ದಾವಣಗೆರೆ :
ಪ.ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ(ಎಸ್‍ಸಿಪಿ/ಟಿಎಸ್‍ಪಿ)ಗಳಡಿ ಸರ್ಕಾರ ನೀಡಿರುವ ಗುರಿಯನ್ನು ನಿಗದಿತ ಸಮಯದೊಳಗೆ ಸಾಧಿಸುವ ನಿಟ್ಟಿನಲ್ಲಿ ಇಲಾಖೆಗಳು ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಂಡು ಪ್ರಗತಿ ಸಾಧಿಸಬೇಕೆಂದು ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ವಿವಿಧ ಇಲಾಖೆಗಳಿಂದ ಪ.ಜಾತಿ ಉಪಯೋಜನೆ/ಗಿರಿಜನ ಉಪಯೋಜನೆ ಅಧಿನಿಯಮ 2013 ರ ಅಡಿ ಅನುಷ್ಟಾನಗೊಳಿಸಿತ್ತಿರುವ ಅಭಿವೃದ್ದಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಲು ಇಂದು ಅಪರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪಿಡಬ್ಲ್ಯುಡಿ, ಕೈಮಗ್ಗ ಮತ್ತು ಜವಳಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಕಾರ್ಮಿಕ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ರೇಷ್ಮೆ, ಮೀನುಗಾರಿಕೆ, ಆಹಾರ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಎಸ್‍ಸಿಪಿ, ಟಿಎಸ್‍ಪಿ ಯೋಜನೆಯಡಿ ಯಾವ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ಎಷ್ಟು ಗುರಿ ಮತ್ತು ಸಾಧನೆ ಮಾಡಲಾಗಿದೆ ಎಂಬ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಖಜಾನೆ-2 ಮೂಲಕ ಎಸ್‍ಸಿಪಿ/ಟಿಎಸ್‍ಪಿ ಯೋಜನೆಯನ್ನೂ ಅನುಷ್ಟಾನಗೊಳಿಸಲಾಗುತ್ತಿದೆ. ಕೆ2 ಅನುಷ್ಟಾನದಲ್ಲಿ ಏನಾದರೂ ಅಡಚಣೆಗಳಿದ್ದರೆ ಶೀಘ್ರದಲ್ಲಿ ಸರಿಪಡಿಸಕೊಳ್ಳಬೇಕು. ಯೋಜನೆ ಅನುಷ್ಟಾನಕ್ಕೆ ಅಗತ್ಯವಾದ ಸಾಫ್ಟ್‍ವೇರ್ ಸೇರಿದಂತೆ ನಿಗದಿತ ಗುರಿಗೆ ಆರ್ಥಿಕ ಮತ್ತು ಭೌತಿಕ ಅನುಷ್ಟಾನಕ್ಕೆ ಅಗತ್ಯವಾದ ಎಲ್ಲ ಪೂರ್ವ ಸಿದ್ದತೆಗಳನ್ನು ಮಾಡಿಟ್ಟುಕೊಂಡಿರಬೇಕು. ಅನುದಾನ ಬಿಡುಗಡೆಯಾಗಿಲ್ಲವೆಂದು ಸುಮ್ಮನೆ ಕೂರದೇ ನೀಡಲಾದ ನಿಗದಿತ ಭೌತಿಕ ಗುರಿ ಸಾಧನೆಯನ್ನು ಸಾಧಿಸಿ, ಅನುದಾನ ಬಿಡುಗಡೆಯಾದ ತಕ್ಷಣ ಆರ್ಥಿಕ ಪ್ರಗತಿ ಸಾಧಿಸಬೇಕೆಂದು ಸೂಚಿಸಿದರು.
