಯಶಸ್ಸು ಕಾಣಲಿ ಎಂದು ಶುಭ ಹಾರೈಸುವುದಾಗಿ ತಿಳಿಸಿದರು.

         ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ.ಕೆ.ರಾಜಣ್ಣ, ಸದಸ್ಯರಾದ ಟಿ.ರಮೇಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜೆ.ಆರ್.ಮಂಜಪ್ಪ, ಶಿಕ್ಷಕಿಯರಾದ ಸಿ.ವಿ.ಮಂಜುಶ್ರೀ, ವೈ.ನಾಗರಾಜು, ಪಿಡಿಒ ಚಂದ್ರಣ್ಣ, ತಿಪ್ಪಮ್ಮ, ದುರುಗಪ್ಪ, ಓಬಣ್ಣ, ಬೋರಯ್ಯ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here