ತೋವಿನಕೆರೆ
ಗಾಂಧೀಜಿಯ ಅಹಿಂಸೆ, ಸತ್ಯನಿಷ್ಠೆ, ಏಕಾಗ್ರತೆ, ಸಮಸ್ಯೆಗಳನ್ನು ಎದುರಿಸುವ ಮನೋಶಕ್ತಿಯನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಚಿಕ್ಕನಾಯ್ಕನಹಳ್ಳಿ ಶೃಂಗಾರ ಪ್ರಕಾಶನ ಸಂಸ್ಥೆಯ ಎಂ.ವಿ. ನಾಗರಾಜರಾವ್ ತಿಳಿಸಿದರು.
ತೋವಿನಕೆರೆ ಸಮೀಪದ ಕುರಂಕೋಟೆಯ ಕೆ.ಎಂ.ಎಂ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಬಾ- ಬಾಪು 150 ನೆ ಹುಟ್ಟಹಬ್ಬದ ವರ್ಷಾಚರಣೆ ಅಂಗವಾಗಿ ಗಾಂಧೀಜಿ-ಪರಿಸರ ಮತ್ತು ಕೃಷಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಕಳೆದ ವರ್ಷಕ್ಕೆ ಗಾಂಧಿ ಹುಟ್ಟಿ 150 ವರ್ಷವಾಯಿತು. ಒಂದು ವರ್ಷ ಕಾಲ ಅವರ ನೆನಪಿನಲ್ಲಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ವಿಷಯದ ಬಗ್ಗೆ ಉಪನ್ಯಾಸ ನೀಡಿದ ಸಾಹಿತಿ ಮತ್ತು ಪ್ರಗತಿ ಪರ ಕೃಷಿಕ ಶಿವನಂಜಯ್ಯ ಬಾಳೆಕಾಯಿ, ಪರಿಸರ ಸಂರಕ್ಷಣೆ ಮಾಡುವ ಮೂಲಕ ಜಗತ್ತನ್ನು ಸಂರಕ್ಷಿಸುವ ಶಕ್ತಿ ರೈತನಿಗೆ ಮಾತ್ರವಿದೆ ಎಂಬುದು ಗಾಂಧಿಯವರ ನಂಬಿಕೆಯಾಗಿತ್ತು. ರೈತನಿಗೂ ಜೀವ ಸಂಕುಲಕ್ಕೂ ಅವಿನಾಭವ ಸಂಬಂಧವಿದೆ. ಪರಿಸರವೆಂದರೆ ಮರ, ಗಿಡ, ಪ್ರಾಣಿ, ಪಕ್ಷಿ ಸೇರಿದಂತೆ ಎಲ್ಲ ವನ್ನು ಒಳಗೊಂಡಿದೆ. ಅವುಗಳನ್ನು ರಕ್ಷಿಸಿ ಬೆಳೆಸುವ ಹೊಣೆ ಹೊರ ಬೇಕಾಗುತ್ತದೆ. ರೈತ ರಾಸಾಯನಿಕ ಗೊಬ್ಬರ, ಔಷಧಿಗಳನ್ನು ಉಪಯೋಗಿಸುವ ಮೂಲಕ ಕ್ರೂರಿಯಾಗುತ್ತಿದ್ದಾನೆ. ಮಣ್ಣು ನಿರ್ಜೀವ ವಸ್ತು ಅಲ್ಲ. ಮಣ್ಣಿನಲ್ಲಿ ಲಕ್ಷಾಂತರ ಸೂಕ್ಷ್ಮಾಣುಗಳು ಜೀವಿಸುತ್ತಿವೆ. ಮಿತಿ ಇಲ್ಲದ ರಾಸಾಯನಿಕ ಗೊಬ್ಬರ ಬಳಕೆಯಿಂದ ಸೂಕ್ಷ್ಮಾಣುಗಳು ಸತ್ತು ನಮ್ಮನ್ನು ಸಾಯುವ ಸ್ಥಿತಿಗೆ ತಂದು ನಿಲ್ಲಿಸಿದೆ. ಗಾಂಧಿ ಹೇಳಿದ್ಧು ಜೀವ ಜಗತ್ತನ್ನು ಒಳಗೊಂಡ ಕೃಷಿ ಎಂದು ತಿಳಿಸಿದರು.
ಮಾನವನ ದುರಾಸೆಯಿಂದ ಆಹಾರ ಔಷಧಿಯಾಗುವ ಬದಲು ವಿಷವಾಗುತ್ತಿದೆ. ಕೃಷಿ ಯಾವತ್ತ್ತೂ ನಮ್ಮ ಒಳಗಿನ ಉಳುಮೆಯಾಗಬೇಕು. ರೈತರು ಸೇವಾ ಮನೋಭಾವ ಬೆಳೆಸಿಕೊಂಡು ಅದರ್ಶ ವ್ಯಕ್ತಿಗಳಾಗಬೇಕು ಎಂಬುದು ಗಾಂಧೀಜಿಯವರ ಆಸೆಯಾಗಿತ್ತು. ಗಾಂಧೀಜಿಯವರು ಗ್ರಾಮೀಣ ಭಾರತದ ಅಭಿವೃದ್ಧಿಯ ಬಗ್ಗೆ ಹೆಚ್ಚು ಹೆಚ್ಚು ಮಾತನಾಡುತ್ತಿದ್ದರು. ರೈತರು ಸ್ಥಳೀಯ ವಾತಾವರಣಕ್ಕೆ ಹೊಂದುವ ಬೆಳೆಗಳನ್ನು ಬೆಳೆಯುವುದರ ಬಗ್ಗೆ ಗಮನ ನೀಡಬೇಕು. ಜಿಲ್ಲೆಯಲ್ಲಿ ಬೀಳುತ್ತಿರುವ ಮಳೆಗೆ ಅನುಗುಣವಾಗಿ ಮರ ಅಧಾರಿತ ಕೃಷಿ ಮಾಡಬೇಕು. ಹುಣಸೆ, ಮಾವು, ಸೀಗೆ, ನೆಲ್ಲಿ, ನೇರಳೆ ಸೇರಿದಂತೆ ಭೂಮಿಯಲ್ಲಿ ಆಳವಾಗಿ ಬೇರು ಬೀಡುವ ಕೃಷಿಯು ನಮಗೆ ಸೂಕ್ತ ಎಂದು ತಿಳಿಸಿ, ಮಳೆ ಕೊಯ್ಲು ಮತ್ತು ನೀರಿನ ಮಿತ ಬಳಕೆ ಬಗ್ಗೆ ಮಾಹಿತಿ ನೀಡಿದರು.
ಪರಿಸರ ಲೇಖಕ ತೋವಿನಕೆರೆ ಟಿ.ಎಸ್.ವಿವೇಕಾನಂದ ಮಾತನಾಡಿ, ದೇಶದ ಮೊದಲ ಪರಿಸರವಾದಿಯೆಂದರೆ ಮಹಾತ್ಮ ಗಾಂಧಿ. ಪರಿಸರವೆಂದರೆ ಪ್ರಕೃತಿಯ ಮಡಿಲಲ್ಲಿರುವ ಜೀವ ಮತ್ತು ಜೀವವಿಲ್ಲದ ಎಲ್ಲ್ಲವನ್ನು ಒಳಗೊಂಡಿದೆ ಎಂದು ಅಭಿಪ್ರಾಯ ಪಟ್ಟರು.
ಆದರ್ಶ ಪರಿಸರ ಟ್ರಸ್ಟ್ ಅಧ್ಯಕ್ಷ ಡಾ. ಸಿದ್ದಗಂಗಯ್ಯ ಹೊಲತಾಳ್, ಗಾಂಧೀಜಿಯ 150 ನೆ ವರ್ಷಾಚರಣೆಯ ಅಂಗವಾಗಿ ತೋವಿನಕೆರೆ ಸುತ್ತಮುತ್ತಲಿನ ಹತ್ತು ಪ್ರೌಢಶಾಲೆಗಳಲ್ಲಿ ಗಾಂಧೀಜಿ ನೆನಪಿನ ಕಾರ್ಯಕ್ರಮ ನಡೆಸಲಾಗುತ್ತ್ತಿದೆ ಎಂದರು.
ಬುಕ್ಕಪಟ್ಟಣ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮೀ, ಅಭಿವೃದ್ಧಿ ಅಧಿಕಾರಿ ಎನ್ ಸುನೀಲ್ ಕುಮಾರ್, ಎಸ್ ಡಿ ಎಂ ಸಿ ಅಧ್ಯಕ್ಷ ಗೋಪಾಲಯ್ಯ, ಮುಖ್ಯ ಶಿಕ್ಷಕರುಗಳಾದ ಜಿ.ಎಸ್.ರವೀಂದ್ರ, ಶಿವಕುಮಾರ್ ಸ್ವಾಮಿ, ಲಕ್ಷ್ಮೀಪುತ್ರ, ಎನ್.ಎಸ್.ಉಮೇಶ್ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮಿ ವಹಿಸಿದ್ದರು. ಕುರಂಕೋಟೆ ಮತ್ತು ಬುಕ್ಕಪಟ್ಟಣ ಎರಡೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ “ಗಾಂಧಿ ಸೂಕ್ತಿಗಳು’’ ಪುಸ್ತಕವನ್ನು ಹಂಚಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








