ಚಿತ್ರದುರ್ಗ:
ವಾಲ್ಮೀಕಿ ಜನಾಂಗವಷ್ಟೆ ಅಲ್ಲ ಬೇರೆ ಜನಾಂಗಕ್ಕೂ ಮೀಸಲಾತಿ ಕೊಟ್ಟ ಕೀರ್ತಿ ಎಲ್.ಜಿ.ಹಾವನೂರ್‍ಗೆ ಸಲ್ಲುತ್ತದೆ. ಹಾಗಾಗಿ ಹಿಂದುಳಿದವರ ಗ್ರಂಥವೆಂದರೆ ಹಾವನೂರ್ ವರದಿ ಎಂದರೆ ತಪ್ಪಾಗಲಾರದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅಭಿಪ್ರಾಯಪಟ್ಟರು.ಚಿತ್ರದುರ್ಗ ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ದಿ ಮತ್ತು ಸಾಂಸ್ಕೃತಿಕ ಸಂಘದಿಂದ ತ.ರಾ.ಸು.ರಂಗಮಂದಿರದಲ್ಲಿ ಬುಧವಾರ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಬರದ ಜಿಲ್ಲೆ ಚಿತ್ರದುರ್ಗ ಮುಂದುವರೆಯಬೇಕಾದರೆ ಶಿಕ್ಷಣವೊಂದೆ ಅಸ್ತ್ರವಾಗಬೇಕು. 1972 ರಲ್ಲಿ ಡಿ.ದೇವರಾಜ ಅರಸು ರಾಜ್ಯದ ಮುಖ್ಯಮಂತ್ರಿಯಾಗದಿದ್ದರೆ ಹಿಂದುಳಿದ ವರ್ಗಗಳ ನಾಯಕರಾಗುತ್ತಿರಲಿಲ್ಲ. ನಾಯಕ ಜನಾಂಗದವರಾಗಿದ್ದ ಎಲ್.ಜಿ.ಹಾವನೂರ್ ಅರಸುರವರ ಬೆಂಲದಿಂದ ಮುನ್ನುಗ್ಗಿ ಕೆಲಸ ಮಾಡಿ ಸರ್ಕಾರಕ್ಕೆ ಹಾವನೂರ್ ವರದಿ ಸಲ್ಲಿಸಿದ್ದರ ಫಲವಾಗಿ ಇಂದು ನೀವುಗಳೆಲ್ಲಾ ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದರು.
ದಕ್ಷಿಣ ಆಫ್ರಿಕಾದವರು ಸಂವಿಧಾನವನ್ನು ಬರೆಯುವಾಗ ಎಲ್.ಜಿ.ಹಾವನೂರ್‍ರವರನ್ನು ಕರೆಸಿಕೊಂಡಿದ್ದರು ಎನ್ನುವುದು ಹೆಮ್ಮೆಯ ವಿಷಯ. ಹಳ್ಳಿಗಾಡಿನ ಮಕ್ಕಳು ಸಾಕಷ್ಟು ಪ್ರತಿಭಾವಂತರಿದ್ದರೆ. ಅವಕಾಶ ಸಿಗದೆ ಕೆಲವೊಮ್ಮೆ ಶಿಕ್ಷಣದಿಂದ ವಂಚಿತರಾಗುವುದುಂಟು. ಹಿಂದುಳಿದವರಲ್ಲಿಯೂ ಪ್ರಜ್ಞೆ ಮೂಡಿರುವುದರಿಂದ ಹೆಚ್ಚು ಹೆಚ್ಚು ಮಂದಿ ಪಿ.ಹೆಚ್.ಡಿ. ಪಡೆದುಕೊಳ್ಳುತ್ತಿದ್ದಾರೆ. ಸಮಾಜ ಹಾಗೂ ಸರ್ಕಾರದಿಂದ ಅನುಕೂಲ ಪಡೆದು ಉನ್ನತ ಹುದ್ದೆಗೆ ಹೋದ ಮೇಲೆ ಜನಾಂಗವನ್ನು ಮರೆಯಬೇಡಿ ಎಂದು ನಾಯಕ ಸಮುದಾಯಕ್ಕೆ ಕರೆ ನೀಡಿದ ಶಾಸಕರು ರಾಜ್ಯ ಸರ್ಕಾರ ನಾಯಕ ಜನಾಂಗಕ್ಕೆ ನೀಡುತ್ತಿರುವ ಶೇ.ಮೂರರಷ್ಟು ಮೀಸಲಾತಿಯನ್ನು ಶೇ.ಏಳುವರೆಗೆ ಹೆಚ್ಚಿಸುವಂತೆ ಒತ್ತಾಯಿಸಿದರು.
ಚಿತ್ರದುರ್ಗ ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ದಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ.ಹೆಚ್.ಗುಡ್ಡದೇಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಆದಿವಾಸಿ ಬುಡಕಟ್ಟು ನಾಯಕ ಸಮಾಜ ಅತ್ಯಂತ ನೊಂದ ಸಮುದಾಯವಾದರೂ ಇತಿಹಾಸದಲ್ಲಿ ತನ್ನದೆ ಆದ ಹೆಜ್ಜೆ ಗುರುತುಗಳನ್ನು ಬಿಟ್ಟಿದೆ. ನಾಯಕ, ವಾಲ್ಮೀಕಿ, ಬೇಡ, ತಳವಾರ ಹೀಗೆ ಬುಡಕಟ್ಟು ಸಂಸ್ಕೃತಿಯುಳ್ಳ ನಮ್ಮ ಜನಾಂಗ ರಾಜ್ಯದಲ್ಲಿ 68 ಲಕ್ಷಕ್ಕೂ ಹೆಚ್ಚಿದೆ. ಅನೇಕ ಸಮಸ್ಯೆ ಸವಾಲುಗಳಿರುವುದರಿಂದ ನಾಯಕ ಜನಾಂಗವನ್ನು ಜಾಗೃತಿಗೊಳಿಸುವುದಕ್ಕಾಗಿ ಪ್ರತಿ ವರ್ಷವೂ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡು ಸಾಧಕರುಗಳನ್ನು ಸನ್ಮಾನಿಸುವ ಕೆಲಸ ಮಾಡುತ್ತಿದ್ದೇವೆ.
ಎಲ್.ಜಿ.ಹಾವನೂರ್‍ರವರ ವರದಿಯಿಂದ ನಮಗೆ ಮೀಸಲಾತಿ ಸೌಲಭ್ಯ ಸಿಕ್ಕಿದೆ. ರಾಜ್ಯ ಸರ್ಕಾರ ಶೇ.3 ರಷ್ಟು ಮೀಸಲಾತಿಯನ್ನು ಶೇ.7.5 ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿದರು.ಚಳ್ಳಕೆರೆ ಶಾಸಕ ಟ,ರಘುಮೂರ್ತಿ,ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್, ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ತಾಲೂಕು ನಾಯಕ ಸಮಾಜದ ಅಧ್ಯಕ್ಷ ಬಿ.ಕಾಂತರಾಜ್, ಮದಕರಿನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಸಂದೀಪ್, ಚಿತ್ರದುರ್ಗ ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ದಿ ಹಾಗೂ ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷ ಡಾ.ಎನ್.ಬಿ.ಪ್ರಹ್ಲಾದ್, ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲದ ಹಿರಿಯ ಉಪನಿರ್ದೇಶಕ ಸಿ.ಜಿ.ಶ್ರೀನಿವಾಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಪಾಲಾಕ್ಷ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಕೆ.ಪಿ.ಮಧುಸೂದನ್, ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲರಾದ ಟಿ.ಎಲ್.ಸುಧಾಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಕೆ.ನಾಗರಾಜು, ಸಹಾಯಕ ಅಭಿಯಂತರುಗಳಾದ ರವಿಕುಮಾರ್, ಬಸವರಾಜ ಟಿ.ಗೊರವರ್, ಜಿಲ್ಲಾ ವಾಲ್ಮೀಕಿ ನಾಯಕ ನೌಕರರ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ಪಿ.ಕೆ.ಸದಾನಂದ, ವಿಷಯ ಪರಿವೀಕ್ಷಕ ಹೆಚ್.ಗೋವಿಂದಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಿ.ಬಿ.ಮಹಂತೇಶ್ ಸೇರಿದಂತೆ ನಾಯಕ ಜನಾಂಗದ ಮುಖಂಡರು ವೇದಿಕೆಯಲ್ಲಿದ್ದರು.
ಐ.ಎ.ಎಸ್.ಸಾಧಕ ನಾಯಕ ಜನಾಂಗದ ಡಿ.ಶ್ರೀಕಾಂತ್, ಡಿ.ವೈ.ಎಸ್ಪಿ.ತಿಪ್ಪೇಸ್ವಾಮಿ, ಭದ್ರಾಮೇಲ್ದಂಡೆ ಯೋಜನೆ ವಲಯ ವಿಶ್ವೇಶ್ವರಯ್ಯ ಜಲನಿಗಮದ ನಿವೃತ್ತ ಮುಖ್ಯ ಇಂಜಿನಿಯರ್ ಆರ್.ಚಲುವರಾಜ್ ಹಾಗೂ ಬರಗೇರಮ್ಮ ವಿದ್ಯಾಸಂಸ್ಥೆಯ ಜಿ.ಚಿನ್ನಪ್ಪ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
