ಹಿರಿಯೂರು :
ನೆಮ್ಮದಿ ಜೀವನಕ್ಕೆ ಆಧ್ಯಾತ್ಮ ಚಿಂತನೆಗಳು ರಹದಾರಿ ಇದ್ದಂತೆ, ಮನುಷ್ಯನಿಗೆ ಧ್ಯಾನ ಹಾಗೂ ಆಧ್ಯಾತ್ಮಚಿಂತನೆ ಒಂದರಿಂದಲೇ ಜ್ಞಾನದ ಉನ್ನತಿ, ಜೀವನದಲ್ಲಿ ನೆಮ್ಮದಿ ದೊರೆಯುತ್ತದೆ ಎಂದು ಬ್ರಹ್ಮಕುಮಾರಿ ಗಾಯತ್ರಿ ತಿಳಿಸಿದರು.ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ವೃದ್ಧಾಪ್ಯದಲ್ಲಿ ಆರೋಗ್ಯ ನಿರ್ವಹಣೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯೋಗ ಮತ್ತು ಧ್ಯಾನದಿಂದ ಕೋಪ, ದ್ವೇಷ, ಮಾನಸಿಕ ಒತ್ತಡ ಶಮನವಾಗಿ ಸದ್ಗುಣ ಜಾಗೃತಗೊಳ್ಳುತ್ತದೆ. ದುಶ್ಚಟಗಳಿಂದ ದೂರವಿರಲು ಆಧ್ಯಾತ್ಮ ಪ್ರತಿಯೊಬ್ಬರಿಗೂ ಅತ್ಯಗತ್ಯ ಎಂಬುದಾಗಿ ಅವರು ಹೇಳಿದರು. ನಗರಸಭೆ ಸದಸ್ಯ ಜಿ.ಪ್ರೇಮ್‍ಕುಮಾರ್ ಮಾತನಾಡಿ, ಪೂರ್ವಜರು ಧ್ಯಾನ, ಆಧ್ಯಾತ್ಮ ಹಾಗೂ ಧಾರ್ಮಿಕ ಸಂಪ್ರದಾಯಗಳನ್ನು ಇಂದಿನ ಪೀಳಿಗೆಗೆ ಕೊಡುಗೆ ನೀಡಿದ್ದಾರೆ ಅವರು ತೋರಿಸಿದ ಮಾರ್ಗದಲ್ಲಿ ನಾವು ಹೆಜ್ಜೆ ಹಾಕುವ ಮೂಲಕ ಜೀವನವನ್ನು ಸುಖಮಯವಾಗಿ ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.
ಡಾ. ಮಹೇಶ್ ಹೇಮಾದ್ರಿ ಮಾತನಾಡಿ, ವೃದ್ಧಾಪ್ಯದಲ್ಲಿ ಜ್ಞಾಪಕಶಕ್ತಿ ಕೊರತೆ ಕಾಡುವುದು ಸಹಜ. ಅಧ್ಯಾತ್ಮದ ಮೊರೆಹೋದರೆ ವೃದ್ಧಾಪ್ಯ ಜೀವನವನ್ನು ಆನಂದಮಯವಾಗಿ ಕಳೆಯಬಹುದು ಎಂದರು. ಇದೇ ಸಂದರ್ಭದಲ್ಲಿ ಮನೆಯ ಪರಿಸರ, ಭೋಜನದ ಮಹತ್ವ, ವ್ಯಾಯಾಮ, ರಾಜಯೋಗದ ಕುರಿತು ವಿವಿಧ ಗೋಷ್ಠಿಗಳನ್ನು ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಡಾ.ಹನುಮಂತ ಭಾರಶೆಟ್ಟಿ, ಹಿರಿಯ ನಾಗರಿಕರಿಗೆ ವಿಶೇಷ ವ್ಯಾಯಾಮ ತರಬೇತಿ ನೀಡಿದರು. ನೌಕರರ ಸಂಘದ ವೀರಣ್ಣ ಮಂಜುನಾಥ್, ಗುಡ್ಡಪ್ಪ ಇತರರು ಉಪಸ್ಥಿತರಿದ್ದರು.