ಚಿತ್ರದುರ್ಗ:
ಸರ್ಕಾರದ ಯಾವುದೆ ಯೋಜನೆಗಳನ್ನು ಪಡೆದುಕೊಳ್ಳಲು ಆಧಾರ್ ಕಾರ್ಡ್ ಕಡ್ಡಾಯವಾಗಿರುವುದರಿಂದ ಆಧಾರ್ ಕಾರ್ಡ್‍ನಲ್ಲಿರುವ ತಪ್ಪುಗಳನ್ನು ಅರ್ಜಿ ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಬೇಕಾಗಿರುವುದರಿಂದ ಅರ್ಜಿ ಪಡೆಯುವುದಕ್ಕಾಗಿಯೇ ಸೂರ್ಯ ಉದಯಿಸುವ ಮುನ್ನ ಬೆಳ್ಳಂಬೆಳ್ಳಿಗೆ ತಾಲೂಕು ಕಚೇರಿ ಎದುರು ದಿನನಿತ್ಯವೂ ನೂರಾರು ಮಹಿಳೆಯರು ಹಾಗೂ ಪುರಷರು ಸಾಲುಗಟ್ಟಿ ನಿಲ್ಲುತ್ತಿದ್ದರೂ ಅಧಿಕಾರಿಗಳ್ಯಾರು ಈ ಸಮಸ್ಯೆಗೆ ಇನ್ನು ಪರಿಹಾರ ಕಂಡುಕೊಳ್ಳುವ ಮನಸ್ಸು ಮಾಡುತ್ತಿಲ್ಲ.
ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಮಹಿಳೆಯರು ಕಳೆದ ಒಂದೆರಡು ತಿಂಗಳಿನಿಂದ ಪ್ರತಿನಿತ್ಯವೂ ತಾಲೂಕು ಕಚೇರಿಗೆ ಆಗಮಿಸಿ ಸಾಲಿನಲ್ಲಿ ನಿಲ್ಲಬೇಕು. ದಿನಕ್ಕೆ ಕೇವಲ ಮೂವತ್ತರಿಂದ ನಲವತ್ತು ಅರ್ಜಿಗಳನ್ನು ಮಾತ್ರ ವಿತರಿಸುತ್ತಾರೆ. ಹಾಗಾಗಿ ಅರ್ಜಿ ಸಿಗದೆ ನಿರಾಶರಾಗುವವರು ವಿಧಿಯಿಲ್ಲದೆ ಮತ್ತೆ ಮರುದಿನ ಬಂದು ಸಾಲಿನಲ್ಲಿ ನಿಲ್ಲಲೇಬೇಕು.
ಆನ್‍ಲೈನ್ ಮೂಲಕ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ತಮಗೆ ವಿದ್ಯಾರ್ಥಿವೇತನ ಸಿಕ್ಕರೂ ಆಧಾರ್‍ಕಾರ್ಡ್‍ನಲ್ಲಿ ತಪ್ಪುಗಳಿದ್ದರೆ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವುದಿಲ್ಲ. ಹೀಗೆ ಇನ್ನು ಹತ್ತು ಹಲವಾರು ಯೋಜನೆಗಳಿಗಾಗಿ ಆಧಾರ್ ಕಾರ್ಡ್ ಕಡ್ಡಾಯವಾಗಿರುವುದರಿಂದ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಸರತಿ ಸಾಲಿನಲ್ಲಿ ನಿಂತು ಅರ್ಜಿ ಪಡೆದು ಭರ್ತಿ ಮಾಡಿ ಮತ್ತೊಂದು ಕಡೆ ಎಂಟ್ರಿ ಮಾಡಿಸಲು ಸಾಲಿನಲ್ಲಿ ನಿಲ್ಲುವುದು ನಗರ ಹಾಗೂ ಗ್ರಾಮೀಣರಿಗೆ ದಿನನಿತ್ಯದ ವನವಾಸವಾಗಿದೆ.
ಹಳ್ಳಿಗಾಡಿನಿಂದ ಬರುವ ಮಹಿಳೆಯರಲ್ಲಿ ಕೆಲವರು ಸೊಂಟದಲ್ಲಿ ಹಸುಗೂಸನ್ನು ಹೊತ್ತು ತರುತ್ತಾರೆ. ಇನ್ನು ಕೆಲವರು ಚಿಕ್ಕಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ಯಾರು ಇಲ್ಲದ ಕಾರಣ ಜೊತೆಯಲ್ಲಿ ಕರೆತಂದು ಅರ್ಜಿಗಾಗಿ ಕಾದು ಕಾದು ಸುಸ್ತಾಗಿ ನೆಲದ ಮೇಲೆ ಮಣ್ಣಿನಲ್ಲಿಯೇ ಕುಳಿತುಬಿಡುತ್ತಾರೆ. ವಯಸ್ಸಾದವರು ಅರ್ಜಿಯ ಸಹವಾಸವೇ ಬೇಡ ಎಂದು ತಾಲೂಕು ಕಚೇರಿಯ ಸಿಬ್ಬಂದಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಆಧಾರ್ ಕಾರ್ಡ್‍ನಲ್ಲಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅರ್ಜಿಗಾಗಿ ಕಾಯುವವರ ಸಂಖ್ಯೆ ದಿನದಿಂದ ದಿನ ರೈಲು ಬೋಗಿಯಂತೆ ಉದ್ದವಾಗುತ್ತಿದೆ. ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ ಇನ್ನು ಮೂರ್ಕಾಲ್ಕು ಕೌಂಟರ್‍ಗಳನ್ನು ತೆರೆದು ಅರ್ಜಿಗಳನ್ನು ವಿತರಿಸಲಿ ಎಂದು ಸಾಲಿನಲ್ಲಿ ನಿಂತು ರೋಸಿ ಹೋಗಿರುವವರು ಮನವಿ ಮಾಡಿದ್ದಾರೆ.