ಬೆಂಗಳೂರು :
ಎರಡು ವರ್ಷಗಳಿಗೊಮ್ಮೆ ನಡೆಯುವ ದೇಶದ ಪ್ರತಿಷ್ಠಿತ ವೈಮಾನಿಕ ಪ್ರದರ್ಶನವಾಗಿರುವ ಏರೋ ಇಂಡಿಯಾ- 2019 ಗೆ ಸಿದ್ಧತೆಗಳು ಆರಂಭಗೊಂಡಿದ್ದು, ಫೆ.20ರಿಂದ 24ರ ವರೆಗೆ ನಡೆಯಲಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ 12ನೇ ಆವೃತ್ತಿಯ ಕಾರ್ಯಕ್ರಮದ ನಿರ್ವಹಣೆ ಹೊಣೆಗಾರಿಕೆಯನ್ನು ಎಚ್‌ಎಎಲ್ ವಹಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ವಸ್ತು ಪ್ರದರ್ಶನಕ್ಕೆ ಅವಶ್ಯವಿರುವ ಮಳಿಗೆಗಳು, ವಿಐಪಿಗಳು ಕುಳಿತು ವೈಮಾನಿಕ ಪ್ರದರ್ಶನಕ್ಕೆ ಬೇಕಿರುವ ಆಸನಗಳ ವ್ಯವಸ್ಥೆ, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ರಕ್ಷಣಾ ಸಿಬ್ಬಂದಿ, ರನ್‌ವೇಗಳ ಸಿದ್ಧತೆ, ವಿಚಾರ ಸಂಕಿರಣಗಳ ನಡೆಸುವುದಕ್ಕೆ ತಯಾರಿ ಸೇರಿದಂತೆ ಹತ್ತಾರು ರೀತಿಯಲ್ಲಿ ರಕ್ಷಣಾ ಇಲಾಖೆಯು ವೈಮಾನಿಕ ಪ್ರದರ್ಶನಕ್ಕೆ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ.
ಫೆಬ್ರವರಿ 20ರ ಬೆಳಗ್ಗೆ ಏರೋ ಶೋ ಹಾಗೂ ವಸ್ತು ಪ್ರದರ್ಶನಕ್ಕೆ ಚಾಲನೆ ಸಿಗಲಿದೆ. ಫೆ.24ರ ವರೆಗೂ ವೈಮಾನಿಕ ಹಾರಾಟ ಮತ್ತು ಪ್ರದರ್ಶನ ನಡೆಯಲಿದೆ. ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಮತ್ತು ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ವಿಮಾನ ಹಾರಾಟ ಪ್ರದರ್ಶನ ಇರಲಿದೆ.
ಫೆ.20ರಿಂದ 24ರ ವರೆಗೂ ನಿರಂತರವಾಗಿ ವಿಚಾರ ಸಂಕಿರಣ, ವ್ಯವಹಾರ ಸಭೆ ಹಾಗೂ ವಸ್ತು ಪ್ರದರ್ಶನ ನಡೆಯಲಿದೆ. ಫೆ.21ರಂದು ಡ್ರೋಣ್ ಒಲಿಂಪಿಕ್ಸ್, ಬಾಹ್ಯಾಕಾಶ ಕ್ಷೇತ್ರದ ನವೋದ್ಯಮಗಳ ಚರ್ಚೆ, ಫೆ.22ರಂದು ನಾಗರಿಕ ಮತ್ತು ರಕ್ಷಣಾ ಕ್ಷೇತ್ರದಲ್ಲಿನ ವೈಮಾನಿಕ ತಂತ್ರಜ್ಞಾನ ಕುರಿತು ‘ತಂತ್ರಜ್ಞಾನ ದಿನ’ ನಡೆಸಲಾಗುತ್ತದೆ. ಫೆ.23ರಂದು ದೇಶ ಹಾಗೂ ವಿದೇಶಿ ವೈಮಾನಿಕ ವಲಯದಲ್ಲಿ ಮಹಿಳೆಯರ ಕೊಡುಗೆ ಕುರಿತ ಕಾರ್ಯಕ್ರಮಕ್ಕೆ ಮೀಸಲಿಡಲಾಗಿದೆ. ವೈಮಾನಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಿಳೆಯರು ಭಾಗವಹಿಸಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ