ಚಳ್ಳಕೆರೆ
ತಾಲ್ಲೂಕಿನಾದ್ಯಂತ ರೈತ ಸಮುದಾಯಕ್ಕೆ ಆದ ಬೆಳೆ ನಷ್ಟ ಪರಿಹಾರ ನೀಡುವಂತೆ, ಸರ್ಕಾರ ವಿಫಲತೆ, ಖಾಸಗಿ ಬೆಳೆ ವಿಮಾ ಕಂಪನಿಗಳು ರೈತರಿಗೆ ಬೆಳೆ ವಿಮೆ ಪಾವತಿಸಲು ನಿರ್ಲಕ್ಷ್ಯೆ, ಶೇಂಗಾ ಬೆಳೆ ನಷ್ಟ ಪರಿಹಾರ ಬಿಡುಗಡೆಗೆ ಸರ್ಕಾರದ ಮೀನಾಮೇಷ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗುರುವಾರ ಇಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಿ ಕಚೇರಿಗೆ ಬೀಗ ಹಾಕುವುದಾಗಿ ತಿಳಿಸಿತ್ತು.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶಂಕರಪ್ಪ ಮುಂತಾದವರ ನೇತೃತ್ವದಲ್ಲಿ ನೂರಾರು ರೈತರು ಗುರುವಾರ ಬೆಳಗ್ಗೆ ಇಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ದಾವಿಸಿ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದರು. ಸರ್ಕಾರದ ಇದುವರೆಗೂ ರೈತರಿಗೆ ನೀಡಬೇಕ ಶೇಂಗಾ ಬೆಳೆ ನಷ್ಟವೂ ಸೇರಿದಂತೆ ಯಾವುದೇ ಪರಿಹಾರ ನೀಡಿಲ್ಲ, ರೈತರ ಸಾಲ ಮನ್ನಾ ವಿಚಾರದಲ್ಲೂ ಸಹ ಸರ್ಕಾರ ದ್ವಂದ್ವ ನೀತಿಯನ್ನು ಅನುಸರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ನುಲೆನೂರು ಎಂ.ಶಂಕರಪ್ಪ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ರೈತರ ಸಮಸ್ಯೆಗಳ ಬಗ್ಗೆ ಗಂಭೀರ ಚಿಂತನೆಯನ್ನೇ ನಡೆಸುವಲ್ಲಿ ಸರ್ಕಾರ ವಿಫಲವಾಗಿದೆ. ಪ್ರಸ್ತುತ ಹತ್ತು ತಿಂಗಳಿನಿಂದ ಆಡಳಿತ ನಡೆಸುತ್ತಿರುವ ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರ ಸಾಲಮನ್ನಾ ಸಂಪೂರ್ಣ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಅವರ ಎಲ್ಲಾ ಭರವಸೆ ಹುಸಿಯಾಗಿದೆ. ರೈತರ ಸಾಲ ಮನ್ನಾಕ್ಕೆ ಸಂಬಂಧಪಟ್ಟಂತೆ ಇದುವರೆಗೂ ಹೆಚ್ಚಿನ ಪ್ರಮಾಣದ ಹಣ ರೈತರ ಖಾತೆಗೆ ಜಮಾ ಆಗಿಲ್ಲ. ರೈತರನ್ನು ಶೋಷಿಸುವ ನಿರ್ಲಕ್ಷಿಸುವ ಪ್ರವೃತ್ತಿಯನ್ನು ಈ ಸರ್ಕಾರವೂ ಸಹ ಮುಂದುವರೆಸಿದೆ. ಈ ಹಿನ್ನೆಲೆಯಲ್ಲಿ ಬರುವ ಏ.18ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ರೈತ ಸಂಘ ಚುನಾವಣೆ ಮತದಾನವನ್ನು ಬಹಿಷ್ಕರಿಸುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು.
ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ತುಷಾರ್ ಬಿ.ಹೊಸೂರ್, ಉಪ ಕೃಷಿ ನಿದೇಶಕಿ ಸುಜಾತರೆಡ್ಡಿ, ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಎಲ್.ಈಶ್ವರಪ್ರಸಾದ್ ರೈತ ಪ್ರತಿನಿಧಿಗಳೊಡನೆ ಚರ್ಚೆ ನಡೆಸಿ ರೈತರ ಸಬ್ಸಿಡಿ ಹಣ ಹಂತ ಹಂತವಾಗಿ ಖಾತೆಗೆ ಜಮಾವಾಗುತ್ತಿದ್ದು, ಚುನಾವಣೆ ಹಿನ್ನೆಲೆಯಲ್ಲಿ ವಿಳಂಬವಾಗಿದೆ.
ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಆದಷ್ಟು ಬೇಗ ರೈತರಿಗೆ ನೀಡಬೇಕಾದ ಶೇಂಗಾ ಬೆಳೆ ನಷ್ಟ ಹಾಗೂ ಇತರೆ ಸಬ್ಸಿಡಿ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿಸುವ ಭರವಸೆ ನೀಡಿದ ನಂತರ ಮುಷ್ಕರವನ್ನು ವಾಪಾಸ್ ಪಡೆದರು. ಈ ಸಂದರ್ಭದಲ್ಲಿ ಪ್ರಗತಿಪರ ರೈತ ಆರ್.ಎ.ದಯಾನಂದ, ಒ.ಟಿ.ತಿಪ್ಪೇಸ್ವಾಮಿ, ಬಿ.ಎಚ್.ತಿಪ್ಪೇಸ್ವಾಮಿ, ಬಿ.ಟಿ.ನಾರಾಯಣಪ್ಪ, ಮಂಜುನಾಥ, ಕ್ಯಾತಣ್ಣ, ರಾಜಣ್ಣ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.