ದಾವಣಗೆರೆ:
ಆಧುನಿಕತೆಯ ಭರಾಟೆಯಲ್ಲಿ ಮಾನವೀಯ ಮೌಲ್ಯಗಳು ಕುಸಿತವಾಗುತ್ತಿವೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಸ್. ಮಂಜುನಾಥ ಕುರ್ಕಿ ವಿಷಾದ ವ್ಯಕ್ತಪಡಿಸಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಎಆರ್‍ಎಂ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ ಜೀವನ ಮೌಲ್ಯಗಳನ್ನು ಮಕ್ಕಳಿಗೆ ಕಲಿಸಿಕೊಡಬೇಕಾದ ಅವಶ್ಯಕತೆ ಇದೆ ಎಂದರು.
ಪಾಲಕರು ಕಷ್ಟಪಟ್ಟು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಅವರಿಗೆ ಒಳ್ಳೆಯ ಉದ್ಯೋಗ ದೊರೆಯುವಂತೆ ಮಾಡುತ್ತಾರೆ. ಆದರೆ, ಬೆಳೆದ ನಂತರ ಕೆಲವು ಕುಟುಂಬಗಳಲ್ಲಿ ಮಕ್ಕಳು ತಂದೆ, ತಾಯಿಯನ್ನು ವೃದ್ಧಾಶ್ರಮಕ್ಕೆ ಕಳಿಸುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿಯಾಗಿದೆ ಎಂದರು.
ಕರ್ನಾಟಕದ ಅರಸು ಮನೆತನಗಳ ಕೊಡುಗೆ’’ ವಿಷಯ ಕುರಿತು ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಎಸ್.ಟಿ. ಶಾಂತಗಂಗಾಧರ್, ಕರ್ನಾಟಕದಲ್ಲಿ ನೂರಕ್ಕು ಹೆಚ್ಚು ಅರಸು ಮನೆತನಗಳು ತಮ್ಮದೇ ಆದ ಕೊಡುಗೆಗಳನ್ನು ನೀಡಿವೆ. ಅಂತಹ ಪ್ರಮುಖ ಅರಸು ಮನೆತನಗಳಲ್ಲಿ 22ಕ್ಕೂ ಹೆಚ್ಚು ಅರಸು ಮನೆತನಗಳ ಆಡಳಿತಾತ್ಮಕ, ಸಾಂಸ್ಕತಿಕ, ಸಾಹಿತ್ಯಿಕ, ವಾಸ್ತುಶಿಲ್ಪ ಹಾಗೂ ಕನ್ನಡ ನಾಡುನುಡಿಯ ಅಭಿವೃದ್ಧಿಗೆ ಶ್ರಮಿಸಿವೆ ಎಂದು ಹೇಳಿದರು.
ಪ್ರಶಸ್ತಿ ವಿತರಿಸಿದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ವಾಮದೇವಪ್ಪ, ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಿ.ಹೆಚ್.ಪ್ಯಾಟಿ ಮಾತನಾಡಿದರು. ವೇದಿಕೆಯಯಲ್ಲಿ ಬಡಾವಣೆಯ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ವಿಟ್ಲಾಪುರದ ರುದ್ರಪ್ಪ, ಕನ್ನಡ ವಿಭಾಗದ ಡಿ. ಆಂಜಿನಪ್ಪ ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿಗಳಾದ ಸಾಲಿಗ್ರಾಮ ಗಣೇಶ್ ಶೆಣೈ, ಶ್ರೀಮತಿ ಎಸ್.ಎಂ.ಮಲ್ಲಮ್ಮ, ನಿರ್ದೇಶಕರುಗಳಾದ ಬಿ.ಎಂ. ಮುರುಗೆಯ್ಯ, ಎಂ.ಷಡಾಕ್ಷರಪ್ಪ ಬೇತೂರು, ಬಿ.ಎಸ್. ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.
ಕು| ಅಪ್ಸಾನಾಬಾನು ಪ್ರಾರ್ಥಿಸಿದರು. ಪ್ರಾಧ್ಯಾಪಕ ಡಿ.ಎನ್.ಮೌನೇಶ ಸ್ವಾಗತಿಸಿದರು. ಕಾಡಜ್ಜಿ ಶಿವಪ್ಪ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
